ಶಿರಸಿ: ಪ್ರತಿ ವ್ಯಕ್ತಿಯ ಬದುಕಿನಲ್ಲಿ ಜ್ಞಾನದ ಜತೆಗೆ ಸಾಧನೆ, ಸಂಪತ್ತು ಮುಖ್ಯವಾಗಿದ್ದು, ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಅವುಗಳನ್ನು ಪಡೆಯಲು ಸಾಧ್ಯ ಎಂದು ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಹೆಚ್.ಕೆ.ಕೃಷ್ಣಮೂರ್ತಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಉತ್ತರ ಕನ್ನಡ ಜಿಲ್ಲಾ ಆರ್ಯ ಈಡಿಗ ನಾಮಧಾರಿ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ೨೪ನೇ ವಾರ್ಷಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹದಿಹರೆಯದ ವಯಸ್ಸಿನಲ್ಲಿ ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಜತೆಗೆ ಅವರೊಂದಿಗೆ ಸ್ನೇಹಿತರಾಗಿ ವರ್ತಿಸಿದಾಗ ದಾರಿತಪ್ಪುವ ಸಂದರ್ಭಗಳು ಕಡಿಮೆ ಇರುತ್ತದೆ. ಇಂದಿನ ಮಕ್ಕಳು ಕೆಎಎಸ್, ಐಎಎಸ್, ಎಎಫ್ ಎಸ್ ಪರೀಕ್ಷೆಗಳಲ್ಲಿ ಸಾಧಿಸುವ ಕನಸು, ಗುರಿ ಹೊಂದಿ ನಿರಂತರ ಪರಿಶ್ರಮ ಪಡಬೇಕು ಎಂದರು. ಈಡಿಗ ನಾಮಧಾರಿ ಬಿಲ್ಲವ ಸಮಾಜ ಶೈಕ್ಷಣಿಕವಾಗಿ ಪ್ರಗತಿಹೊಂದುತ್ತಿದ್ದು, ಅನೇಕರು ಮಹೋನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ನಮ್ಮೊಳಗೆ ಸೋಲು, ಗೆಲುವುಗಳಿದ್ದು, ನಾವೇ ಆಯ್ಕೆ ಮಾಡಿಕೊಳ್ಳಬೇಕು ಎಂದ ಅವರು ನಮ್ಮ ಸಮುದಾಯ ಬೆಳೆಯುತ್ತಿರುವುದು ಸಂತಸ ತಂದಿದ್ದು, ಉಳಿದ ಸಮುದಾಯಗಳ ನಡುವೆಯೂ ಹೀಗೆ ಸಾಮರಸ್ಯ ಕಾಯ್ದುಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಗೃಹ ಸಚಿವರ ಆಪ್ತ ಕಾರ್ಯದರ್ಶಿ ಕೆ.ಚೆನ್ನಬಸಪ್ಪ ಮಾತನಾಡಿ, ಬದುಕಿನಲ್ಲಿ ಸಾಧನೆ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಪರಿಶ್ರಮ ಪಡಬೇಕು. ಸಾಧಿಸುವ ಮನಸ್ಸುಗಳಿಗೆ ಸಹಕರಿಸಲು ಸಿದ್ಧ ಎಂದರು. ಉತ್ತರ ಕನ್ನಡ ಜಿಲ್ಲಾ ಆರ್ಯ ಈಡಿಗ ನಾಮಧಾರಿ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮನೋಜ್ ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಜಂಟಿ ನಿರ್ದೇಶಕ ಈಶ್ವರನಾಯ್ಕ್, ಸಹಾಯಕ ಆಯುಕ್ತ ಕೆ.ಎಸ್.ದೇವರಾಜ್ ಮಾತನಾಡಿದರು.
ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪ್ರಸೂತಿ ತಜ್ಞ ಡಾ.ನಾಗೇದ್ರಪ್ಪ, ಪರಶುರಾಮ್ ನಾಯ್ಕ್, ಎಂ.ಎಸ್.ನಾಯ್ಕ್, ವಿಕಾಸ್ ಕೆ.ನಾಯ್ಕ್, ಶ್ರೀಧರ್ ಎಸ್.ನಾಯ್ಕ್, ಜಿ.ಎಚ್.ನಾಯ್ಕ್, ಮಹೇಶ್ ನಾಯ್ಕ್, ನಾಗರಾಜ್ ನಾಯ್ಕ್, ವಿ.ಟಿ.ನಾಯ್ಕ್, ಸೀತಾರಾಮ್ ನಾಯ್ಕ್, ಜಿ.ವಿ.ನಾಯ್ಕ್, ಮೋಹನ್ ನಾಯ್ಕ್, ವಕೀಲ ಲಕ್ಷ್ಮೀಕಾಂತ್ ಚಿಮಣೂರು, ಎಸ್.ಎಂ.ನೀಲೇಶ್, ಶಿವಪ್ಪ ಹಿತ್ಲರ್, ರವಿ ಕಲ್ಲಂಬಿ, ಜಿ.ಎಂ.ತೋಟಪ್ಪ ಇತರರಿದ್ದರು.
ಸಾಧಕರಿಗೆ ಸನ್ಮಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಗುರಿ ಗುರು ಇದ್ದಾಗ ಸಾಧನೆ ಸುಲಭ ಎಂದುಕೊಂಡವನು ನಾನು. ನಮ್ಮ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳುತ್ತಿರುವುದು ಸಂತಸ ತಂದಿದೆ.ಮಧು ಬಂಗಾರಪ್ಪ ಅವರು ಸಚಿವರಾಗಿದ್ದಲ್ಲದೆ, ಸಮುದಾಯದ ಅಧಿಕಾರಿಗಳು ಮೇಲು ಹಂತದಲ್ಲಿ ಇದ್ದಿದ್ದರಿಂದ ಶಿರಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
–ಭೀಮಣ್ಣ ಟಿ.ನಾಯ್ಕ್, ಶಾಸಕರು, ಶಿರಸಿ