Malenadu Mitra
ರಾಜ್ಯ ಶಿವಮೊಗ್ಗ

ಪಠ್ಯ ಬದಲಾವಣೆ,ಸಚಿವರ ಸಭೆಗೆ ನುಗ್ಗಲೆತ್ನಿಸಿದ ಬಜೆಪಿ ಯುವ ಮೋರ್ಚಾ ಮುಖಂಡರ ಬಂಧನ

ಶಿವಮೊಗ್ಗ: ಮಳೆ-ಬೆಳೆ ಮತ್ತು ಹಾನಿ ಕುರಿತಾದ ಜಿಲ್ಲಾ ಪಂಚಾಯತ್ ಪರಿಶೀಲನಾ ಸಭೆಗೆ ಸಚಿವ ಮಧು ಬಂಗಾರಪ್ಪ ಆಗಮಿಸಿ ಕುಳಿತುಕೊಳ್ಳುತ್ತಿರುವಂತೆಯೇ ಏಕಾಏಕಿ ಸಭಾಂಗಣಕ್ಕೆ ನುಗ್ಗಿದ ಬಿಜೆಪಿಯ ಯುವ ಮೋರ್ಚಾದ ನಾಲ್ಕಾರು ಮುಖಂಡರು ಮಧು ಬಂಗಾರಪ್ಪನವರ ವಿರುದ್ಧ ಧಿಕ್ಕಾರ ಕೂಗಿ, ಕಪ್ಪು ಪಟ್ಟಿ ಪ್ರದರ್ಶನಕ್ಕೆ ಮುಂದಾದ ಘಟನೆ ಬುಧವಾರ ನಡೆಯಿತು.
ಕಪ್ಪುಪಟ್ಟಿಯೊಂದಿಗೆ ಬಂದಿದ್ದ ಈ ಮುಖಂಡರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಸಭಾಂಗಣದ ಒಳ-ಹೊರಗೆ ಪೊಲೀಸ್ ಬಂದೋಬಸ್ತ್ ಇರದ ಕಾರಣ ಏಕಾಏಕಿ ನುಗ್ಗಲು ಅವರಿಗೆ ಅವಕಾಶ ಮಾಡಿಕೊಟ್ಟಂತಾಗಿತ್ತು. ನುಗ್ಗ್ಗಿ ಘೋಷಣೆ ಆರಂಭಿಸುತ್ತಿದ್ದಂತೆಯೇ ಎಲ್ಲರೂ ಅವಾಕ್ಕ್ಕಾದರು. ಅಲ್ಲದ್ದ ಸಚಿವರ ಬೆಂಗಾವಲು ಪೊಲೀಸ್ ಮೊದಲು ಅವರನ್ನೆಲ್ಲ ತಡೆದರು. ನಂತರ ಗನ್ ಮ್ಯಾನ್ ಮತ್ತು ಸ್ವತಃ ಎಸ್ ಪಿ ಅವರೇ ಧಾವಿಸಿ ಅವರನ್ನು ತಡೆದರು. ಈ ವೇಳೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸುತ್ತಿಲೇ ಇದ್ದರು. ಆದರೂ ಈ ಮೂವರು ಪೊಲೀಸರು ಮತ್ತು ಎಸ್ ಪಿ ಅವರನ್ನೆಲ್ಲ ತಳ್ಳುತ್ತಲೇ ಹೊರಹಾಕಿದರು.
ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹರಿಕೃಷ್ಣ, ಮತ್ತು ಕಾರ್ಯಕರ್ತರಾದ ಜಗದೀಶ್, ದರ್ಶನ್, ಪ್ರದೀಪ್ ವಿಶ್ವನಾಥ್ ಮೊದಲಾದವರು ಇದರಲ್ಲಿದ್ದರು. ಇಲ್ಲಿ ಸಂಪೂರ್ಣ ಪೊಲೀಸ್ ಭದ್ರತಾ ವೈಫಲ್ಯ ಕಂಡುಬಂದಿದೆ.
ಯುವ ಮೋರ್ಚಾ ಯುವಕರು ಶಾಲಾ ಪಠ್ಯಪುಸ್ತಕವನ್ನು ಸರ್ಕಾರ ಪರಿಶೀಲಿಸಿ ಸಾವರ್ಕರ್, ಹೆಡಗೇವಾರ್ ಅವರ ಪಠ್ಯ ಕೈಬಿಟ್ಟ ಕಾಂಗ್ರೆಸ್ ಸರ್ಕಾರ ಮತ್ತು ಪಠ್ಯವನ್ನು ಸಚಿವ ಮಧು ಹರಿದು ಹಾಕಿದ್ದರ ವಿರುದ್ಧ ಯುವ ಮೋರ್ಛಾ ಈ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಜಿಪಂ ಹೊರಗೆ ಹಾಕಿದ ಪೊಲೀಸರು ಬಾಗಿಲು ಬಂದ್ ಮಾಡಿದರು. ಅದರೂ ಹೊರಗೆ ಅವರು ಕೂಗುತ್ತಲೇ ಇದ್ದರು. ಈ ವೇಳೆ ಜಿಪಂ ಸಭೆಗೆ ಹೋಗಲು ಪ್ರವೇಶಿಸಿದ ಶಾಸಕ ಆರಗ ಜ್ಞಾನೇಂದ್ರ ಅವರಿಗೂ ಸ್ವಲ್ಪ ಕಾಲ ಬಾಗಿಲು ತೆಗೆಯಲಿಲ್ಲ.
ಅವರನ್ನು ಬಂಧಿಸಿದ ವೇಳೆ ಪೊಲೀಸರು ಮತ್ತು ಕರೆದೊಯ್ಯಲು ವಾಹನವೂ ಇರಲಿಲ್ಲ. ವಶಕ್ಕೆ ಪಡೆದ ಪೊಲೀಸರು ಅವರನ್ನು ಠಾಣೆಗೆ ಕರೆದುಕೊಂಡು ಹೋಗಲು ವಾಹನ ಹುಡುಕುವಂತಾಯಿತು. ಬಂಧಿತರನ್ನು ಸಚಿವರ ಎಸ್ಕಾರ್ಟ್ ವಾಹನದಲ್ಲಿ ಕರೆದೊಯ್ಯಲಾಯಿತು. ಎಲ್ಲರನ್ನೂ ಠಾಣೆಗೆ ಕರೆದೊಯ್ದ ಮೇಲೆ ಪೊಲೀಸ್ ವಾಹನ ವ್ಯಾನ್ ಬಂದಿತು.

ಮೊದಲು ಪಠ್ಯ ಓದಲಿ, ನಂತರ ಪ್ರತಿಭಟನೆ ಮಾಡಲಿ
ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ

ಶಿವಮೊಗ್ಗ: ಬಿಜೆಪಿ ಮತ್ತು ಅವರ ಪರಿವಾರದವರು, ಮೊದಲು ಪಠ್ಯ ಓದಲಿ. ನಂತರ ಪ್ರತಿಭಟನೆ ಮಾಡಲಿ, ಅವರು ಮುದ್ರಿಸಿರುವ ಕರ ಪತ್ರದಲ್ಲೇ ಸತ್ಯಾಂಶ ಇದೆ ಎಂದು ಎಂದು ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಕೈಬಿಟ್ಟಿರುವುದರ ವಿರುದ್ಧ ಬಿಜೆಪಿ ಯುವ ಮೋರ್ಛಾದವರು ಬುಧವರ ಜಿಪಂ ಸಭಂಗಣಕ್ಕೆ ನುಗ್ಗಿ ಕಪ್ಪುಪಟ್ಟಿ ಪ್ರದರ್ಶಿಸಲು ಮುಂದಾದ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಅವರಿಗೆ ಪ್ರತಿಭಟನೆ ಮಾಡುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ. ಅವರಷ್ಟು ದಡ್ಡರನ್ನು ನಾನು ನೋಡಿಲ್ಲ. ಮೊದಲು ಅವರು ಪುಸ್ತಕ ಓದಲಿ ಎಂದು ಸಲಹೆ ನೀಡಿದರು.
ಸಚಿವರಿಂದ ತಮ್ಮ ಕೆಲಸ ಆಗುತ್ತಿಲ್ಲ ಎಂದು ಸಿಎಂಗೆ ಕೆಲ ಶಾಸಕರು ಪತ್ರ ಬರೆದಿರುವ ವಿಷಯದ ಬಗ್ಗೆ ಕೇಳಿದಾಗ ಅದು ನನ್ನ ಗಮನದಲ್ಲಿಲ್ಲ. ಯಾವುದೇ ವಿಷಯವಾದರೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಬೇಕು . ಹಾಗೆಯೇ ಶಾಸಕರನ ಮನವಿಗೆ ಸಚಿವರು ಸ್ಪಂದಿಸಬೇಕು ಎಂದರು.
ಸಿಎಂ ಮಾಡುವುದು, ಕೆಳಗಿಳಿಸುವುದು ನನಗೆ ಗೊತ್ತು ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ಕುರಿತಂತೆ ಹೇಳಿಕೆ ನೀಡಲು ನಿರಾಕರಿಸಿದ ಸಚಿವರು, ಅದು ಅವರ ವೈಯಕ್ತಿಕ ಹೇಳಿಕೆ. ಹಾಗಾಗಿ ಅವರನ್ನೇ ಕೇಳಿ.ಅವರು ಯಾವ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೂ ನಾನು ಅದೇ ಸಮಾಜಕ್ಕೆ ಸೇರಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ ಎಂಬ ಡಿಸಿಎಂ ಶಿವಕುಮಾರ್ ಹೇಳಿಕೆಗೆ ಉತ್ತರಿಸಿದ ಸಚಿವರು ಬಿಜೆಪಿಯವರಿಗೆ ಅದೇ ಕೆಲಸ. ಅದಕ್ಕೆ ಜೆಡಿಎಸ್ ಕೈ ಜೋಡಿಸಿರಬಹುದು. ಆದರೆ ಸಿದ್ದರಾಮಯ್ಯಗೆ ಪೂರ್ಣ ಬೆಂಬಲವಿದೆ. ಅವರ ನಾಯಕತ್ವದಲ್ಲಿ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಸರ್ಕಾರ ಬೀಳಿಸುವ ಯತ್ನ ಯಶಸ್ವಿ ಆಗದು ಎಂದರು.

ಬಂಧಿತರ ಬಿಡುಗಡೆಗೆ ಆಗ್ರಹಿಸಿ ಠಾಣೆಗೆ ಧಾವಿಸಿದ ಶಾಸಕ

ಶಿವಮೊಗ್ಗ: ಜಿಪಂ ಸಭಾಂಗಣದೊಳಕ್ಕೆ ನುಗ್ಗಿದ ಯುವ ಮೋರ್ಚಾದದವರ ಮೇಲೆ ಯಾವ ಕೇಸನ್ನೂ ದಾಖಲಿಸದೆ ಬಿಡುಗಡೆಗೊಳಿಸಬೇಕೆಂದು ಕೋರಿ ಶಾಸಕ ಚನ್ನಬಸಪ್ಪ ಜಯನಗರ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಮೊನ್ನೆ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ರಾಜ್ಯ ಪಾಲರ ಭಾಷಣದ ವೇಳೆ ವಿಶ್ವವಿದ್ಯಾಲಯದಲ್ಲಿ ಭ್ರಷ್ಠಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಎನ್ ಎಸ್ ಯು ಐ ಪ್ರತಿಭಟಿಸಿತ್ತು. ಆ ವೇಳೆ ಏನೂ ಮಾಡದ ಪೊಲೀಸರು, ಬಿಜೆಪಿ ಯುವಮೋರ್ಚಾದ ಯುವಕರನ್ನು ಬಂಧಿಸಲು ಮುಂದಾಗಿರುವುದಕ್ಕೆ ಶಾಸಕರು ನ್ಯಾಯ ಕೇಳಿ ಧರಣಿ ನಡೆಸಿದರು.
ಬುಧವಾರ ಬೆಳಿಗ್ಗೆ ಬಿಜೆಪಿ ಯುವ ಮೋರ್ಚಾ ಸಚಿವ ಮಧು ಬಂಗಾರಪ್ಪನವರು ಜಿಪಂ ಸಭಾಂಗಣಕ್ಕೆ ಸಭೆ ನಡೆಸಲು ಬಂದಾಗ ಸ್ವಾತಂತ್ರ್ಯ ಹೋರಾಟಗಾರರನ್ನು ಪಠ್ಯದಿಂದ ಕೈಬಿಟ್ಟ ವಿಚಾರವನ್ನ ವಿರೋಧಿಸಿ, ಬಿಜೆಪಿಯ ಪಠ್ಯವನ್ನು ಹರಿದು ಹಾಕಿರುವುದನ್ನು ಖಂಡಿಸಿ ಸಭೆಗೆ ನುಗ್ಗಿದ ಬಿಜೆಪಿ ಯುವ ಮೋರ್ಚಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ವಶಕ್ಕೆ ಪಡೆದ ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಹರಿಕೃಷ್ಣ, ಜಗದೀಶ,ದರ್ಶನ್, ಶಾಸ್ತ್ರಿ, ಮೊದಲಾದವರನ್ನು ಬಂಧಿಸಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಎಂಎಲ್ ಎ ಚನ್ನಬಸಪ್ಪನವರು ಪೊಲೀಸರ ನಡೆಯನ್ನು ಖಂಡಿಸಿ ಠಾಣೆಯ ಮುಂದೆ ಕೈ ಕಟ್ಟಿನಿಂತು ಸಬ್ ಇನ್ಸ್ ಪೆಕ್ಟರ್ ಜೊತೆ ಚರ್ಚಿಸಿ ಯಾವ ಪ್ರಕರಣವನ್ನೂ ಹಾಕದೆ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

Ad Widget

Related posts

ಕ್ಷಮಿಸಿ…ನನ್ನಲ್ಲಿ ಬೆಡ್‍ಗಳಿಲ್ಲ: ಮೆಗ್ಗಾನ್ ಆಸ್ಪತ್ರೆ

Malenadu Mirror Desk

ಸೊರಬದಲ್ಲಿ ದಸರಾ ಉತ್ಸವಕ್ಕೆ ಭವ್ಯ ತೆರೆ

Malenadu Mirror Desk

ಶಿವಮೊಗ್ಗಕ್ಕೆ ಕ್ಯಾನ್ಸರ್ ಆಸ್ಪತ್ರೆ, ಆಯುಷ್ ವಿವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.