ಅದೊಂದು ಅವಿಸ್ಮರಣೀಯ ಕ್ಷಣ, ರಾಜಕೀಯವಾಗಿ ತಮಗೆ ಎಲ್ಲವನ್ನೂ ನೀಡಿರುವ ಮಣ್ಣಿನ ಋಣ ತೀರಿಸಿರುವ ಭಾವ. ತಾವು ಕಂಡ ಕನಸೊಂದು ಸಾಕಾರಗೊಂಡ ಘಳಿಗೆ. ಈ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು.
ಹೌದು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಪರ್ವಕ್ಕೆ ದೊಡ್ಡ ಕೊಡುಗೆ ನೀಡಿದವರು ಯಡಿಯೂರಪ್ಪ. ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ತವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಈ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಮಾಡಬೇಕು. ಇಲ್ಲಿನ ಜನರು ಲೋಹದ ಹಕ್ಕಿಯಲ್ಲಿ ಹಾರಬೇಕು. ಆ ಮೂಲಕ ಮಲೆನಾಡು ಮತ್ತೊಂದು ಹೆಜ್ಜೆ ಮುಂದೆ ಹೋಗಬೇಕೆಂಬ ಅವರ ಕನಸು ಸಾಕಾರಗೊಂಡಿದೆ.
ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದರು. ಆದರೆ ವಿಮಾನ ಹಾರಾಟ ಆರಂಭವಾಗಿರಲಿಲ್ಲ. ತಾಂತ್ರಿಕ ಕೆಲಸಗಳು ಮುಗಿದ ಬಳಿಕ ಆ.೩೧ ರಂದು ಬೆಂಗಳೂರಿನಿಂದ ಮೊದಲ ವಿಮಾನ ಶಿವಮೊಗ್ಗಕ್ಕೆ ಬಂದಿಳಿಯಿತು.
ವಿಮಾನದಲ್ಲಿ ನಿಲ್ದಾಣದ ರೂವಾರಿ ಬಿ.ಎಸ್.ಯಡಿಯೂರಪ್ಪ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ ,ಬಿ.ವೈ ವಿಜಯೇಂದ್ರ, ಮಾಜಿ ಸಚಿವರಾದ ಈಶ್ವರಪ್ಪ, ಹರತಾಳು ಹಾಲಪ್ಪ ಮುಂತಾದ ಮುಖಂಡರು ಸಹ ಪ್ರಯಾಣಿಕರೊಂದಿಗೆ ಕುವೆಂಪು ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ಇಂದು ಐತಿಹಾಸಿಕ ದಿನ ಇದೊಂದು ಶುಭ ಘಳಿಗೆ ಎಂದು ಹೇಳಿದರು ಶಿವಮೊಗ್ಗ ಏರ್ ಪೋರ್ಟ್ ೨೨೦ ಕೋಟಿಗೆ ಎಟಿಆರ್ ವಿಮಾನ ಹಾರಾಟಕ್ಕೆ ಅವಕಾಶವಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಅನುದಾನ ನೀಡಿ, ಬೋಯಿಂಗ್ ವಿಮಾನ ಹಾಗು ಕಾರ್ಗೋ ವಿಮಾನಗಳ ಹಾರಾಟಕ್ಕೂ ಅವಕಾಶವಾಗುವಂತೆ ನಿಲ್ದಾಣ ವಿಸ್ತರಿಸಿದ್ದಾರೆ. ನೈಟ್ ಲ್ಯಾಂಡಿಂಗ್ ಗೂ ಕೂಡ ಅವಕಾಶ ಕಲ್ಪಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ವಿಮಾನ ನಿಲ್ದಾಣ ಪೂರಕವಾಗಿದೆ
-ಎಂ.ಬಿ ಪಾಟೀಲ್, ಮೂಲಸೌಕರ್ಯ ಅಭಿವೃದ್ಧಿ ಸಚಿವ
ಶಿವಮೊಗ್ಗ ವಿಮಾನ ನಿಲ್ದಾಣವು ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಪರಿವರ್ತನೆಯಾಗಲಿದೆ. ನೈಟ್ ಲ್ಯಾಂಡಿಂಗ್ ಗೂ ವ್ಯವಸ್ಥೆ ಮಾಡಲಾಗಿದೆ ಶಿವಮೊಗ್ಗದ ಅಭಿವೃದ್ಧಿ ದೃಷ್ಟಿಯಿಂದ ವಿಮಾನ ನಿಲ್ದಾಣವು ಮುಖ್ಯವಾಗಿದೆ
- ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಯಲ್ಲಿ ಯಡಿಯೂರಪ್ಪ ಅವರ ಪಾತ್ರ ಮಹತ್ತರವಾದುದು. ವಿಮಾನ ನಿಲ್ದಾಣ ಅವರ ಕನಸು. ಮುಂದೆ ಜಿಲ್ಲೆಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸ ಮುಂದುವರಿಸಲು ಪ್ರೇರಣೆಯಾಗಿದೆ. ಪ್ರವಾಸೋದ್ಯಮ, ಕೈಗಾರಿಕೆ ಅಭಿವೃದ್ಧಿಗೆ ಸರಕಾರ ಮುಂದಾಗಲಿದೆ.
ಮಧುಬಂಗಾರಪ್ಪ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ