Malenadu Mitra
ರಾಜ್ಯ ಶಿವಮೊಗ್ಗ

ಅರಣ್ಯ ರಕ್ಷಕರ ಸೇವೆ ಅನನ್ಯ, ವನ್ಯಸಂಪತ್ತು ರಕ್ಷಿಸುವವರಿಗೂ ಸೂಕ್ತ ಗೌರವ ಸಿಗಬೇಕು, ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ನ್ಯಾಯಾಧೀಶರಾದ ಮಂಜುನಾಥನಾಯಕ್ ಅಭಿಮತ

ಶಿವಮೊಗ್ಗ: ದೇಶ ರಕ್ಷಣೆಗಾಗಿ ಹೋರಾಡಿ ಪ್ರಾಣಾರ್ಪಣೆ ಮಾಡುವ ಸೈನಿಕನಿಗೆ ದೊರೆಯುವ ಗೌರವ ದೇಶದ ಅಮೂಲ್ಯ ವನ್ಯ ಸಂಪತ್ತನ್ನು ರಕ್ಷಿಸುವ ಅರಣ್ಯ ಸಿಬ್ಬಂದಿ ಹಾಗೂ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರತರಾದಾಗ ಮೃತರಾದಾಗಲೂ ಅದೇ ರೀತಿಯ ಗೌರವ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಅವರು ಹೇಳಿದರು.
ಅರಣ್ಯ ಇಲಾಖೆಯು ನಗರದ ಶ್ರೀಗಂಧದಕೋಠಿಯಲ್ಲಿ ಏರ್ಪಡಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮೃತ ಅರಣ್ಯ ಸಿಬ್ಬಂದಿಗಳ ಸ್ಮರಣಾರ್ಥ ಇರುವ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ದೇಶ ರಕ್ಷಣೆಗಾಗಿ ಶ್ರಮಿಸುವ ಪ್ರತಿಯೊಬ್ಬರ ಜೀವವೂ ಅಮೂಲ್ಯ. ಅವರು ಸಮಾಜದಲ್ಲಿ ಮೌಲ್ಯಯುತ ಜೀವನ ನಡೆಸುವಂತಾಗಬೇಕು ಎಂದ ಅವರು, ಅರಣ್ಯ ರಕ್ಷಕರ ಸಾವಿಗೆ ಪ್ರಾಣಿಗಳು ಮಾತ್ರವಲ್ಲ ಮನುಷ್ಯನೂ ಕಾರಣನಾಗಿರುವುದು ವಿಷಾದದ ಸಂಗತಿ. ಅನೇಕ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿರುವುದು ಬೇಸರದ ಸಂಗತಿ ಎಂದರು.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಮಾತನಾಡಿ, ಭಾರೀ ಪ್ರಮಾಣದಲ್ಲಿ ಕಾಡನ್ನು ನಾಶಗೊಳಿಸಿ, ಕೃತಕವಾಗಿ ಮರಗಳನ್ನು ನೆಡುವುದರಿಂದ ಪರಿಸರ ಮತ್ತು ಅರಣ್ಯ ಸಂರಕ್ಷಿಸಿದಂತಾಗಲಿದೆ ಎಂದು ಅನೇಕ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಇದು ಸಲ್ಲದು. ಇರುವ ಅರಣ್ಯವನ್ನು ಅದು ಇರುವಂತಹ ರೀತಿಯಲ್ಲಿಯೇ ಉಳಿಸಿ, ಬೆಳೆಸಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರು ಮಾತನಾಡಿ, ಮನುಷ್ಯನ ಅವ್ಯಾಹತ ದಾಳಿಯಿಂದಾಗಿ ಅರಣ್ಯಗಳು ದಿನೇದಿನೇ ನಾಶಗೊಳ್ಳುತ್ತಿವೆ. ಮನುಷ್ಯನ ಆಸೆಗೆ ಮಿತಿಯಿಲ್ಲದಂತಾಗಿದೆ. ಇದರಿಂದಾಗಿ ಅರಣ್ಯದಲ್ಲಿನ ಅಸಂಖ್ಯಾತ ಮರಗಳು, ಪ್ರಾಣಿ ಪಕ್ಷಿ ಸಂಕುಲದ ನಿರಂತರ ದಾಳಿಗೆ ತುತ್ತಾಗುತ್ತಿದೆ. ಇದರ ನಿಯಂತ್ರಣ ಅನಿವಾರ್ಯವಾಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಭದ್ರತೆ, ಶಾಂತಿಪಾಲನೆ, ಅರಣ್ಯ ಸಂರಕ್ಷಣೆ ಗಡಿರಕ್ಷಣೆಗೆ ಸಮನಾದ ಕಾರ್ಯವಾಗಿದೆ ಎಂದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ.ಹನುಮಂತಪ್ಪ ಅವರು ಮಾತನಾಡಿ, ಏರುತ್ತಿರುವ ಜನಸಂಖ್ಯೆಯೂ ಕೂಡ ಭೂಮಿ, ಅರಣ್ಯ, ಸಸ್ಯ ಮತ್ತು ಪ್ರಾಣಿಸಂಕುಲದ ನಾಶಕ್ಕೆ ಕಾರಣವಾಗುತ್ತಿದೆ. ಎಲ್ಲರೂ ಅರಿತು ಅರಣ್ಯ ರಕ್ಷಣೆಗೆ ಮುಂದಾಗಬೇಕು. ಅರಣ್ಯ ರಕ್ಷಕರೂ ಕೂಡ ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ-ಸಿಬ್ಬಂದಿಗಳು ಹುತಾತ್ಮರಿಗೆ ಪುಷ್ಪಗುಚ್ಛವಿಟ್ಟು ಗೌರವ ಸಲ್ಲಿಸಿದರು.

ಅರಣ್ಯವನ್ನು ರಾಷ್ಟ್ರೀಯ ಸಂಪತ್ತು ಎಂದೇ ಭಾವಿಸಿ ಅದರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಅರಣ್ಯದ ಮಹತ್ವದ ಕುರಿತು ಎಲ್ಲರಲ್ಲೂ ಅರಿವು ಮೂಡಬೇಕು. ಅರಣ್ಯ ರಕ್ಷಕರು ಬಹುತೇಕ ಸಂದರ್ಭಗಳಲ್ಲಿ ತಮ್ಮ ಜೀವದ ಹಂಗನ್ನು ಕಾರ್ಯನಿರ್ವಹಿಸುತ್ತಿದ್ದಾರೆ. ಅರಣ್ಯ ರಕ್ಷಣೆಗೆ ಕಾರಣರಾಗಿರುವ ಮನುಷ್ಯ ತನ್ನ ದುರಾಸೆಯನ್ನು ಬಿಟ್ಟು, ಇಲಾಖೆಯೊಂದಿಗೆ ಸಹಕರಿಸಬೇಕು.

ಡಾ.ಸೆಲ್ವಮಣಿ, ಜಿಲ್ಲಾಧಿಕಾರಿ

Ad Widget

Related posts

ಫೆ. 12: ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ :ಸಂಸದ ರಾಘವೇಂದ್ರ ಹೇಳಿಕೆ

Malenadu Mirror Desk

ಅಂಗನವಾಡಿ,ಅಕ್ಷರ ದಾಸೋಹ ನೌಕರರ ಪ್ರತಿಭಟನೆ

Malenadu Mirror Desk

ಹಿಂದುತ್ವ ಅಭಿವೃದ್ಧಿ ಎರಡೂ ನಮ್ಮ ಚುನಾವಣೆ ವಿಷಯ: ಎಸ್.ಎನ್. ಚನ್ನಬಸಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.