Malenadu Mitra
ರಾಜ್ಯ ಶಿವಮೊಗ್ಗ

ಪತ್ರಿಕೆ ಓದುವುದರಿಂದ ಜ್ಞಾನದ ದಾಹ ನೀಗುವುದು : ತಹಸೀಲ್ದಾರ್ ಹುಸೇನ್, ಸೊರಬ ತಾಲೂಕು ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ

ಸೊರಬ,ಜು ೧೨: ಜನತೆ ಪತ್ರಿಕೆಗಳಲ್ಲಿನ ಒಳ್ಳೆಯ ವಿಷಯಗಳ ಗ್ರಹಿಸಿ ಮೈಗೂಡಿಸಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಹುಸೇನ್ ಸರಕಾವಸ್ ಹೇಳಿದರು.
ತಾಲೂಕಿನ ಆನವಟ್ಟಿ ಸಮೀಪದ ಕೋಟಿಪುರದ ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತಾಲೂಕು ಪ್ರೆಸ್ ಟ್ರಸ್ಟ್ ಸೊರಬ ವತಿಯಿಂದ ಬುಧವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೈಜ್ಞಾನಿಕ ಚಿಂತನೆಯಿಂದ ವ್ಯಕ್ತಿಯ ಬೆಳವಣಿಗೆ ಸಾಧ್ಯ. ಪತ್ರಿಕೆಗಳನ್ನು ನಿರಂತರ ಓದುವುದರಿಂದ ಸಮಗ್ರ ಜ್ಞಾನ ಪಡೆಯಲು ಅನುಕೂಲವಾಗುತ್ತದೆ ಎಂದರು.

ಹಿರಿಯ ಪತ್ರಕರ್ತ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಖಡ್ಗಕ್ಕಿಂತ ಲೇಖನಿ ಹರಿತವಾಗಿದ್ದರೂ ಕೂಡ ಪ್ರಸ್ತುತ ದಿನಗಳಲ್ಲಿ ಲೇಖನಿಯಲ್ಲಿರುವ ಇಂಕು ಯಾವ ಬಣ್ಣದ್ದು ಎಂಬುದರ ಮೇಲೆ ಆ ಬರಹವನ್ನು ಸ್ವೀಕರಿಸಬೇಕೋ ಬೇಡವೋ ಎಂಬ ಚಿಂತನೆ ಮಾಡುವ ದಿನಗಳು ಎದುರಾಗಿವೆ. ಅಂದು ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಪತ್ರಿಕೋದ್ಯಮ ಇತ್ತು. ಇಂದು ಉದ್ಯಮವಾಗಿ ಮಾರ್ಪಟ್ಟಿದೆ. ಈ ನಡುವೆ ಪತ್ರಿಕೆ ವಿಶ್ವಾಸರ್ಹ ಮಾಧ್ಯಮವಾಗಿದ್ದರು ಮುಂದಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ ಒಪ್ಪುವ ಸಂದರ್ಭ ಬರುತ್ತದೆ. ಇಂದಿನ ಯುವ ಜನರಿಗೆ ಏನು ಬೇಕು ಎಂಬುದನ್ನು ಅರಿತು ಸುದ್ದಿ ನೀಡುವುದೇ ಸವಾಲ್ ಆಗಿದೆ ಎಂದ ಅವರು, ಪತ್ರಕರ್ತ ಮೊದಲು ಭ್ರಮೆಯಿಂದ ಹೊರಗೆ ಬಂದು, ಸಮಾಜಮುಖಿ ಲಹರಿಯಲ್ಲಿ ಸುದ್ದಿ ಬರೆಯಬೇಕು ಎಂದು ಹೇಳಿದರು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪಠ್ಯದ ಜತೆಗೆ ಪತ್ರಿಕೆಯ ಜ್ಞಾನವೂ ಮುಖ್ಯ. ಪತ್ರಿಕೆ ಓದುವುದರಿಂದ ಭಾಷಾ ಕಲಿಕೆ, ಪ್ರೌಢಿಮೆ ಹೆಚ್ಚಿಸಿಕೊಳ್ಳುವ ಜತೆಗೆ ಸಮಗ್ರ ಜ್ಞಾನ ಪಡೆಯಲು ಅನುಕೂಲವಾಗುತ್ತದೆ ಎಂದರು.
ಸಂಘ ಹಾಗೂ ಟ್ರಸ್ಟ್ ಅಧ್ಯಕ್ಷ ಟಿ.ರಾಘವೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಎಸ್.ಜಿ.ರಾಮಚಂದ್ರ ಪ್ರಾಸ್ತಾವಿಕ ಮಾತನಾಡಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಪತ್ರಕರ್ತ ನೀಲೇಶ್ ಸಮನೀ ಸ್ವಾಗತಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ್ ಭಟ್ ಭಾವೆ ವಂದಿಸಿ, ಶಿಕ್ಷಕ ಯಲ್ಲಪ್ಪ ನಿರೂಪಿಸಿದರು.

ಪೊಲೀಸ್ ವೃತ್ತ ನಿರೀಕ್ಷಕ ಎಲ್.ರಾಜಶೇಖರ್, ಎವರಾನ್ ಶಾಲೆ ಅಧ್ಯಕ್ಷ ಕಾರ್ತಿಕ್ ಎಂ.ಸಾವುಕಾರ್, ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿದರು.
ವೈದ್ಯರಾದ ಡಾ.ಪ್ರಭು ಸಾಹುಕಾರ್, ಡಾ.ಎಂ.ಕೆ.ಮಹೇಶ್, ಡಾ.ವಿನಯ್, ಪುರಸಭೆ ಮಾಜಿ ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್, ದೊಡ್ಡಾಟ ಕಲಾವಿದರ ಪರಮೇಶ್ವರಪ್ಪ ಕಾರೇಕೊಪ್ಪ, ಪ್ರಗತಿಪರ ರೈತ ಛತ್ರಪತಿಗೌಡ, ಕ್ರೀಡಾಪಟು ದೀಪಿಕಾ ಸುಣಗಾರ್, ಭರತನಾಟ್ಯ ಕಲಾವಿದೆ ಅಪೇಕ್ಷಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಸಂಪತ್ ಕುಮಾರ್, ಮುಖ್ಯಸ್ಥೆ ಚರಿತಾ ಕಾರ್ತಿಕ್, ಬಸವನಗೌಡ, ಖಲಂದರ್ ಸಾಬ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಶ್ರೀಪಾದ ಬಿಚ್ಚುಗತ್ತಿ, ಮಹೇಶ್ ಗೋಖಲೆ, ನೋಪಿ ಶಂಕರ್, ಕೆ.ಬಿ.ಸ್ವಾಮಿ, ಜಗನ್ನಾಥಪ್ಪ, ಎಂ.ಕೆ.ಮೋಹನ್, ವಾಣಿ, ವಾಸು, ಪುರುಷೋತ್ತಮ್ ಸೇರಿದಂತೆ ರೋಟರಿ ಕ್ಲಬ್ ಪದಾಧಿಕಾರಿಗಳು, ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳು, ಇತರರಿದ್ದರು.

ನಾವು ಮನುಷ್ಯನ ರೋಗ ಗುರುತಿಸಿ ಚಿಕಿತ್ಸೆ ನೀಡುತ್ತೇವೆ. ಪತ್ರಕರ್ತರು ಸಮಾಜದಲ್ಲಿನ ರೋಗ ಗುರುತಿಸಿ ಚಿಕತ್ಸೆ ನೀಡುತ್ತಾರೆ. ಹಾಗಾಗಿ ಇಬ್ಬರ ಕೆಲಸವೂ ಮಹತ್ವದ್ದು

ಡಾ.ಪ್ರಭು ಸಾಹುಕಾರ್, ತಾಲೂಕು ಆರೋಗ್ಯಾಧಿಕಾರಿ

Ad Widget

Related posts

ಆನೆ ದಾಳಿಗೆ ಕೃಷಿ ಕಾರ್ಮಿಕ ಬಲಿ

Malenadu Mirror Desk

ಸ್ಫೋಟ ಆರೋಪಿಗಳಿಗೆ ಜಾಮೀನು ನಿರಾಕರಣೆ

Malenadu Mirror Desk

ಮುಗಿದ ಪ್ರತಿಷ್ಠೆ ,ಇನ್ನು ಬಲಾಬಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.