ಶಿವಮೊಗ್ಗ: ಜಿಲ್ಲೆಯಲ್ಲಿನ ಶರಾವತಿ ಸಂತ್ರಸ್ತರ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಜಿಲ್ಲಾ ಪಂಚಾಯಿತಿಯ ಸಹ್ಯಾದ್ರಿ ಸಭಾಂಗಣದಲ್ಲಿ ಶರಾವತಿ ಸಂತ್ರಸ್ತರ ಪುನರ್ವಸತಿ ಮತ್ತು ಸಮಸ್ಯೆಗೆ ಶಾಶ್ವತ ಒದಗಿಸುವ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಹುದಿನಗಳ ಈ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸಿಎಂ ಮತ್ತು ಡಿಸಿಎಂ ಉತ್ಸುಕರಾಗಿದ್ದಾರೆ ಎಂದರು.
ಕಳೆದ ವರ್ಷ ಶರಾವತಿ ಸಂತ್ರಸ್ಥರ ಪ್ರತಿನಿಧಿಗಳು, ಪರಿಸರಾಸಕ್ತರು, ತಜ್ಞರು, ಹಾಗೂ ಬುದ್ದಿಜೀವಿಗಳನ್ನೊಳಗೊಂಡ ಹಲವು ಸದಸ್ಯರ ಸಮಿತಿಯನ್ನು ರಚಿಸಿ, ಹೋರಾಟ ರೂಪಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿ ಅಂದಿನ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದರು.
ಹಲವು ದಶಕಗಳ ಹಿಂದೆಯೇ ಸರ್ಕಾರದಿಂದ ಹಕ್ಕುಪತ್ರಗಳನ್ನು ಪಡೆದುಕೊಂಡಿದ್ದು ಸಾಗುವಳಿ ಮಾಡುತ್ತಿರುವವರನ್ನು ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿಕೊಂಡಿರುವವರನ್ನು ಒಕ್ಕಲೆಬ್ಬಿಸುವ ಮೊದಲು ಅವರು ಹೊಂದಿರುವ ದಾಖಲಾತಿಗಳನ್ನು ಪರಿಶೀಲಿಸಬೇಕು. ಅಲ್ಲದೆ ಕಂದಾಯ ಇಲಾಖೆಯ ದಾಖಲೆಗಳಲ್ಲಿಯೂ ಬದಲಾವಣೆ ಮಾಡಿಕೊಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳು ಕ್ರಮವಹಿಸುವ ಮುನ್ನ ಶರಾವತಿ ಸಂತ್ರಸ್ತರ ಸಮಸ್ಯೆ ಹೋರಾಟ ಸಮಿತಿಯ ಸದಸ್ಯರ ಸಲಹೆಯನ್ನು ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.ಸೊರಬ ತಾಲೂಕಿನ ಶಿಡ್ಡಿಹಳ್ಳಿ 140 ಜನರ ಮೇಲೆ ಮೊಕದ್ದಮೆ ದಾಖಲಿಸಿರುವುದು ಸರಿಯಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪುನರ್ ಪರಿಶೀಲಿಸಿ ಮೊಕದ್ದಮೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳು ಸೂಚಿಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಸಿ ಇ ಒ, ಶರಾವತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಐಎಸ್‌ಎಲ್ ತಾತ್ಕಾಲಿಕ ಚಾಲನೆ ಚುನಾವಣೆ ಗಿಮಿಕ್, ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿ: ಸಚಿವ ಮಧುಬಂಗಾರಪ್ಪ
ಶಿವಮೊಗ್ಗ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿಐಎಸ್‌ಎಲ್ ಕಾರ್ಖಾನೆಗೆ ತಾತ್ಕಾಲಿಕವಾಗಿ ಚಾಲನೆ ನೀಡಿದ್ದಾರೆ. ಆದರೆ ಪೂರ್ಣವಾಗಿ ಚಾಲನೆ ಕೊಟ್ಟರೆ ಒಳ್ಳೆಯದು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಐಎಸ್ ಎಲ್ ಕಾರ್ಖಾನೆಯನ್ನು ರಾಜ್ಯ ಸರಕಾರ ಬಂದ್ ಮಾಡ್ತೀವಿ ಅಂತಾ ಎಲ್ಲೂ ಹೇಳಿರಲಿಲ್ಲ.ಇಲ್ಲಿನ ಜನಪ್ರತಿನಿಧಿಗಳು, ಸಂಸದರು ಆಗಾಗ ಹೇಳಿಕೆ ಕೊಟ್ಟರು.ಇನ್ನೊಂದು 7ತಿಂಗಳಿಗೆ ಲೋಕಸಭೆ ಚುನಾವಣೆ ಬರಲಿದೆ.ವಿಐಎಸ್ ಎಲ್ ಗೆ ತಾತ್ಕಾಲಿಕವಾಗಿ ಚಾಲನೆ ಕೊಟ್ಟಿದ್ದಾರೆ ಪೂರ್ಣವಾಗಿ ಚಾಲನೆ ಕೊಟ್ಟರೆ ಒಳ್ಳೆಯದು ಎಂದರು.
ಕಾರ್ಖಾನೆ ಮುಚ್ಚದೇ ಮುಂದುವರಿಸಿದರೆ ಒಳ್ಳೆಯದು. ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆ ಶಿವಮೊಗ್ಗ ಜಿಲ್ಲೆಗೆ ಕಿರೀಟ. ಕಾರ್ಖಾನೆ ನಡೆಸಲು ಹೊರೆ ಇರುತ್ತದೆ. ಅದನ್ನು ಉಳಿಸುವುದು ಕೇಂದ್ರ ಸರಕಾರದ ಕೈಯಲ್ಲಿರುತ್ತದೆ. ಕೆಲವರು ಕೆಲಸ ಬಿಟ್ಟು ಹೋಗಿದ್ದಾರೆ ಅವರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಜೊತೆ ಚರ್ಚೆ ಮಾಡಿದ್ದೇನೆ ಎಂದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಖರ್ಗೆ ವಿರುದ್ಧ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ರಾಜಕಾರಣಿಗಳು ಎಲ್ಲರಿಗು ಮಾದರಿಯಾಗಿರಬೇಕು.ಮೊದಲು ಖರ್ಗೆ ಅಂದ್ರು, ಆಮೇಲೆ ಇಲ್ಲ ಅಂದ್ರು.ವ್ಯಕ್ತಿಗತ ನಿಂದನೆ ಒಳ್ಳೆಯದಲ್ಲ, ನಿಲ್ಲಬೇಕು. ಅಭಿವೃದ್ಧಿ, ಕಾರ್ಯಕ್ರಮ ಕುರಿತು ಮಾತನಾಡಬೇಕು ಎಂದರು.
ವರ್ಗಾವಣೆ ದಂಧೆ ಎಚ್ ಡಿಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ವರ್ಗಾವಣೆ ಕುರಿತು ಮಾತನಾಡುವ ಕುಮಾರಸ್ವಾಮಿ ಅವರು ಈ ಕೆಲಸವನ್ನು ಎಷ್ಟು ಸಲ ಮಾಡಿದ್ದಾರೆ.ಪೆನ್ ಡ್ರೈವ್ ಇಟ್ಟುಕೊಂಡು ಬಂದ್ರು ಏನು ಆಗಲಿಲ್ಲ. ಆ ರೀತಿ ದೂರು ಇದ್ದರೆ ನನಗೆ ತಿಳಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಈ ರೀತಿ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಇವರು ರಾಜ್ಯವನ್ನು ಆಳಿದವರು ಈ ರೀತಿ ತಪ್ಪು ಮಾಹಿತಿ ಕೊಟ್ಟರೆ ರಾಜ್ಯದ ಬಗ್ಗೆ ತಪ್ಪು ಮಾಹಿತಿ ಹೋಗ್ತದೆ. ಈ ರೀತಿ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದರು.