ಶಿವಮೊಗ್ಗ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಯಾವುದೇ ಕೊನೆಯ ದಿನಾಂಕ ಇಲ್ಲ. ಇದು ನಿರಂತರ ಪ್ರಕ್ರಿಯೆ. ಮಹಿಳೆಯರು ಅವಸರ ಪಡಬೇಕಾಗಿಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ಹೆಚ್.ಸಿ. ಯೋಗೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸರ್ಕಾರದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತರಲು ಸರ್ಕಾರ ಸಿದ್ದವಾಗಿದೆ. ಹಾಗೆಯೇ ಬಹು ಮುಖ್ಯವಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಅರ್ಜಿ ಸ್ವೀಕಾರ ಮಾಡುವ ಸೇವಾ ಕೇಂದ್ರಗಳಲ್ಲಿ ನೂಕು ನುಗ್ಗಲಾಗುತ್ತಿದೆ. ಹಲವು ತೊಂದರೆಗಳು ಉಂಟಾಗಿವೆ. ಇವುಗಳನ್ನು ನಿವಾರಿಸಲು ಈಗಾಗಲೇ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.
ಶಿವಮೊಗ್ಗದಲ್ಲಿ ಪ್ರಮುಖವಾಗಿ ಮೂರು ಸೇವಾ ಕೇಂದ್ರಗಳಿವೆ. ಸೂಡಾ ಕಾಂಪ್ಲೆಕ್ಸ್, ಬಸ್‌ಸ್ಟ್ಯಾಂಡ್, ದ್ರೌಪದಮ್ಮ ಸರ್ಕಲ್ ಇವು ಅಧಿಕೃತವಾಗಿವೆ. ಆದರೆ ಕೆಲವರು ಈ ಅಧಿಕೃತ ಕೇಂದ್ರಗಳಿಂದ ಲಾಗಿನ್ ಪಡೆದುಕೊಂಡು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಅಪರಾಧವಾಗುತ್ತದೆ. ಇದರ ಜೊತೆಗೆ ಪ್ರತಿಯೊಬ್ಬರ ಹತ್ತಿರ ೫೦ರೂ. ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಇದು ಕೂಡ ಅಪರಾಧ. ಯಾರೂ ಕೂಡ ಹಣ ನೀಡಬಾರದು. ಇದು ಉಚಿತವಾಗಿದೆ ಎಂದರು.
ಸೇವಾಕೇಂದ್ರಗಳಲ್ಲಿ ಸರ್ವರ್ ತೊಂದರೆಯಿಂದ ಹಿಡಿದು ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಹಾಗೂ ಕುಳಿತುಕೊಳ್ಳಲು ತೊಂದರೆ ಇರುವುದನ್ನು ಗಮನಿಸಿ ಜಿಲ್ಲಾಧಿಕಾರಿಗಳೊಂದಿಗ ಮಾತನಾಡಿ, ಎಲ್ಲಾ ಮೂರು ಕೆಂದ್ರಗಳಿಗೂ ಶಾಮಿಯಾನ , ಖುರ್ಚಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಕೇವಲ ಮೂರು ಸೇವಾಕೇಂದ್ರಗಳಿರುವುದರಿಂದ ಅವುಗಳ ಸಂಖ್ಯೆಯನ್ನು ಕನಿಷ್ಠ ೧೦ಕ್ಕೆ ಹೆಚ್ಚಿಸಲು ಆಗ್ರಹಪಡಿಸಿದ್ದೇವೆ ಎಂದರು.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸಲ್ಲದ ವಿಷಯಗಳು ಹರಿದಾಡುತ್ತಿವೆ. ಆ.೧೫ ಕೊನೆಯ ದಿನವಂತೆ. ನಂತರ ನಿಂತು ಹೋಗುತ್ತದೆಯಂತೆ ಎಂಬ ಸುದ್ದಿಗಳಿವೆ. ಇವೆಲ್ಲವೂ ಸುಳ್ಳು. ಅರ್ಜಿ ಸಲ್ಲಿಸಲು ಯಾವ ಡೆಡ್ ಲೈನ್ ಕೂಡ ಇಲ್ಲ. ಇದು ನಿರಂತರವಾದುದು. ಅರ್ಜಿ ಸಲ್ಲಿಸಿದ ಮುಂದಿನ ತಿಂಗಳಿನಿಂದಲೇ ಅವರವರ ಬ್ಯಾಂಕ್ ಅಕೌಂಟ್‌ಗೆ ಹಣ ಜಮಾ ಆಗುತ್ತದೆ ಎಂದರು.
ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಹಣವನ್ನು ಕಳೆದ ಸರ್ಕಾರ ಇದುವರೆಗೂ ನೀಡಿಲ್ಲ. ೨೮ ಲಕ್ಷ ರೂ. ಪಾಲಿಕೆಯಿಂದ ನೀಡಬೇಕಾಗಿದೆ. ಇಂದು ನಡೆಯುವ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತಕ್ಷಣವೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರೇಖಾ ರಂಗನಾಥ್, ವಿಶ್ವನಾಥ ಕಾಶಿ, ಶಮೀರ್ ಖಾನ್ ಇದ್ದರು.