ಶಿವಮೊಗ್ಗ,ಆ.೨೭: ಮಕ್ಕಳ ಸಂಖ್ಯೆ ತೀರಾ ಕಡಿಮೆ ಇರುವ ಶಾಲೆಗಳನ್ನು ವಿಲೀನಗೊಳಿಸುವಂತೆ ಶಾಸಕರುಗಳಿಂದ ಸಲಹೆಗಳು ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ಪಡೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಡೆ ಶಿಕ್ಷಕರಿಗೆ ಕೆಲಸವೇ ಇಲ್ಲದಂತಾಗಿದೆ. ಮಕ್ಕಳಿಗೂ ಶಾಲಾ ವಾತಾವರಣ ಹಿತಕರವಾಗಿರುವುದಿಲ್ಲ. ಸಾರಿಗೆ ವ್ಯವಸ್ಥೆ ಅನುಕೂಲ ಇರುವ ಕಡೆ ಮಕ್ಕಳ ಸಂಖ್ಯೆ ಇರುವ ಶಾಲೆಗಳನ್ನು ವಿಲೀನ ಮಾಡಿದರೆ ಅನಕೂಲವಾಗುವುದು ಎಂಬ ಮಾತು ಕೇಳಿಬಂದಿವೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯಶಿಕ್ಷಣ ನೀತಿ ಜಾರಿಗೆ ತಯಾರಿಗಳು ನಡೆಯುತ್ತಿದ್ದು, ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಕೆಲಸಗಳು ನಡೆಯುತ್ತಿವೆ. ಎನ್.ಇ.ಪಿ ರದ್ದು ಮಾಡುವುದರಿಂದ ಇಲಾಖೆಗೆ ಕೇಂದ್ರದ ಅನುದಾನ ಕೊರತೆ ಯಾಗಲಿದೆ. ಈ ಬಗ್ಗೆ ಕೇಂದ್ರಸರಕಾರದ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಲಾಗುವುದು. ರಾಜ್ಯ ಶಿಕ್ಷಣ ನೀತಿಯ ಜಾರಿಯೊಂದಿಗೆ ಶಿಕ್ಷಕರಿಗೆ ತರಬೇತಿ ನೀಡಲು ಆದ್ಯತೆ ನೀಡಲಾಗುವುದು. ಡಯೆಟ್‌ನಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಸಮರ್ಪಕ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
ಸರಕಾರಿ ಶಾಲೆಗಳ ಬಲವರ್ದನೆಗೆ ಆದ್ಯತೆ ನೀಡಲಾಗುವುದು. ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಯಾವ ರೀತಿಯ ಶಿಕ್ಷಣ ಬೇಕು ಅದನ್ನು ಕೊಡುವುದು ನಮ್ಮ ಕೆಲಸ. ಯಾವುದೇ ವಿಚಾರಗಳನ್ನು ಹೇರಿಕೆ ಮಾಡುವುದು ಶಿಕ್ಷಣ ಇಲಾಖೆ ಕೆಲಸವಲ್ಲ.ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಇಂಗ್ಲೀಷ್ ಕಲಿಕೆಗೆ ಈಗಾಗಲೇ ಆದ್ಯತೆ ನೀಡಲಾಗಿದೆ. ಪಬ್ಲಿಕ್ ಶಾಲೆಗಳನ್ನು ಹೆಚ್ಚಾಗಿ ಆರಂಭಿಸುವ ದಿಸೆಯಲ್ಲಿ ಸರಕಾರ ಮುಂದಡಿಯಿಟ್ಟಿದೆ. ಪ್ರತಿಜಿಲ್ಲೆಗಳ ಪ್ರವಾಸ ಮಾಡುತಿದ್ದು, ಸರಕಾರಿ ಶಾಲೆಗಳ ಮೂಲಸೌಕರ್ಯದ ಬಗ್ಗೆ ವರದಿ ತರಿಸಿಕೊಂಡು ಹೆಚ್ಚಿನ ಅನುದಾನ ಒದಗಿಸಲಾಗುವುದು. ಸಿಎಂ ಮತ್ತು ಡಿಸಿಎಂ ಇಬ್ಬರೂ ನನ್ನ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಎಂದರು.
ಅಭ್ಯರ್ಥಿ ಆಯ್ಕೆ ಹೈಕಮಾಂಡ್ ತೀರ್ಮಾನ
ಲೋಕಸಭೆ ಚುನಾವಣೆ ತಯಾರಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿದವರಿಗೆ ಸ್ವಾಗತ. ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಪಕ್ಷದ ನಾಯಕರ ತೀರ್ಮಾನಕ್ಕೆ ಬಿಟ್ಟಿದ್ದು, ಪಕ್ಷಕ್ಕೆ ಲಾಭವಾಗುವವರನ್ನು ಮಾತ್ರ ಸೇರ್ಪಡೆಮಾಡಿಕೊಳ್ಳಲಾಗುವುದು. ಅಪಾಯಕಾರಿಗಳನ್ನು ದೂರ ಇಡುವ ಪ್ರಯತ್ನ ನಿರಂತರವಾಗಿದೆ. ಪಕ್ಷಕ್ಕೆ ಬರುವ ನಾಯಕರ ಬಗ್ಗೆ ಕಾರ್ಯಕರ್ತರು ಮತ್ತು ಮುಖಂಡರು ಬಹಿರಂಗವಾಗಿ ಹೇಳಿಕೆ ನೀಡಬಾರದು. ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ದರಾಗಿರಬೇಕು. ಆಯನೂರು ಮಂಜುನಾಥ್ ಅವರಂತಹ ಹಿರಿಯ ನಾಯಕರು ಬಂದಿರುವುದು ಸ್ವಾಗತಾರ್ಹ ಎಂದು ಮಧುಬಂಗಾರಪ್ಪ ಹೇಳಿದರು. ಪಕ್ಷದ ಪ್ರಮುಖರಾದ ಎಸ್.ಕೆ.ಮರಿಯಪ್ಪ, ಜಿ.ಡಿ.ಮಂಜುನಾಥ್, ಕಾಶಿವಿಶ್ವನಾಥ್,ರಮೇಶ್ ಶೆಟ್ಟಿ ಮತ್ತಿತರರು ಹಾಜರಿದ್ದರು.