ಬೆಂಗಳೂರು,ಸೆ.೨೦: ಸ್ವಯಂ ಘೋಷಿತವಾಗಿ ಈಡಿಗ ಸ್ವಾಮೀಜಿಯೆಂದು ಹೇಳಿಕೊಳ್ಳುತ್ತಿರುವ ಪ್ರಣವಾನಂದ ಸ್ವಾಮೀಜಿಗಳಿಗೂ ಈಡಿಗ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕರ್ನಾಟಕ ಪ್ರದೇಶ ಈಡಿಗರ ಸಂಘ ಸ್ಪಷ್ಟ ಪಡಿಸಿದೆ.
ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಅವರು, ಪ್ರಣವಾನಂದ ಸ್ವಾಮೀಜಿಗಳು ಈಡಿಗ ಸಮುದಾಯದ ಸ್ವಯಂ ಘೋಷಿತ ಸ್ವಾಮೀಜಿಗಳೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈಡಿಗ ಸಮುದಾಯ ಅವರನ್ನು ಎಲ್ಲಿಯೂ ಸ್ವಾಮೀಜಿ ಎಂದು ಘೋಷಿಸಿಕೊಂಡಿಲ್ಲ. ಈತ ಸಮುದಾಯದಲ್ಲಿ ಒಡಕು ಮೂಡಿಸುತ್ತಿರುವುದು. ರಾಜಕೀಯ ಮುಖಂಡರಲ್ಲಿ ಬಿನ್ನಾಭಿಪ್ರಾಯಗಳನ್ನು ಮೂಡಿಸಿ ರಾಜಕೀಯ ಕ್ಷೇತ್ರದಲ್ಲಿ ಗೊಂದಲ ಮೂಡಿಸುತ್ತಿರುವುದು ಕಂಡು ಬಂದಿದ್ದು ಇದು ಸರಿಯಲ್ಲ. ನಮ್ಮ ಕೇಂದ್ರ ಸಂಘ ಹಾಗೂ ಜಿಲ್ಲಾ ಸಂಘಗಳ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿರುವುದು ಕಂಡು ಬಂದಿದ್ದು ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಘ ತೀರ್ಮಾನಿಸಿದೆ ಎಂದು ಹೇಳಿದರು.
ಈಡಿಗ ಸಮುದಾಯ ಸಂಘ ಸ್ಥಾಪನೆಯಾಗಿ ೭೮ ವರ್ಷಗಳು ಕಳೆದಿವೆ.೨೦೦೮ರಲ್ಲಿ ರೇಣುಕಾನಂದರನ್ನು ಸ್ವಾಮೀಜಿಗಳನ್ನಾಗಿ ನೇಮಕ ಮಾಡಲಾಯಿತು. ಬಳಿಕ ರೇಣುಕಾನಂದರವರು ತಮ್ಮ ಹೆಚ್ಚಿನ ಆಧ್ಯಾತ್ಮಿಕ ಅಧ್ಯಯನಕ್ಕಾಗಿ ೨೦೧೪ ರಲ್ಲಿ ಪೀಠವನ್ನು ತ್ಯಜಿಸಿದರು. ಏಳುವ ವರ್ಷಗಳ ಕಾಲ ಖಾಲಿಯಿದ್ದ ಪೀಠಕ್ಕೆ ಕಾರ್ಕಳದ ಬುಲ್ಲೊಟ್ಟುವಿನಲ್ಲಿ ಆಶ್ರಮ ನಡೆಸುತ್ತಿದ್ದ ಶ್ರೀ ವಿಖ್ಯಾತಾನಾಂದ ಸ್ವಾಮೀಜಿಯವರಿಗೆ ಕುಲಗುರು ಎಂದು ಪಟ್ಟಾಭಿಷೇಕ ಮಾಡಲಾಗಿದೆ. ಹಲವು ಸಭೆಗಳನ್ನು ನಡೆಸಿ ಸಮಾಜದ ನಾಯಕರಾದ ಬಿ.ಕೆ.ಹರಿಪ್ರಸಾದ್ ಅವರ ಸಲಹೆಯನ್ನೂ ಪಡೆಯಲಾಗಿತ್ತು. ಆದರೆ ಪ್ರಣವಾನಂದ ಅನಧಿಕೃತವಾಗಿ ಈಡಿಗ ಸ್ವಾಮೀಜಿಗಳೆಂದು ಹೇಳಿಕೊಂಡು ಜನಾಂಗವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಅವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ನಿರ್ದೇಶಕರಾದ ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಸಂಘದ ಅಧ್ಯಕ್ಷ ಶ್ರೀಧರ್,ರಾಮನಗರ, ಚಿತ್ರದುರ್ಗ, ಬೆಳಗಾವಿ ಜಿಲ್ಲಾ ಅಧ್ಯಕ್ಷರು,ಬಿಲ್ಲವ ಅಸೊಷಿಯೇಶನ್ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ನಾಮದಾರಿ ದೀವರ ಅಧ್ಯಕ್ಷರು ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೇಂದ್ರ ಸಂಘದ ತೀರ್ಮಾನಕ್ಕೆ ನಮ್ಮ ಸಹಮತವಿದೆ. ಪ್ರಣವಾನಂದರನ್ನು ಈಡಿಗ ಸಂಘದ ಯಾವ ಪಂಗಡಗಳೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಸಮಾಜದ ಪರ ಯಾರೇ ಧ್ವನಿ ಎತ್ತಿದರೂ ಸಮುದಾಯ ಬೆಂಬ ನೀಡುವುದು ಸಹಜ. ಆದರೆ ಅವರು ಸಮುದಾಯದ ಸ್ವಾಮೀಜಿ ಎಂದು ಸಮಾಜದ ಸಂಘಟನೆಗಳು ಒಪ್ಪಿಕೊಂಡಿಲ್ಲ
ಆರ್.ಶ್ರೀಧರ್, ಹುಲ್ತಿಕೊಪ್ಪ, ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಈಡಿಗ ಸಂಘ
ಈಡಿಗ, ನಾಮಧಾರಿ, ಬಿಲ್ಲವ ಹಾಗೂ ದೀವರ ಸಮುದಾಯಗಳು ಇತ್ತೀಚಿನ ವರ್ಷದ ತನಕ ಮಠ ಮತ್ತು ಸ್ವಾಮೀಜಿಗಳನ್ನು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಸಮುದಾಯದ ಒಂದು ವರ್ಗ ಅತ್ತ ಒಲವು ತೋರಿದೆ. ಮಠಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರೆ ಸಂತೋಷ. ಸಾತ್ವಿಕ ಸಂಸ್ಕಾರ ಸಮುದಾಯಕ್ಕೆ ಅಗತ್ಯವಿದೆ. ಆದರೆ ಪ್ರಣವಾನಂದರ ನಡವಳಿಕೆ ಸಾತ್ವಿಕ ನೆಲೆಯಲ್ಲಿ ಇಲ್ಲ. ತಮ್ಮನ್ನು ತಾವೇ ಈಡಿಗ ಸ್ವಾಮಿ ಎಂದು ಘೋಷಣೆ ಮಾಡಿಕೊಂಡಿರುವುದಕ್ಕೆ ಮೊದಲಿಂದಲೂ ವಿರೋಧ ಇತ್ತು. ಪ್ರದೇಶ ಆರ್ಯ ಈಡಿಗ ಸಂಘ ನೀಡಿರುವ ಹೇಳಿಕೆ ಮತ್ತು ತಳೆದಿರುವ ನಿಲುವಿಗೆ ನಮ್ಮ ಬೆಂಬಲವಿದೆ.
ಜಿ.ಡಿ.ಮಂಜುನಾಥ್, ನಿರ್ದೇಶಕರು, ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ