Malenadu Mitra
ರಾಜ್ಯ ಶಿವಮೊಗ್ಗ

ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ದ್ರೋಹ ಮಾಡಿದೆ: ಈಶ್ವರಪ್ಪ ಆರೋಪ

ಶಿವಮೊಗ್ಗ: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡಿ ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಇದು ಇಲ್ಲಿಯ ರೈತರಿಗೆ ಡಿ.ಕೆ.ಶಿವಕುಮಾರ್ ಮಾಡಿದ ದ್ರೋಹ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಜನರು ಬೀದಿಗಿಳಿದ ಮೇಲೆ ಅವರಿಗೆ ತಪ್ಪಿನ ಅರಿವಾಗಿ ಈ ಸಂಬಂಧ ಪ್ರಧಾನಿಯೊಂದಿಗೆ ಚರ್ಚೆ ಮಾಡಲು ದೆಹಲಿಗೆ ಹೋಗಿದ್ದಾರೆ ಎಂದು ಕಿಡಿಕಾರಿದರು.
ಬರಗಾಲ ನಷ್ಟದ ವರದಿಯೇ ಇಲ್ಲ:

ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದ್ದರೂ ಎಷ್ಟು ಮಳೆಯಾಗಿದೆ, ಕೊರತೆ ಎಷ್ಟು ಆಗಿದೆ. ಬೆಳೆ ನಷ್ಟ ಎಷ್ಟಾಗಿದೆ. ಎಷ್ಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಷ್ಟು ಜನರಿಗೆ ಪರಿಹಾರ ಕೊಟ್ಟಿದ್ದಾರೆ ಎಂಬ ಯಾವ ಬಗ್ಗೆಯೂ ರಾಜ್ಯ ಸರ್ಕಾರದ ಬಳಿ ಮಾಹಿತಿಯೇ ಇಲ್ಲ . ರಾಜ್ಯದ ಜನರ ಭೀಕರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಸರ್ಕಾರದ ಯಾವ ಮಂತ್ರಿಯೂ ಜನರ ಸಮಸ್ಯೆಗಳನ್ನು ಕೇಳುವುದಕ್ಕೆ ಹೋಗಿಲ್ಲ. ಬದಲಾಗಿ ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳುವಂತ ಕೃಷಿ ಸಚಿವರು ಈ ಸರ್ಕಾರದಲ್ಲಿ ಇದ್ದಾರೆ. ಇಷ್ಟು ದಿನವಾದರೂ ಇನ್ನೂ ಬೆಳೆನಷ್ಟದ ಬಗ್ಗೆ ಸರ್ವೆಯನ್ನೇ ಮಾಡಿಲ್ಲ. ಈಗ ಎಲ್ಲ ತಾಲೂಕಿನಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕಂದಾಯ ಸಚಿವರು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್‌ನವರು ಗ್ಯಾರೆಂಟಿ ಗುಂಗಿನಲ್ಲೇ ಲೋಕಸಭೆ ಗೆಲ್ಲಬೇಕು ಎಂಬ ಆಲೋಚನೆಯಲ್ಲಿದ್ದಾರೆ ಹೊರತು ಜನರ ಸಂಕಷ್ಟಗಳನ್ನು ಅರಿಯುವ ಪ್ರಯತ್ನ ಮಾಡುತ್ತಿಲ್ಲ. ಬರಗಾಲ ಸಂಬಂಧ ಈಗ ವರದಿ ತರಿಸಿಕೊಂಡು ಬಳಿಕ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಮಾಹಿತಿ ಇಲ್ಲದೆ ಹೋಗಿ ಕೇಂದ್ರ ಸರ್ಕಾರದ ಬಳಿ ಕರ್ನಾಟಕದ ಮರ್ಯಾದೆ ತೆಗಿಬೇಡಿ ಎಂದು ಚಾಟಿ ಬೀಸಿದರು.

ಸಿದ್ದರಾಮಯ್ಯ ವಿರುದ್ದ ಕ್ರಮಕ್ಕೆ ಆಗ್ರಹ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಕ್ಕರ್, ಇಸ್ತ್ರಿ ಪೆಟ್ಟಿಗೆ ವಿತರಿಸಿ ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿದ್ದಾರೆ ಎಂದು ಅವರ ಪುತ್ರ ಯತೀಂದ್ರ ಅವರೇ ಹೇಳಿದ್ದಾರೆ. ಇದನ್ನು ಚುನಾವಣೆ ಆಯೋಗ ಗಂಭೀರವಾಗಿ ಪರಿಗಣಿಸಿ, ಚುನಾವಣೆಯಲ್ಲಿ ಜನರಿಗೆ ಆಮಿಷವೊಡ್ಡಿ ಅಕ್ರಮವಾಗಿ ಗೆದ್ದಿರುವ ಸಿದ್ದರಾಮಯ್ಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗುಂಪುಗಾರಿಕೆಯೇ ಸರ್ಕಾರ 100 ದಿನದ ಸಾಧನೆ:
ಕಾಂಗ್ರೆಸ್ ಸರ್ಕಾರದ ಮಂತ್ರಿಗಳಲ್ಲೆ ಹೊಂದಾಣಿಕೆ ಇಲ್ಲ. ಸಿದ್ದರಾಮಯ್ಯ ಚೇಲಾಗಳು ಮೂರು ಡಿಸಿಎಂ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಗುಂಪುಗಾರಿಕೆಯೇ ಕಾಂಗ್ರೆಸ್ ನ ನೂರು ದಿನದ ಸಾಧನೆ.ಲೋಕಸಭೆ ಚುನಾವಣೆ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಭವಿಷ್ಯ ನುಡಿದರು. ಸುದ್ದಿಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್,ಪ್ರಮುಖರಾದ ಗಿರೀಶ್ ಪಟೇಲ್,ಎಸ್.ಎಸ್ ಜ್ಯೋತಿಪ್ರಕಾಶ್,ಮಾಜಿ ಮೇಯರ್ ಸುನೀತಾ ಅಣ್ಣಪ್ಪ,ಅಣ್ಣಪ್ಪ ಮತ್ತಿತರರಿದ್ದರು.

ಬರಿ ಬಾಯಲ್ಲಿ ಹೇಳಬೇಡಿ ತನಿಖೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಸರ್ಕಾರ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ ಬಿಟ್ಟರೆ ಈವರೆಗೆ ಒಂದೇ ಒಂದು ಪ್ರಕರಣ ಬಗ್ಗೆ ತನಿಖೆ ಮಾಡಿಲ್ಲ. ತನಿಖೆ ಮಾಡುತ್ತೇವೆ ಎಂದು ಬರೀ ಬಾಯಲ್ಲಿ ಹೇಳುವುದನ್ನು ಬಿಟ್ಟು ನೀವು ಬಂದಾಗಿನಿಂದ ಯಾವ ವಿಚಾರವನ್ನು ತನಿಖೆಗೆ ಒಪ್ಪಿಸಿದ್ದೀರಿ, ಎಷ್ಟು ಪ್ರಕರಣಗಳು ತನಿಖೆಯ ಹಂತದಲ್ಲಿವೆ ಎಂದು ಬಹಿರಂಗ ಪಡಿಸಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸರ್ಕಾರ ವಿರುದ್ಧ ಹರಿಹಾಯ್ದರು.
ಶಿವಮೊಗ್ಗದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅವ್ಯವಹಾರ ಬಗ್ಗೆ ಬರೀ ಬಾಯಲ್ಲಿ ಹೇಳಬೇಡಿ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಿ. ವಿಮಾನ ನಿಲ್ದಾಣ ವಿಚಾರದಲ್ಲೂ ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ವಿಮಾನ ನಿಲ್ದಾಣಕ್ಕೂ ಅವರಿಗೂ ಯಾವುದೇ ಸಂಬಂಧ ಇಲ್ಲ. ಲೂಟಿಯಾಗಿದೆ ಎಂದು ಅನಿಸಿದರೆ ತನಿಖೆ ಮಾಡಿ ಎಂದು ಕುಟುಕಿದರು.

ಚೈತ್ರಾ ವಿರುದ್ಧ ಕ್ರಮವಾಗಲಿ:
ಹಿಂದೂ ಸಂಘಟನೆ ಹೆಸರಲ್ಲಿ ಮೋಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಚೈತ್ರಾ ಕುಂದಾಪುರ ಮತ್ತು ಬಿಜೆಪಿಗೆ ಸಂಬಂಧ ಇಲ್ಲ. ಸಂಘಟನೆ ಹೆಸರು ದುರುಪಯೋಗ ಮಾಡಿಕೊಳ್ಳುವವರಿಗೆ ಶಿಕ್ಷೆ ಆಗಬೇಕು. ಚೈತ್ರಾ ತಪ್ಪು ಮಾಡಿದ್ದರೆ ಶಿಕ್ಷೆಯೂ ಆಗಲಿ, ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದರು.

Ad Widget

Related posts

ಹಂದಿ ಅಣ್ಣಿ ಮೇಲೆ ಸೇಡಿದ್ದವರ ಸಿಂಡಿಕೇಟ್ ನಿಂದಲೇ ಕೊಲೆ, ಶತ್ರುವಿನ ಶತ್ರುಗಳೆಲ್ಲ ಒಂದಾಗಿ ಅಟ್ಯಾಕ್ ಮಾಡಿದ್ದಾರೆಂಬುದು ಪೊಲೀಸರ ಅನುಮಾನ

Malenadu Mirror Desk

ಅಡಿಕೆ ಎಲೆಚುಕ್ಕೆ ರೋಗ ; ಆತಂಕಕ್ಕೊಳಗಾಗದಿರಲು ಮನವಿ : ಆರಗ ಜ್ಞಾನೇಂದ್ರ

Malenadu Mirror Desk

ಕೃಷಿ ಅಭಿಯಾನ ಕಾರ್ಯಕ್ರಮದ ಮಾಹಿತಿ ರಥಕ್ಕೆ ಚಾಲನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.