ಶಿರಸಿ: ಮನಸ್ಸನ್ನು ವಿಕಾರಗೊಳಿಸುವ ಸಂಸ್ಕೃತಿ, ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಾಕ್ಷಾಯಣಿ ಜಿ.ಹೆಗಡೆ ಕರೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಸಿಯಲ್ಲಿ ಕನ್ನಡ ಐಚ್ಛಿಕ ಅಂತಿಮ ಬಿಎ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಸತ್ವ ಕಟ್ಟಿಕೊಡುವ ನಿಟ್ಟಿನಲ್ಲಿ ಕನ್ನಡ ವಿಭಾಗದ ಪರಿಶ್ರಮ ಮಹತ್ವದ್ದು. ಕನ್ನಡ ಭಾಷೆಯನ್ನು ಪ್ರೀತಿಸಿಸುವ ಜತೆಗೆ ಇನ್ನುಳಿದ ಭಾಷೆಗಳನ್ನು ಗೌರವಿಸಬೇಕು. ಉಪನ್ಯಾಸಕರ ಪಾಠ, ಪ್ರವಚನಗಳಿಂದ ವಿದ್ಯಾರ್ಥಿಗಳು ಸಾಧನೆ ಮಾಡಿ ಸಾರ್ಥಕತೆ ಹೊಂದಬೇಕು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಬಿ. ಪ್ರಕಾಶ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದ ಋಣ ತೀರಿಸುವ ಜತೆಗೆ ನಿರಂಕುಶ ಮತಿಗಳಾಗಿ ವಿಶ್ವಮಾನವರಾಗಬೇಕು. ಹಾಗೆಯೇ ಉತ್ತಮ ಭವಿಷ್ಯ ಕಟ್ಟಿಕೊಂಡು ಪೋಷಕರು ಹಾಗೂ ಗುರುಗಳ ಗೌರವ ಹೆಚ್ಚಿಸಬೇಕು ಎಂದರು.
ಐಕ್ಯೂಎಸಿ ಸಂಚಾಲಕ ಡಾ.ಸಿ.ಎಸ್.ಲೋಕೇಶ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣದ ಪಾತ್ರ ಹಿರಿದು ಎಂದರು. ಸಹಾಯಕ ಪ್ರಾಧ್ಯಾಪಕ ಡಿ.ಬಸವರಾಜ್, ಉಪನ್ಯಾಸಕರಾದ ಎಸ್.ಎಂ.ನೀಲೇಶ, ಎ.ವಿಜಯ್ ಮಾತನಾಡಿದರು. ಉಪನ್ಯಾಸಕರಾದ ಅನ್ನಪೂರ್ಣ ಸೊಬಗಿನ, ಭೂಪಾಲ್ ಬಾಳಂಬೀಡ, ರೇಖಾ ಬಿಳಗಲಿ, ಕಲ್ಪನಾ ಕುಡಲ್ಕರ್, ಅನಿತಾ ಭಟ್ ಸೇರಿದಂತೆ ವಿದ್ಯಾರ್ಥಿಗಳಿದ್ದರು. ಕಾವ್ಯ ಮತ್ತು ದಿವ್ಯ ಪ್ರಾರ್ಥಿಸಿ, ಅಕ್ಕಮ್ಮ ಸ್ವಾಗತಿಸಿ, ವಿಜಯಲಕ್ಷ್ಮಿ ವಂದಿಸಿ ತೇಜಸ್ವಿನಿ ನಿರೂಪಿಸಿದರು. ದ್ವಿತೀಯ ಬಿಎಯಲ್ಲಿ ಹೆಚ್ಚು ಅಂಕ ಪಡೆದ ಆರ್.ಭಾವನಾ, ಪಲ್ಲವಿ ಎಂ.ನಾಯ್ಕ್ ಅವರಿಗೆ ಹಾಗೂ ರಸ ಪ್ರಶ್ನೆಯಲ್ಲಿ ವಿಜೇತರಾದವರಿಗೆ ಪುಸ್ತಕ ಬಹುಮಾನ ನೀಡಲಾಯಿತು. ನಂತರ ಅಂತಿಮ ಬಿಎ ವಿದ್ಯಾರ್ಥಿಗಳು ಕಾಲೇಜಿಗೆ ಪುಸ್ತಕಗಳನ್ನು ಕೊಡುಗೆ ನೀಡಿದರು.