ಶಿವಮೊಗ್ಗ: ೧೩: ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜು.೨೧ರಂದು ಬೆ.೧೧ ಗಂಟೆಗೆ ನರಗುಂದದ ವೀರಗಲ್ಲಿನ ಬಳಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರಗುಂದ ನವಲಗುಂದ ಘಟನೆ ನಡೆದು ೪೩ ವರ್ಷಗಳಾಗಿವೆ. ಇದರ ಅಂಗವಾಗಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸಲು ಮತ್ತು ಹೋರಾಟದ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಪ್ರಮುಖವಾಗಿ ಭೂಸುಧಾರಣಾ ಕಾಯಿದೆಯನ್ನು ರೈತಸಂಘ ವಿರೋಧಿಸುತ್ತದೆ. ರೈತರಲ್ಲದವರು ಭೂಮಿ ಖರೀದಿ ಮಾಡಿದರೆ ಕೃಷಿ ಭೂಮಿ ರೈತರ ಕೈತಪ್ಪಲಿದೆ. ಇದರಿಂದ ಆಹಾರ ಭದ್ರತೆ ಕಾಡುತ್ತದೆ. ಆದ್ದರಿಂದ ಈ ಕಾಯಿದೆಯನ್ನು ವಾಪಾಸು ತೆಗೆದುಕೊಳ್ಳಬೇಕು. ಇದರ ಜೊತೆಗೆ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರಗಾಲ ಮತ್ತು ಅತಿವೃಷ್ಟಿಯನ್ನು ನಿಭಾಯಿಸುವಲ್ಲಿ ಸೋತಿವೆ. ಪರಿಹಾರವನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಜೊತೆಗೆ ರೈತವಿರೋಧಿ ಕಾಯಿದೆಗಳನ್ನು ಜಾರಿಗೆ ತರುತ್ತದೆ. ರೈತ ಸಮುದಾಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ಆದ್ದರಿಂದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದರು.
ಸರ್ಕಾರದ ಗ್ಯಾರಂಟಿಗಳನ್ನು ರೈತಸಂಘ ಸ್ವಾಗತಿಸುತ್ತದೆ. ಈ ಗ್ಯಾರಂಟಿಗಳು ಬಡವರ ಪರ ಇದೆ. ಆದರೆ ಗ್ಯಾರಂಟಿಗಳಿಗಾಗಿ ಹೊಸ ಸಾಲ ಮಾಡಬಾರದು. ಅನ್ನಭಾಗ್ಯ ಯೋಜನೆಗೆ ಹೊರರಾಜ್ಯದಿಂದ ಅಕ್ಕಿ ತರುವ ಬದಲು ಡಾ. ಸ್ವಾಮಿನಾಥನ್ ವರದಿಯಂತೆ ರೈತರ ಉತ್ಪಾದನಾ ವೆಚ್ಚದ ಮೇಲೆ ಲಾಂಭಾಂಶ ಸೇರಿಸಿ ರೈತರಿಂದಲೇ ಭತ್ತ, ರಾಗಿ, ಜೋಳ ಖರೀದಿಸಿ ಅಕ್ಕಿಯನ್ನೂ ಮಾಡಿಸಿ ನೀಡಬೇಕು. ಕೇವಲ ಅಕ್ಕಿ ಕೊಡುವುದರಿಂದ ಲಾಭವಿಲ್ಲ. ರಾಗಿ, ಗೋಧಿ ಸಿರಿಧಾನ್ಯ, ತೆಂಗಿನಕಾಯಿ ಸೇರಿದಂತೆ ಉಳಿದ ಧಾನ್ಯಗಳನ್ನು ಕೂಡ ನೀಡಬಹುದು ಎಂದರು. ಈ ಎಲ್ಲಾ ವಿಷಯಗಳನ್ನು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು. ಸಮಾವೇಶದಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದಲೂ ಕೂಡ ಹೆಚ್ಚು ರೈತರು ಭಾಗವಹಿಸಬೇಕೆಂದು ಮನವಿ ಮಾಡಿದರು. ಪದಾಧಿಕಾರಿಗಳಾದ ಇ.ಬಿ. ಜಗದೀಶ್, ಎಸ್. ಶಿವಮೂರ್ತಿ, ಹಿಟ್ಟೂರು ರಾಜು, ಸಿ. ಚಂದ್ರಪ್ಪ, ಕಸೆಟ್ಟಿ ರುದ್ರೇಶ್,ನಾಗರಾಜ್ ಪುರದಾಳು, ಪಿ.ಡಿ. ಮಂಜಪ್ಪ, ಕೆ. ರಾಘವೇಂದ್ರ, ಜ್ಞಾನೇಶ್ ಮುಂತಾದವರಿದ್ದರು.
ಬೇಡಿಕೆಗಳು:
ರಾಜ್ಯ ಸರ್ಕಾರ ಎಪಿಎಂಸಿ ಕಾಯಿದೆ ಸೇರಿದಂತೆ ಮೂರು ರೈತವಿರೋಧಿ ಕೃಷಿ ಕಾಯಿದೆಗಳನ್ನು ವಾಪಾಸು ಪಡೆಯಬೇಕು.
ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು.
ವಿದ್ಯುತ್ ಕ್ಷೇತ್ರ ಮತ್ತು ಬ್ಯಾಂಕುಗಳನ್ನು ಖಾಸಗೀಕರಣ ಮಾಡಬಾರದು.
ತೆಂಗು ಬೆಳೆಗಾರರಿಗೆ, ಕಬ್ಬು ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು.