ಶಿವಮೊಗ್ಗ: ಮಲೆನಾಡಿನಲ್ಲೀಗ ಮಳೆಯ ಸಂಭ್ರಮ. ಕಳೆದ ಮೂರು ದಿನಗಳಿಂದ ಚುರುಕಾದ ಮುಂಗಾರು ಮಳೆ ಶನಿವಾರ ರಾತ್ರಿಯಿಂದ ಅಬ್ಬರವಾಗಿಯೇ ಮುಂದುವರಿದಿದೆ. ಭಾನುವಾರ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಇದರಿಂದ ನದಿಗಳ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ. ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರಿಸುತ್ತಿರುವುದರಿಂದ ಲಿಂಗನಮಕ್ಕಿ ಡ್ಯಾಂಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಜೋಗ ಜಲಪಾತ ಇನ್ನಷ್ಟು ಮೈದುಂಬಿಕೊಂಡಿದ್ದು ಪ್ರವಾಸಿಗರ ಮನ ಸೂರೆಗೊಳ್ಳುತ್ತಿದೆ.
ಒಂದೇ ದಿನ ಮೂರು ಅಡಿಯಷ್ಟು ನೀರು ಜಲಾಶಯಕ್ಕೆ ಹರಿದುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ಜೋಗ ಜಲಪಾತ ಪ್ರದೇಶದಲ್ಲಿ ವಿಪರೀತ ಮಳೆಯಿದ್ದರೂ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಜಲಪಾತ ನೋಡಲು ದೂರದ ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಮಂಜುಮುಸುಕಿದ ವಾತಾವರಣದ ಕಾರಣ ಜಲಪಾತದ ದರ್ಶನ ಸಾಧ್ಯವಾಗದೆ ನಿರಾಶರಾಗುತ್ತಿದ್ದಾರೆ.
ಮತ್ತೆ ತುಂಬಿದ ತುಂಗೆ:
ತುಂಗಾನದಿಯಲ್ಲೂ ನೀರಿನ ಮಟ್ಟ ಏರುತ್ತಿದೆ. ಆಗುಂಬೆ, ತೀರ್ಥಹಳ್ಳಿ , ಕೊಪ್ಪ ಮತ್ತು ಶೃಂಗೇರಿ ಭಾಗದಲ್ಲಿ ಎರಡು ದಿನದಿಂದ ಭಾರೀ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಶಿವಮೊಗ್ಗದ ತುಂಗಾನದಿಯಲ್ಲಿರುವ ಮಂಟಪ ಮತ್ತೆ ಮುಳುಗಿದೆ. ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ ಇದನ್ನು ವೀಕ್ಷಿಸಲು ಸೇತುವೆ ಮೇಲೆ ಜನರ ಪ್ರವಾಹ ಹರಿದುಬರುತ್ತಿದೆ.
ನೀರಿನ ಮಟ್ಟ:
ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ ಒಳಹರಿವು 52,374 ಕ್ಯೂಸೆಕ್ ಗೆ ಏರಿಕೆಯಾಗಿದೆ. 1285 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 1770 (ಗರಿಷ್ಠ ಮಟ್ಟ : 1819) ಅಡಿಯಿದೆ.
ತುಂಗಾ ಡ್ಯಾಂ ಒಳಹರಿವು 42,719 ಕ್ಯೂಸೆಕ್ ಗೆ ಏರಿಕೆಯಾಗಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ, ಒಳಹರಿವಿನಷ್ಟೆ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನ 21 ಕ್ರಸ್ಟ್ ಗೇಟ್ ತೆರೆದು ನೀರು ಹೊರ ಬಿಡಲಾಗುತ್ತಿದೆ.
ಉಳಿದಂತೆ ಭದ್ರಾ ಡ್ಯಾಂ ಜಲಾನಯನ ಪ್ರದೇಶದಲ್ಲಿಯೂ ವ್ಯಾಪಕ ಮಳೆಯಾಗುತ್ತಿದೆ. ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು 12,169 ಕ್ಯೂಸೆಕ್ ಗೆ ಏರಿಕೆಯಾಗಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 145 (ಗರಿಷ್ಠ ಮಟ್ಟ : 186) ಅಡಿಯಿದೆ.
ಮಳೆ ವಿವರ:
ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡAತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸನಗರದಲ್ಲಿ 140.2 ಮಿ.ಮೀ. (ಮಿಲಿ ಮೀಟರ್), ಸೊರಬ 83 ಮಿ.ಮೀ., ಸಾಗರ 77.8 ಮಿ.ಮೀ., ತೀರ್ಥಹಳ್ಳಿ 61.2 ಮಿ.ಮೀ., ಭದ್ರಾವತಿ 34.4 ಮಿ.ಮೀ., ಶಿಕಾರಿಪುರ 44.8 ಮಿ.ಮೀ., ಶಿವಮೊಗ್ಗದಲ್ಲಿ 12.4 ಮಿ.ಮೀ. ವರ್ಷಧಾರೆಯಾಗಿದೆ.
ಜನಜೀವನ ಅಸ್ತವ್ಯಸ್ತ
ಎರಡು ದಿನಗಳಿಂದ ಹೆಚ್ಚು ಮಳೆಯಾಗುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹೊಲ-ಗದ್ದೆಗಳಿಗೆ ಹೋಗುವುದೇ ದುಸ್ತರವಾಗಿದೆ. ಇತರೆ ಕೆಲಸಗಳಿಗೆ ಮನೆಯಿಂದ ಹೊರಬಾರದಂತಾಗಿದೆ. ನಗರ ಪ್ರದೇಶದಲ್ಲಿ ಭಾನುವಾರ ರಜಾ ದಿನವಾದರೂ ಜನರು ಮನೆಯಿಂದ ಹೊರಬರಲಿಲ್ಲ. ಇಡಿ ದಿನ ಮಳೆ ಬೀಳುತ್ತಿರುವುದರಿಂದ ಅಂಗಡಿ, ಪ್ರಮುಖ ವಾಣಿಜ್ಯ ಮಳಿಗೆಗಳಲ್ಲಿ, ಮಾಲ್‌ಗಳಲ್ಲೂ ಜನರಿರದೆ ವ್ಯಾಪಾರ ಕುಸಿತವಾಗಿತ್ತು.
ಜಲಚಿತ್ತಾರ
ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಭಾರೀ ಮಳೆಯ ಕಾರಣ ಬೆಟ್ಟದ ಸಾಲಿನಲ್ಲಿ ಮಂಜು ಮೊಡದ ಆಟದ ನಡುವೆ ಫಾಲ್ಸ್ ವೀಕ್ಷಣೆಯೇ ಕಷ್ಟಸಾಧ್ಯವಾಗಿತ್ತು. ಮೋಡ, ಮಂಜು ಕರಗುವ ತನಕ ಕಾದ ಪ್ರವಾಸಿಕರು ಜಲಚಿತ್ತಾರ ನೋಡಿ ಸಂಭ್ರಮಿಸಿದರು.