Malenadu Mitra
ರಾಜ್ಯ

ನ. 4,5 ರಂದು ವಿಐಎಸ್ ಎಲ್ ಶತಮಾನೋತ್ಸವ ಮೈಸೂರು ಯುವರಾಜ, ನಿರ್ಮಲಾ ಸೀತಾರಾಮನ್, ಜ್ಯೋತಿರಾದಿತ್ಯ ಸಿಂಧ್ಯಾ, ಸಿದ್ದರಾಮಯ್ಯ, ಡಿಕೆಶಿ, ಮಠಾಧೀಶರ ಆಗಮನ

ಶಿವಮೊಗ್ಗ, : ನೂರು ವರುಷದ ಹಿಂದೆ 1923 ರಲ್ಲಿ ಆರಂಭಗೊಂಡ ವಿಐಎಸ್‌ಎಲ್ ಕಾರ್ಖಾನೆಯ ಶತಮಾನೋತ್ಸವವನ್ನು ನ. ೪ ಮತ್ತು ೫ರಂದು ಭದ್ರಾವತಿಯಲ್ಲಿರುವ ಕಾರ್ಖಾನೆಯ ಆವರಣದಲ್ಲಿ ವೈಭವದಿಂದ ಆಚರಿಸಲಾಗುವುದು. ಜೊತೆಗೆ ಸಹಸ್ರಾರು ಬದುಕುಗಳಿಗೆ ದಾರಿದೀಪ ಆಗಿರುವ, ಆಗುತ್ತಿರುವ ಕಾರ್ಖಾನೆಯ ಉಳಿವಿಗೆ ಪ್ರಯತ್ನಿಸಲಾಗುವುದು ಎಂದು ಚಿತ್ರನಟ ಹಾಗೂ ವಿಐಎಸ್‌ಎಲ್‌ನ ಮಾಜಿ ಉದ್ಯೋಗಿ ಎಸ್.ದೊಡ್ಡಣ್ಣ ಹೇಳಿದರು.
ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, 1918ರಲ್ಲಿ ಶಂಕುಸ್ಥಾಪನೆಯಾಗಿದ್ದ ಈ ಕಾರ್ಖಾನೆ ಒಡೆಯರ್ ಹಾಗೂ ಸರ್‌ಎಂವಿ ಆಸರೆಯಿಂದ ೨೩ರಲ್ಲಿ ಆರಂಭಗೊಂಡಿತ್ತು. ಈ ಆಚರಣೆಯನ್ನು ವೈಭವದಿಂದ ನಡೆಸಲು ಶತಮಾನೋತ್ಸವ ಸಮಿತಿಯನ್ನು ರಚಿಸಲಾಗಿದೆ ಎಂದರು.
1968ರಿಂದ 88 ರವರೆಗೆ ಇಲ್ಲಿ ಎಲ್ಲಾ ಹಂತದ ವಿಭಾಗಗಳ ಮೂಲಕ ವಿಐಎಸ್‌ಎಲ್ ಉದ್ಯೋಗಿಯಾಗಿ ಬದುಕನ್ನು ರೂಪಿಸಿಕೊಂಡಿದ್ದೇನೆ. ತಾಯಿಯಷ್ಟೆ ಕಾರ್ಖಾನೆಯನ್ನು ಪ್ರೀತಿಸುತ್ತೇನೆ. ನನ್ನಂತೆಯೇ ಕಾರ್ಖಾನೆಯನ್ನು ಪ್ರೀತಿಸುವ ಅಪಾರ ಮಾಜಿ ಉದ್ಯೋಗಿಗಳಿದ್ದಾರೆ. ಬೆಂಗಳೂರಿನಲ್ಲಿ ಸುಮಾರು ೧೧೬ ಮಾಜಿ ನೌಕರರಿದ್ದಾರೆ. ಎಲ್ಲರನ್ನು ಸೇರಿಸಿ ದೇಶದ ಹಾಗೂ ರಾಜ್ಯದ ನಾಯಕರನ್ನು ಕರೆತಂದು ಸಾಧಕರನ್ನು ಗೌರವಿಸುವ ಮೂಲಕ ಶತಮಾನೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ವಿವಿಧ ಕಾರ್‍ಯಕ್ರಮಗಳು
ಶತಮಾನೋತ್ಸವ ಕಾರ್‍ಯಕ್ರಮವನ್ನು ನ.೪ ರಂದು ಮೈಸೂರು ರಾಜವಂಶಸ್ಥ ಯುಧುವೀರ್ ಒಡೆಯರ್ ಆಗಮಿಸಿ ಉದ್ಘಾಟಿಸಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹಾಗೂ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಸಹಾಯದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಮಾರನೆಯ ದಿನದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಸೇರಿದಂತೆ ೬ಕ್ಕೂ ಹೆಚ್ಚು ಸಚಿವರು, ಸಚಿವ ಮಧು ಬಂಗಾರಪ್ಪ ಅವರ ಸಹಾಯದಿಂದ ಬರಲು ಒಪ್ಪಿಕೊಂಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಯದೇವ ಆಸ್ಪತ್ರೆಯ ದೇವರು ಎಂದೇ ಕರೆಸಿಕೊಳ್ಳುವ ಡಾ|| ಸಿ.ಎನ್.ಮಂಜುನಾಥ್, ಇನ್ಫೋಸಿಸ್‌ನ ಸುಧಾಮೂರ್ತಿ, ವಿಆರ್‌ಎಲ್ ಸಂಸ್ಥಾಪಕ ವಿಜಯ ಸಂಕೇಶ್ವರ, ಬೆಳಗಾವಿಯಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಪ್ರಭಾಕರ್ ಕೋರೆ ಅವರನ್ನು ಸನ್ಮಾನಿಸುವ ಉದ್ಧೇಶವಿದೆ ಎಂದರು.

ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಶ್ರೀ, ಆದಿಚುಚುಂಚನಗಿರಿ ಮಠದ ಡಾ. ನಿರ್ಮಲಾನಂದ ಸ್ವಾಮೀಜಿ, ಕೋಡಿಮಠದ ಶಿವಾನಂದ ಸ್ವಾಮೀಜಿ ಸಹಿತ ನಾಲ್ವರು ಸ್ವಾಮೀಜಿಗಳು ಉಪಸ್ಥಿತರಿರುವರು. ಕಾರ್‍ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ, ಸಂಸದ ಬಿ ವೈ ರಾಘವೇಂದ್ರ, ಶಾಸಕ ಬಿ ಕೆ ಸಂಗಮೇಶ ಅವರ ಮಾರ್ಗದರ್ಶನ ಮತ್ತು ಸಹಕಾರ ಪಡೆಯಲಾಗುತ್ತಿದೆ ಎಂದರು.

ಕಾರ್ಖಾನೆಯ ಜೊತೆಗೆ ಬೆಳೆದ ಬದುಕಿನ ಜೊತೆಗೆ ವಿವರಣೆ ನೀಡಿದ ದೊಡ್ಡಣ್ಣ, ಅತ್ಯುನ್ನತ ಮಟ್ಟದಲ್ಲಿ ಶತಮಾನೋತ್ಸವ ಆಚರಿಸುವ ಜೊತೆಗೆ ಕಾರ್ಖಾನೆ ಉಳಿವಿಗೆ ಪ್ರಯತ್ನಿಸಲಾಗುತ್ತದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಾಗೂ ಕಾರ್ಖಾನೆಯನ್ನು ಉಳಿಸಲು ಬೆಂಗಳೂರಿನ ಚಾಮರಾಜಪೇಟೆಯ ಕೆನರಾ ಬ್ಯಾಂಕ್‌ನಲ್ಲಿ ವಿಐಎಸ್‌ಎಲ್ ಶತಮಾನೋತ್ಸವ ಹೆಸರಿನ ಖಾತೆ ತೆರೆಯಲಾಗಿದ್ದು, ಧನ ಸಹಾಯ ಮಾಡುವಂತೆ ಕೋರಿದರು. ಖಾತೆ ಸಂಖ್ಯೆ ೧೧೦೧೩೪೨೬೩೬೦೮ ಐಎಫ್‌ಎಸ್‌ಸಿ: ಸಿಎನ್ ಆರ್ಃ೦೦೦೦೪೦೫ ಆಗಿರುತ್ತದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವಕೀಲರಾದ ರೇವಣ್ಣಸಿದ್ದಯ್ಯ, ವೇದವ್ಯಾಸ್, ಕನ್ನಡವೇ ಸತ್ಯರಂಗಣ್ಣ, ಹಾಗೂ ನರಸಿಂಹಚಾರ್ ಉಪಸ್ಥಿತರಿದ್ದರು.

Ad Widget

Related posts

ಗೆಳೆಯನೆಂಬ ಪಥಿಕನಜೊತೆ ಪಥವನರಸಿ…

Malenadu Mirror Desk

ಶಿವಮೊಗ್ಗ ಸಾಹಿತ್ಯ ಪರಿಷತ್ ಚುನಾವಣೆ: ಯಾರಿಗೆ ಎಷ್ಟು ಮತ ಗೊತ್ತಾ ?

Malenadu Mirror Desk

ರುದ್ರೇಶಪ್ಪ ಎಂಬ ಬಂಗಾರದ ಮನುಷ್ಯ!. ಹತ್ತು ಕೆಜಿ ಚಿನ್ನ, ಅಪಾರ ನಗದು ಪತ್ತೆ, ಎಸಿಬಿ ದಾಳಿಯಲ್ಲಿ ಬಯಲಾದ ಕೃಷಿ ಅಧಿಕಾರಿಯ ಚಿನ್ನದ ಕೃಷಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.