ಶಿವಮೊಗ್ಗ,ಜು.೨೯: ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ಜೀವನ ಮೌಲ್ಯಗಳನ್ನು ತಿಳಿಸಬೇಕು. ವಿದ್ಯಾರ್ಥಿ ಮತ್ತು ಉಪನ್ಯಾಸಕರ ನಡುವೆ ಉತ್ತಮ ಬಾಂಧವ್ಯ ಇರಬೇಕು ಎಂದು ಶಾಲಾಶಿಕ್ಷಣ ಇಲಾಖೆ (ಪದವಿಪೂರ್ವ ಕಾಲೇಜುಗಳು) ಉಪನಿರ್ದೇಶಕ ಬಿ.ಕೃಷ್ಣಪ್ಪ ಅಭಿಪ್ರಾಯ ಪಟ್ಟರು.
ಜಿಲ್ಲಾ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಸಮಾಜ ಶಾಸ್ತ್ರ ವೇದಿಕೆ ಆಶ್ರಯದಲ್ಲಿ ಶಿವಮೊಗ್ಗ ಉಪನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರ,ನಿವೃತ್ತ ಉಪನ್ಯಾಸಕರಿಗೆ ಗೌರವ ಸಮರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತರಗತಿಯಲ್ಲಿ ಉಪನ್ಯಾಸಕರು ಸೌಜನ್ಯಯುತವಾಗಿ ವರ್ತಿಸುವುದು ಮಾತ್ರವಲ್ಲದೆ, ಜೀವನ ಮೌಲ್ಯಗಳು ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಗಳ ಬಗ್ಗೆ ತಿಳಿಸಬೇಕು. ಉತ್ತಮ ಫಲಿತಾಂಶ ತರಲು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪದವಿಪೂರ್ವ ಪ್ರಾಚಾರ್ಯರ ಸಂಘದ ಅಧ್ಯಕ್ಷ ಚಂದ್ರಪ್ಪಗುಂಡಪಲ್ಲಿ, ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಯೋಗಿಶ್ ಎಸ್, ಹಿರಿಯ ಪ್ರಾಚಾರ್ಯ ಜಿ.ಎಫ್.ಕುಟ್ರಿ ಮಾತನಾಡಿ ಉಪನ್ಯಾಸಕರ ಕಾರ್ಯವೈಖರಿ ಸುಧಾರಣೆ ಮತ್ತು ಪ್ರಸ್ತುತ ಸವಾಲುಗಳ ಕುರಿತು ಮಾತನಾಡಿದರು. ವೇದಿಕೆ ಅಧ್ಯಕ್ಷ ಗೋಪಾಲಕೃಷ್ಣ ಎಸ್. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಜಶೇಖರ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗು ಶಾಖಾಧಿಕಾರಿ ಪ್ರಸನ್ನ, ಹಿರಿಯ ಪ್ರಾಚಾರ್ಯರುಗಳಾದ ಪ್ರಕಾಶ್ ಕೆ.ಸಿ, ನಾಗರಾಜ್ ಕೆ.ಎಂ, ಲೇಖನ್ ಡಿ, ನರಸಿಂಹಪ್ಪ ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸುಬ್ರಹ್ಮಣ್ಯ ಕೆ.ಎನ್, ಡಾ.ಉಮೇಶ್ ಭದ್ರಾಪುರ ವಿಷಯ ಮಂಡನೆ ಮಾಡಿದರು.
ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ವೇದಿಕೆ ಉಪಾಧ್ಯಕ್ಷೆ ಸುಚೇತನ ಹಾಗೂ ಚಂದ್ರಮೋಹನ್ ನಿರ್ವಹಿಸಿದರು. ಉಪನ್ಯಾಸಕಿ ಅಂಜಲಿ ಪ್ರಾರ್ಥಿಸಿದರು. ವೇದಿಕೆ ಕಾರ್ಯದರ್ಶಿ ಟಿ.ನರಸಿಂಹಪ್ಪ ಸ್ವಾಗತಿಸಿದರು. ದೊಡ್ಡಪ್ಪ ಜೋಗಿ ವಂದಿಸಿದರು. ಉಪನ್ಯಾಸಕಿ ತಿಮ್ಮಾಜಮ್ಮ ಕಾರ್ಯಕ್ರಮ ನಿರೂಪಿಸಿದರು.