ಶಿವಮೊಗ್ಗ ನಗರದಲ್ಲಿ ಭಾನುವಾರ ನಡೆದ ಈದ್‌ಮಿಲಾದ್ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದ ಬಳಿಕ ನಡೆದ ಅಹಿತಕರ ಘಟನೆಯಲ್ಲಿ ೯ ಕ್ಕೂ ಹೆಚ್ಚು ಮಂದಿಗೆ ಚಿಕ್ಕಪುಟ್ಟ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಪು ಚೆದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ರಾಗಿಗುಡ್ಡ ಏರಿಯಾದಲ್ಲಿ ಪ್ರಕ್ಷಬ್ಧ ವಾತಾವರಣ ನಿರ್ಮಾಣವಾಗಿದ್ದು, ೧೪೪ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಧ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದ್ದು, ಘಟನೆ ಸಂಬಂಧ ಹದಿನೈದಕ್ಕೂ ಹೆಚ್ಚು ಮಂದಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೂರ್ವ ವಲಯ ಐಜಿ ತ್ಯಾಗರಾಜನ್, ಜಿಲ್ಲಾಧಿಕಾರಿ ಸೆಲ್ವಮಣಿ, ಎಸ್ಪಿ ಮಿಥುನ್‌ಕುಮಾರ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಹಿಂದೂ ಮಹಾಸಭೆ ಗಣಪತಿ ವಿಸರ್ಜನೆ ಮತ್ತು ಈದ್ ಮಿಲಾದ್ ಹಬ್ಬ ಒಂದೇ ದಿನ ಬಂದಿದ್ದ ಕಾರಣ ಎರಡೂ ಕೋಮಿನ ಪ್ರಮುಖರು ಪರಸ್ಪರ ಮಾತಾಡಿಕೊಂಡಿದ್ದರಿಂದ ಮುಸ್ಲಿಂ ಸಮುದಾಯ ಈದ್ ಮೆರವಣಿಗೆಯನ್ನು ಭಾನುವಾರ ನಿಗದಿ ಮಾಡಿತ್ತು. ಮೆರವಣಿಗೆಯಲ್ಲಿ ಭಾರೀ ಜನಸ್ತೋಮ ಸೇರಿದ್ದು ಸಂಜೆ ತನಕ ಶಾಂತಯುತವಾಗಿಯೇ ಸಾಗಿತ್ತು. ರಾಗಿಗುಡ್ಡದಲ್ಲಿ ಕಟೌಟ್‌ನಲ್ಲಿ ಆಕ್ಷೇಪಾರ್ಯ ಚಿತ್ರಗಳಿದ್ದ ಕಾರಣ ಬೆಳಗ್ಗೆ ಎರಡೂ ಧರ್ಮಗಳ ಜನರು ಪರಸ್ಪರ ಉದ್ರಿಕ್ತಗೊಂಡಿದ್ದರು. ಭಾನವಾರ ಬೆಳಗ್ಗೆಯೇ ಸ್ಥಳಕ್ಕೆ ಬಂದಿದ್ದ ಎಸ್ಪಿ ಆ ತಗಾದೆಯನ್ನು ಬಗೆಹರಿಸಿದ್ದರು.
ಸಂಜೆ ಈದ್ ಮೆರವಣಿಗೆ ಸಾಗಿದ ಸಂದರ್ಭ ರಾಗಿಗುಡ್ಡದ ಶನೈಶ್ಚರ ದೇವಸ್ಥಾನದ ಬಳಿ ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲೆಸಿದಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆ ಪರಿಸ್ಥಿತಿಯನ್ನು ತಹಬದಿಗೆ ತಂದಿತ್ತು. ಇದಾದ ಬಳಿಕ ಮೆರವಣಿಗೆಯಲ್ಲಿ ಸಾಗಿದ ಕೆಲ ಕಿಡಿಗೇಡಿಗಳು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಜಖಂ ಮಾಡಿದ್ದರು. ಈ ವಿಚಾರ ತಿಳಿದ ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಕಲ್ಲು ತೂರಿದ್ದಾರೆ. ಈ ಸಂದರ್ಭ ಉಗ್ರ ನಡೆ ತೋರಿದ ಗುಂಪನ್ನು ನಿಯಂತ್ರಸಲು ಪೊಲೀಸರು ಮತ್ತೆ ಲಾಠಿ ಬೀಸಿದ್ದಾರೆ.
ರಾಗಿಗುಡ್ಡದಲ್ಲಿನ ಪರಿಸ್ಥಿತಿ ಹತೋಟಿಯಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಅದ್ದೂರಿಯಾಗಿ ಸಾಗಿದ್ದ ಮೆರವಣಿಗೆ
ಈದ್ ಮಿಲಾದ್ ಅಂಗವಾಗಿ ಸೆ. ೨೮ರಂದು ನಡೆಯಬೇಕಿದ್ದ ಮೆರವಣಿಗೆ ಶಿವಮೊಗ್ಗ ನಗರದಲ್ಲಿ ಭಾನುವಾರ ನಡೆಯಿತು.
ಲಷ್ಕರ್ ಮೊಹಲ್ಲಾ ಪೆನ್ಷನ್ ಮೊಹಲ್ಲಾ, ಟ್ಯಾಂಕ್ ಮೊಹಲ್ಲಾ ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತದ, ಗೋಪಿ ವೃತ್ತ, ಅಮೀರ್ ಅಹ್ಮದ್ ವೃತ್ತ, ಬಸ್ ಸ್ಟ್ಯಾಂಡ್ ವೃತ್ತ, ಮಾರನಮಿಬೈಲು, ಆಜಾದ್ ನಗರ, ಕೆ ಆರ್ ಪುರಂ ರಸ್ತೆ ಮೂಲಕ ಎಎ ವೃತ್ತದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು.
ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ವಾಹನಗಳನ್ನು ಅಲಂಕಾರಗೊಳಿಸಲಾಗಿತ್ತು. ವಾಹನದ ಹಿಂದೆ ಜನಸಾಗರ ಸಾಗಿಬಂದಿತು. ಮೆರವಣಿಗೆ ಉದ್ದಕ್ಕೂ ಹಾಡು, ನೃತ್ಯಗಳಿದ್ದವು.
ಈ ಸಂದರ್ಭದಲ್ಲಿ ಮಾತನಾಡಿದ ಅಪ್ತಾಬ್ ಪರ್ವೇಜ್ ಪ್ತವಾದಿ ಮೊಹ್ಮದ್ ಪೈಗಂಬರ್ ಅವರ ಹುಟ್ಟು ಹಬ್ಬವನ್ನ ಈದ್ ಆಗಿ ಆಚರಿಸಲಾಗುತ್ತಿದೆ. ಹಬ್ಬವನ್ನು ಸೆ.೨೮ ರಂದು ಆಚರಿಸಲಾಗಿದೆ. ಆದರೆ ನಗರದಲ್ಲಿ ಹಿಂದೂ ಮಹಾಸಭಾ ಗಣಪತಿ ಮತ್ತು ಓಂ ಗಣಪತಿ ವಿಸರ್ಜನೆ ಅಂಗವಾಗಿ ಈದ್ ಮೆರವಣಿಗೆ ಯನ್ನು ಮುಂದೂಡಲಾಗಿತ್ತು. ಹಿಂದು, ಮುಸ್ಲೀಂ ಮತ್ತು ಕ್ರೈಸ್ತ ಮುಖಂಡರ ಜೊತೆ ಸೇರಿ ಸೌಹಾರ್ದ ವಾಗಿ ಮೆರವಣಿಗೆ ಮಾಡಲಾಗುತ್ತಿದೆ ಎಂದರು.
ಸೌಹಾರ್ದ ಸಮಿತಿಯಿಂದ ಮಸೀದಿಗೆ ಭೇಟಿ: ಶುಭಾಶಯ
ನಗರದಲ್ಲಿ ಸೌಹಾರ್ದತೆಯನ್ನು ಪಸರಿಸುವ ಹಿನ್ನಲೆಯಲ್ಲಿ ಸೌಹಾರ್ದ ಸಮಿತಿಯವರು ಭಾನುವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಿವಮೊಗ್ಗದ ಜಾಮೀಯ ಮಸೀದಿಗೆ ಭೇಟಿ ನೀಡಿ ಹಬ್ಬದ ಶುಭಾಶಯವನ್ನು ಕೋರಿ, ಧರ್ಮಗುರುಗಳಿಗೆ ಮತ್ತು ಪ್ರಮುಖರಿಗೆ ಮಾಲಾರ್ಪಣೆ ಮಾಡಿದರು. ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ ಕೇಕ್ ನೀಡಿದರು. ಈ ಸಂದರ್ಭದಲ್ಲಿ ಸಮಿತಿ ಸಂಚಾಲಕ ಶ್ರೀಪಾಲ ಕೆ.ಪಿ., ರಾಜ್ಯ ರೈತ ಸಂಘದ ಹೆಚ್.ಆರ್ ಬಸವರಾಜಪ್ಪ, ಎಂ.ಶ್ರೀಕಾಂತ್, ಕಿರಣ್‌ಕುಮಾರ್, ಮಾಜಿ ಮೇಯರ್ ನಾಗರಾಜ್ ಕಂಕಾರಿ, ಸುರೇಶ್ ಅರಸಾಳು, ಮೊಹಮದ್ ಹುಸೇನ್ , ಪತ್ರಕರ್ತ ಲಿಯಾಖತ್, ಫ್ರ್ರಾನ್ಸಿಸ್ ಡಿಸೋಜಾ, ಜಗದೀಶ್, ಎಸ್.ಜಿ ಮಲ್ಲಿಕಾರ್ಜುನ, ಭಾಸ್ಕರ್, ನಾಗರಾಜ್ ಚಟ್ನಳ್ಳಿ , ಚೇತನ್ ಸೇರಿದಂತೆ ಹಲವರಿದ್ದರು,
ಜಾಮಿಯ ಮಸೀದಿ ಪರವಾಗಿ ಅಧ್ಯಕ್ಷ ಮುನಾ ವರ್, ಗೌರವ ಅಧ್ಯಕ್ಷ ಸತ್ತಾರ್ ಬೇಗ್, ಅಫ್ತಾಬ್ ಪರ್ವೀಜ್, ಐಜಾಜ್ ಪಾಷ, ಶಪಿ ಸಾಬ್ , ವಕೀಲ ರಾದ ನಯಾಜ್ ಅಹಮದ್ ಮೊದಲಾದವರು ಹಾಜರಿದ್ದರು.ಕಳೆದವಾರ “ಸೌಹಾರ್ದವೇ ಹಬ್ಬ” ಶಾಂತಿಯ ನಡಿಗೆ ಸಮಿತಿಯ ವತಿಯಿಂದ ಹಿಂದೂ ಮಹಾಸಭಾ ಗಣಪತಿಗೆ ಮಾಲಾರ್ಪಣೆ ಮಾಡಲಾಗಿತ್ತು.
ಆಸ್ಪತ್ರೆಗೆ ಶಾಸಕ ಭೇಟಿ:
ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕ ಚೆನ್ನಬಸಪ್ಪ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು. ಈ ಸಂದರ್ಭ ಮಾಧ್ಯಮಗಳಿಗೆ ಮಾತನಾಡಿದ ಅವರು, ಇದೊಂದು ಪೂರ್ವ ನಿರ್ಧರಿತ ಕೃತ್ಯದಂತೆ ಕಂಡುಬರುತಿದ್ದು, ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.