ಶಿಕಾರಿಪುರ:ಬಿಜೆಪಿಯ ಭಾವನಾತ್ಮಕ ರಾಜಕೀಯಕ್ಕೆ ಜನರೇ ಬ್ರೇಕ್ ಹಾಕಬೇಕು ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಕರೆ ನೀಡಿದರು.
ಶಿಕಾರಿಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವ ಮೂಲಕ ಬದ್ಧತೆಯನ್ನು ಪ್ರದರ್ಶಿಸಿದೆ ಎಂದರು.
ರಾಜ್ಯದಲ್ಲಿ ಬಡವರ ಪರವಾದ ಸರ್ಕಾರ ಇದ್ದರೆ ಭಾವನಾತ್ಮಕವಾಗಿ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದ ಅವರು, ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬ ಭರವಸೆ ಇದೆ. ದೇವರಾಜ ಅರಸು, ಬಂಗಾರಪ್ಪ ರವರು ಭೂ ರೈತರಿಗೆ ಭೂಮಿ ಕೊಟ್ಟರು, ಉಚಿತ ವಿದ್ಯುತ್ ಕೊಟ್ಟರು, ರೈತರಿಗೆ ಹಕ್ಕು ಪತ್ರ ಕೊಟ್ಟರು, ಅವರ ಕೆಲಸಗಳಿಂದಾಗಿಯೇ ಅವರು ಎಂದಿಗೂ ಜನರ ಮನಸ್ಸಿನಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿರುವ ಬಡವರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.
ಕಳೆದ ಚುನಾವಣೆಯಲ್ಲಿ ಶಿಕಾರಿಪುರ ಕಾಂಗ್ರೆಸ್ ಪಕ್ಷದ ಶಕ್ತಿ ತೋರಿಸಿದ್ದೀರಿ.ನನಗೆ ಶಿಕಾರಿಪುರ ಹಾಗೂ ಸೊರಬ ಬೇರೆ ಬೇರೆ ಅಲ್ಲ. ಎರಡು ಕಣ್ಣುಗಳಿದ್ದಂತೆ.ಇಲ್ಲಿ ಪಕ್ಷದ ಅಭ್ಯರ್ಥಿ ಸೋತಿರಬಹುದು. ಅದ್ರೇ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ.ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಶಿಕಾರಿಪುರ ಕ್ಷೇತ್ರದಲ್ಲಿ ಜಾರಿಗೆ ತಂದಿರುವ ನೀರಾವರಿ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಅರಂಭವಾಗಿದ್ದವು, ತದ ನಂತರ ಬಂದವರು, ಅನುದಾನ ನೀಡಿ ಜಾರಿಗೊಳಿಸಿದ್ದಾರೆ . ಇನ್ನೂ ಆಗಬೇಕಿರುವ ಕಾಮಗಾರಿಯನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದರು.
ಶಿಕಾರಿಪುರ ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳು ದೂರವಾಗಿದ್ದು, ಈಗ ಎಲ್ಲಾ ಬಗೆಹರಿದಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಶಿಕಾರಿಪುರದಲ್ಲಿ ಕಾಂಗ್ರೆಸ್ ಮುಖಂಡರ ಮಾತುಗಳಿಗೆ ಮನ್ನಣೆ ಸಿಗಲಿದೆ. ಇಲ್ಲಿ ನಿಮ್ಮದೇ ಸರ್ಕಾರವಿದ್ದು, ನನಗೆ ಮಾಡಿದ ಅಭಿನಂದನೆ ನಿಮಗೆ ಸಲ್ಲಬೇಕು. ಬಡವರ ಧ್ವನಿಯಾಗಿ ಕೆಲಸ ಮಾಡೋಣ. ಹಕ್ಕುಪತ್ರ ನೀಡದೆ ವಂಚಿಸಲಾಗಿದೆ ನಮ್ಮ ಸರಕಾರ ಬಡವರ ಭೂಮಿಗೆ ಸಾಗುವಳಿ ಪತ್ರ ನೀಡಲಿದೆ ಎಂದು ಮಧುಬಂಗಾರಪ್ಪ ಹೇಳಿದರು.
ನಾಗರಾಜ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮ್ಮಿಶ್ರ ಸರ್ಕಾರವಿದ್ದ ಸಮಯದಲ್ಲಿ ಮಧು ಬಂಗಾರಪ್ಪ ಅವರ ಪಾದಯಾತ್ರೆ ಫಲದಿಂದ ಇಂದು ಶಿಕಾರಿಪುರದಲ್ಲಿ ಏತನೀರಾವರಿ ಪೂರ್ಣಗೊಂಡಿವೆ. ಶಿಕಾರಿಪುರದ ನಕಲಿ ಹುಲಿಗಳು ಸುಳ್ಳು ಹೇಳುತ್ತಾ ಕಾಲ ಕಳೆಯುತಿದ್ದಾರೆ ಎಂದು ಪರೋಕ್ಷವಾಗಿ ಬಿ ಎಸ್ ವೈ ಕುಟುಂಬಕ್ಕೆ ಕುಟುಕಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ ಮಾತನಾಡಿ, ಮಧುಬಂಗಾರಪ್ಪ ಅವರು ಸಚಿವರಾಗಿದ್ದು, ಅವರು ನಯವಿನಯದ ರಾಜಕಾರಣ ಈ ಜಿಲ್ಲೆಯ ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗುತ್ತದೆ. ಬಿಜೆಪಿಯ ಸ್ವಯಂಘೋಷಿತ ವಿಶ್ವಗುರುವಿನ ಬಣ್ಣ ಬಯಲಾಗಿದೆ. ನಮ್ಮವರೇ ಆದ ಮಲ್ಲಿಕಾರ್ಜುನ್ ಖರ್ಗೆ ಅವರ ಕೈ ಬಲಪಡಿಸಲು ಜನರು ಕಾಂಗ್ರೆಸ್ ಬೆಂಬಲಿಸಬೇಕೆಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂದರೇಶ್ ಹೆಚ್ ಎಸ್ ಮಾತನಾಡಿ,ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ಬಿಜೆಪಿಗೆ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮಹೇಶ್ ಹುಲ್ಮಾರ್, ಬಲ್ಕೀಶ್ ಬಾನು, ಎನ್.ರಮೇಶ್, ಆರ್ ಪ್ರಸನ್ನ ಕುಮಾರ್, ಆರ್ ಎಂ ಮಂಜುನಾಥ್ ಗೌಡ, ಎಸ್ ಕೆ ಮರಿಯಪ್ಪ, ನಗರದ ಮಹಾದೇಪ್ಪ, ಕಲಗೋಡು ರತ್ನಾಕರ್ ಇತರರು ಉಪಸ್ಥಿತರಿದ್ದರು. ರವೀಂದ್ರ ಅವರು ಎಲ್ಲರನ್ನೂ ಸ್ವಾಗಿತಿಸಿದರು. ರಾಘವೇಂದ್ರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಸ್ಥಳೀಯ ಮುಖಂಡರು ಮಾತನಾಡಿ ಯಡಿಯೂರಪ್ಪ ಕುಟುಂಬದವರ ವೈಫಲ್ಯಗಳನ್ನು ಮುಂದಿಟ್ಟರು.ಈ ಸಂದರ್ಭ ಅನೇಕ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಅವರಿಗೆ ಪಕ್ಷದ ಶಲ್ಯ ತೊಡಿಸಿದ ಮಧುಬಂಗಾರಪ್ಪ ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡರು
ಗಂಡುಗಲಿ ಬಂಗಾರಪ್ಪರ ಪುತ್ರ ಮಧು ಬಂಗಾರಪ್ಪ ಮಂತ್ರಿ ಆಗಿದ್ದಾರೆ ಇನ್ನು ಯಾರಿಗೂ ಹೆದರುವ ಅಗತ್ಯ ಇಲ್ಲ. ಶಿಕಾರಿಪುರದಲ್ಲಿ ಕಾಂಗ್ರೆಸ್ ವಿಜೃಂಭಿಸುತ್ತದೆ. ಇಲ್ಲಿರುವುದು ಒಂದೇ ಬಣ ಅದು ಕಾಂಗ್ರೆಸ್ ಪಕ್ಷದ್ದು, ಶಿಕಾರಿಪುರ ಸ್ವಾಮು ಹುಚ್ರಾಯ ಸ್ವಾಮಿ ಆಣೆಯಾಗೂ ನಾನು ಯಡಿಯೂರಪ್ಪ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ.
ಗೋಣಿ ಮಾಲ್ತೇಶ್, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ
ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರು, ಬಡವರ ಬದುಕಿಗೆ ಭದ್ರತೆ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಎರಡು ಸಾವಿರ ರೂ.ವನ್ನು ಹಣವನ್ನು ನೀಡುವ ಮೂಲಕ ಆರ್ಥಿಕ ಶಕ್ತಿ ನೀಡಿದೆ.ಇದರಿಂದ ಬಿಜೆಪಿಗೆ ಭಯ ಶುರುವಾಗಿದೆ. ಬಿಜೆಪಿ -ಜೆಡಿಎಸ್ ಮೈತ್ರಿ ಕುರುಡನ ಹೆಗಲ ಮೇಲೆ ಕುಳಿತ ಕುಂಟನ ಸವಾರಿ,ಯಾರು ಯಾರನ್ನು ಯಾವತ್ತು ಕೆಡವುತಾರೊ ಗೊತ್ತಿಲ್ಲ.
-ಆಯನೂರು ಮಂಜುನಾಥ್,
ಮಾಜಿ ಸಂಸದ