Malenadu Mitra
ರಾಜ್ಯ ಶಿವಮೊಗ್ಗ

‘ಉಳ್ಳವನೇ ಭೂಮಿ ಒಡೆಯ’ ಬಿಜೆಪಿ ಸಿದ್ಧಾಂತ : ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪರಿಗೆ ದೇವರಾಜು ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿಕೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದೇವರಾಜ ಅರಸರು ಜಾರಿಗೆ ತಂದಿದ್ದು, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಹೋರಾಟ ಮಾಡಿದ್ದು ಉಳುವವನೇ ಭೂಮಿ ಒಡೆಯ ಆಗಬೇಕು ಎನ್ನುವುದಾಗಿತ್ತು. ಆದರೆ, ಬಿಜೆಪಿ ಬಂದ ಮೇಲೆ ಉಳ್ಳವನೇ ಭೂಮಿ ಒಡೆಯ ಎನ್ನುವಂತಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಾನುವಾರ ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜ ಅರಸು ಅವರ ೧೦೮ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅರಸು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ‘ಕಾಗೋಡು ಹೋರಾಟ ಮತ್ತು ಗೇಣಿ ಹೋರಾಟದ ಫಲಾನುಭವಿಗಳು ಮತ್ತು ಯುವಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಬಸವಣ್ಣನವರಿಂದ ಹಿಡಿದು ಕೃಷ್ಣರಾಜ ಒಡೆಯರು ಮತ್ತು ದೇವರಾಜ ಅರಸುರವರವರೆಗೂ ಸಾಮಾಜಿಕ ನ್ಯಾಯ ಒದಗಿಸಿದ ಚರಿತ್ರೆ ನಮ್ಮ ನಾಡಿಗೆ ಇದೆ. ದೇವರಾಜ ಅರಸು ಅವರ ಕಾರ್ಯಕ್ರಮಗಳ ಅನುಕೂಲ ಪಡೆದ ಫಲಾನುಭವಿಗಳು ಮತ್ತು ಅವರ ಮಕ್ಕಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿ ಇರಬೇಕು’ ಎಂದೂ ಮುಖ್ಯಮಂತ್ರಿ ಹೇಳಿದರು.

ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ಇದ್ದರೂ ಅದು ಜಾರಿ ಆಗಿರಲಿಲ್ಲ. ದೇವರಾಜ ಅರಸರು ಮುಖ್ಯಮಂತ್ರಿಯಾಗಿ ಹಾವನೂರು ವರದಿ ತರಿಸಿಕೊಂಡು ಅದನ್ನು ಜಾರಿ ಮಾಡುವ ಎದೆಗಾರಿಕೆ ತೋರಿಸಿದರು. ಹೀಗೆ ಮಾಡುವಾಗ ಎಲ್ಲ ಜಾತಿ-ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡರು. ಆ ಮೂಲಕ ಸಂವಿಧಾನಬದ್ಧವಾದ ಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೆ ತಂದರು’ ಎಂದು ಹೇಳಿದರು.


ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ

ಸಮಾಜವಾದಿ ಚಳವಳಿ ಮತ್ತು ಗೇಣಿ ಹೋರಾಟಗಾರ ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜು ಅರಸು ಪ್ರಶಸ್ತಿ ಲಭಿಸಿರುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ’ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು. ನಾನು ಮುಖ್ಯಮಂತ್ರಿ ಆಗಿರುವ ಅವಧಿಯಲ್ಲೇ ಕಾಗೋಡು ತಿಮ್ಮಪ್ಪ ಅವರಿಗೆ ಅರಸು ಪ್ರಶಸ್ತಿ ಲಭಿಸಿರುವುದು ನನಗೆ ಅತ್ಯಂತ ಖುಷಿಯಾಗಿದೆ. ಬಹಳಷ್ಟು ಯುವ ನಾಯಕರನ್ನು ಕಾಗೋಡು ತಿಮ್ಮಪ್ಪ ಬೆಳೆಸಿದ್ದಾರೆ’ ಎಂದೂ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್ ಇದ್ದರು.

Ad Widget

Related posts

ಅಂದಗಾತಿಯ ಸಾವಿನ ಹಿಂದಿನ ಕರಾಳ ಮುಖ ಗೊತ್ತೆ ? ಆನೆಗದ್ದೆಯ ಮನೆಯೊಂದರಲಿ ಒಂದು ತಿಂಗಳಲ್ಲಿ ಎರಡು ಆತ್ಮಹತ್ಯೆನಡೆದದ್ದಾದರೂ ಯಾಕೆ ?

Malenadu Mirror Desk

ಜು.19,22 ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಕಲ ಸಿದ್ದತೆ : ಸಿಇಓ ವೈಶಾಲಿ

Malenadu Mirror Desk

ಕುವೆಂಪು ವಿವಿವಿದ್ಯಾರ್ಥಿಗಳ ನೆರವಿಗೆ ಡಿಸಿಎಂ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.