ಶಿವಮೊಗ್ಗ, ಜುಲೈ ೧೫ :ಸೋಗಾನೆ ವಿಮಾನ ನಿಲ್ದಾಣದಲ್ಲಿ ಆಗಸ್ಟ್ ೧೧ ರಿಂದ ವಿಮಾನ ಹಾರಾಟ ಕಾರ್ಯಾಚರಣೆ ಹಿನ್ನೆಲೆ ಅಗತ್ಯ ಸಿದ್ದತೆಗಳ ಕುರಿತು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳು ಮಾತನಾಡಿ, ವಿಮಾನ ಕಾರ್ಯಾಚರಣೆಗೆ ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಬೇಕು. ಇಂಡಿಗೋ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಚರ್ಚಿಸಿ ಅವರು ವೀಕ್ಷಣೆ ವೇಳೆ ನೀಡಿರುವ ಅಂಶಗಳು ಹಾಗೂ ಹೆಚ್ಚುವರಿ ಸೌಕರ್ಯಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದರು.
೭೮ ಆಸನ ವ್ಯವಸ್ಥೆಯುಳ್ಳ ಎಟಿಆರ್-೭೨ ಇಂಡಿಗೋ ವಿಮಾನ ಆ.೧೧ ರಂದು ಕಾರ್ಯಾಚರಣೆ ನಡೆಸಲಿದ್ದು, ಅವರು ಅಬ್ಸರ್ವೇಷನ್ ನಲ್ಲಿ ಕೇಳಿರುವ ಸೌಕರ್ಯಗಳ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಬ್ಲ್ಯುಡಿ ಅಧಿಕಾರಿಗಳು ಮತ್ತು ವಿಮಾಣ ನಿಲ್ದಾಣ ನಿರ್ದೇಶಕರಿಗೆ ಸೂಚಿಸಿದರು. ವಿಮಾನ ನಿಲ್ದಾಣದ ಅಧಿಕೃತ ವೆಬ್‌ಸೈಟ್ ನ್ನು ಅಭಿವೃದ್ದಿಪಡಿಸಿ ಅಂದು ಗಣ್ಯರಿಂದ ಲೋಕಾರ್ಪಣೆ ಮಾಡಿಸಬೇಕು. ಗಣ್ಯರ ಸ್ವಾಗತ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದರು.
ವಿಮಾನ ನಿಲ್ದಾಣಕ್ಕೆ ಅಗತ್ಯವಾದ ವಾಹನಗಳ ಸೌಕರ್ಯ, ಕಾಫಿ-ತಿಂಡಿ ಮಳಿಗೆಗಳು, ಅಗತ್ಯ ಆಂಬ್ಯುಲೆನ್ಸ್ ಹಾಗೂ ಜಿಲ್ಲಾ ಪ್ರವಾಸೋದ್ಯಮಕ್ಕೆ ಒಂದು ಪ್ರತ್ಯೇಕ ಮಳಿಗೆಯನ್ನು ಸಿದ್ದಪಡಿಸುವಂತೆ ತಿಳಿಸಿದರು. ವಿಮಾನದ ನಿಲ್ದಾಣದ ಸುತ್ತಮುತ್ತ ನಿಯಮಾನುಸಾರ ಬಫರ್‌ಝೋನ್ ಅಧಿಸೂಚನೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು, ಅಂದು ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಸೇರಿದಂತೆ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯವಾದ ಎಲ್ಲ ಅಂಶಗಳ ಕುರಿತು ಸಮರ್ಪಕವಾಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಮೊಗ್ಗ ವಿಮಾನ ನಿಲ್ದಾಣ ನಿರ್ದೇಶಕ ಕ್ಯಾಪ್ಟನ್ ಶಮಂತ್ ಮಾತನಾಡಿ, ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ದಿ ಸಚಿವರಾದ ಎಂ.ಬಿ.ಪಾಟೀಲ್ ರವರು ಆ.೧೧ ರ ಬೆಳಿಗ್ಗೆ ೯.೩೦ ಕ್ಕೆ ಬೆಂಗಳೂರಿನಿಂದ ಇಂಡಿಗೋ ವಿಮಾನದಲ್ಲಿ ಹೊರಟು ಬೆಳಿಗ್ಗೆ ೧೧ ಕ್ಕೆ ಶಿವಮೊಗ್ಗ ವಿಮಾಣ ನಿಲ್ದಾಣಕ್ಕೆ ಆಗಮಿಸುವರು. ಬೆಳಿಗ್ಗೆ ೧೧.೨೦ ಕ್ಕೆ ವಿಮಾನ ಪ್ರಯಾಣಿಕರೊಂದಿಗೆ ಶಿವಮೊಗ್ಗದಿಂದ ನಿರ್ಗಮಿಸಿ, ಮಧ್ಯಾಹ್ನ ೧೨.೧೫ ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪುವ ಯೋಜನೆ ಇದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ(ಪ್ರಭಾರ) ಮೇಘನಾ ಆರ್, ಶಿವಮೊಗ್ಗ ಎಸಿ ರವಿಚಂದ್ರ ನಾಯಕ್, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಸಂಪತ್‌ಕುಮಾರ್ ಪಿಂಗಳೆ, ಪೊಲೀಸ್ ಪಡೆ ಅಸಿಸ್ಟೆಂಟ್ ಕಮಾಂಡೆಂಟ್ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.
previous post