Malenadu Mitra
ರಾಜ್ಯ ಶಿವಮೊಗ್ಗ

ರಾಗಿಗುಡ್ಡ ಘಟನೆಗೆ ವಿಷಾದ ವ್ಯಕ್ತಪಡಿಸಿದ ಸಚಿವ ಮಧುಬಂಗಾರಪ್ಪ, ಶಾಂತಿಯಿಂದ ಇರಲು ಮನವಿ

ಶಿವಮೊಗ್ಗ : ನಗರದ ರಾಗಿಗುಡ್ಡ ಗಲಭೆಪೀಡಿತ ಪ್ರದೇಶವಾದ ರಾಗಿಗುಡ್ಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಕಲ್ಲು ತೂರಾಟಕ್ಕೊಳಗಾದ ಮನೆಗಳಿಗೆ ಭೇಟಿ ನೀಡಿ, ಒಡೆದು ಹೋಗಿದ್ದ ಕಿಟಕಿ ಗಾಜು, ಬಾಗಿಲು, ವಾಹನಗಳನ್ನು ಪರಿಶೀಲಿಸಿದರು. ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಎಸ್ಪಿ ಮಿಥುನ್ ಕುಮಾರ್ ಜೊತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ನೀಡಿದರು.
ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದಿದೆ. ಘಟನೆ ಸಂಬಂಧ ೨೪ ಪ್ರಕರಣಗಳನ್ನು ದಾಖಲಿಸಿಕೊಂಡು ೬೦ ಜನರನ್ನು ಬಂಧಿಸಲಾಗಿದೆ ಎಂದರು.

ಘಟನೆ ಆದ ದಿನ ಮಡಿಕೇರಿಯಲ್ಲಿದ್ದೆ. ಅಲ್ಲಿಯೇ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ಅದ್ಧೂರಿಯಾಗಿ ನಡೆದಿದೆ. ಆದರೆ, ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದಿದೆ. ಈ ಘಟನೆ ನಡೆಯಬಾರದಿತ್ತು. ಘಟನೆ ನಡೆದಿರುವುದಕ್ಕೆ ನನಗೆ ವಿಷಾದವಿದೆ ಎಂದರು.
ಶಿವಮೊಗ್ಗದ ಹಿನ್ನೆಲೆ ಗಮನಿಸಿ ಶಿವಮೊಗ್ಗ ನಗರದಲ್ಲಿ ೧೪೪ ಸೆಕ್ಷನ್ ವಿಧಿಸಲಾಗಿದೆ. ಆದರೆ ರಾಗಿಗುಡ್ಡ ಹೊರತು ಪಡಿಸಿ ಬಾಕಿ ಕಡೆ ಸಡಿಲಗೊಳಿಸಲಾಗಿದೆ. ರಾಗಿಗುಡ್ಡದಲ್ಲಿ ಮತ್ತೆ ದ್ವೇಷದ ಹಿನ್ನೆಲೆಯಲ್ಲಿ ಯಾವ ಘಟನೆ ನಡೆಯಬಾರದು. ಶಾಂತಿ ಕಾಪಾಡಬೇಕೆಂದು ಜನತೆಯಲ್ಲಿ ನಾನು ಮನವಿ ಮಾಡುವೆ ಎಂದು ಹೇಳಿದರು.

ರಾಗಿಗುಡ್ಡದಲ್ಲಿ ನಾನು ಕೆಲವಾರು ಮನೆಗಳಿಗೆ ಭೇಟಿ ನೀಡಿ ಒಡೆದು ಹಾಕಿದ್ದನ್ನು ನೋಡಿದೆ. ಇದನ್ನು ನೋಡಿದಾಗ ಬೇಸರವಾಗುತ್ತೆ. ನಮ್ಮ, ನಿಮ್ಮ ಮನೆಗಳನ್ನು ಒಡೆದಾಗ ಬೇಸರವಾಗುವುದಿಲ್ಲವಾ. ಪಾಪ ಕಷ್ಟಪಟ್ಟು ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಯಾರಿಂದಲೂ ಯಾರಿಗೂ ತೊಂದರೆಯಾಗಬಾರದು ಎಂದರು.
ಕೆಲವು ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ. ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಆಗುತ್ತೆ. ಕಾನೂನಿನಲ್ಲಿ ಅವಕಾಶವಿದ್ರೆ ನಷ್ಟವಾದವರಿಗೆ ಪರಿಹಾರ ಕೊಡುತ್ತೇವೆ. ಶಿವಮೊಗ್ಗ ಶಾಂತಿಯಿಂದ ಇರಬೇಕು.ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಆರೋಗ್ಯ ವಿಚಾರಿಸಿದ ಸಚಿವರು
ರಾಗಿಗುಡ್ಡ ಕಲ್ಲುತೂರಾಟ ಘಟನೆಯಲ್ಲಿ ಗಾಯಗೊಂಡು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಚಾರಿಸಿದರು.
ಗಾಯಗೊಂಡವರ ಬಳಿ ಘಟನೆ ಸಂಬಂಧಿಸಿದಂತೆ ಮಾಹಿತಿ ಪಡೆದದುಕೊಂಡರು. ಸಚಿವರಿಗೆ ಡಿಸಿ ಆರ್. ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್, ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ತಿಮ್ಮಪ್ಪ ಸಾಥ್ ನೀಡಿದರು.

ಶಾಂತಿ ಸುವ್ಯವಸ್ಥೆಯನ್ನು ಎಲ್ಲರೂ ಕಾಪಾಡಬೇಕು : ಆಯನೂರು ಮಂಜುನಾಥ್

ಶಿವಮೊಗ್ಗ : ರಾಗಿಗುಡ್ಡದ ಗಲಭೆ ವಿಚಾರದಲ್ಲಿ ಎಲ್ಲರೂ ಮೌನವಾಗಿ ಗೊಂದಲ-ಗದ್ದಲ ಸರಿಪಡಿಸಬೇಕಾಗಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವಾರ್ಡಿನ ಒಂದು ಕ್ರಾಸ್‌ನಲ್ಲಿ ನಡೆದ ಘಟನೆಯನ್ನು ಇಡೀ ನಗರದಲ್ಲಿ ಗಲಭೆ ಎಂದು ಬಿಂಬಿಸಬಾರದು. ಕೆಲವು ಕಿಡಿಗೇಡಿಗಳಿಂದಾಗಿ ಈ ಘಟನೆ ನಡೆದಿದೆ ಎಂದು ಆರೋಪಿಸಿದರು.
ರಾಗಿಗುಡ್ಡದಲ್ಲಿ ಘಟನೆ ನಡೆದಿದ್ದರೂ, ಶಿವಮೊಗ್ಗದ ಎಎ ಸರ್ಕಲ್ ನಲ್ಲಿ ಮಧ್ಯರಾತ್ರಿಯವರೆಗೂ ಮೆರವಣಿಗೆ ಶಾಂತವಾಗಿ ಸಾಗಿದೆ. ಕಟೌಟ್ ಗಳು, ಬ್ಯಾನರ್‌ಗಳು ವಿವಾದಾತ್ಮಕವಿದ್ದರೂ ಅದನ್ನು ಯಾಕೆ ಪೊಲೀಸರು ತೆಗೆಸಿಲ್ಲ ಎಂಬುದು ಪ್ರಶ್ನೆಯಾಗಿದೆ. ಬಹುಷಃ ಆ ಸಮಯದಲ್ಲಿ ತೆಗೆಸಿದ್ದರೆ ಉದ್ರಿಕ್ತರಾಗುತ್ತಾರೆಂದು ಪೊಲೀಸರು ಭಾವಿಸರಬಹುದು.ಇದಕ್ಕೆ ಪೊಲೀಸರೇ ಉತ್ತರಿಸಬೇಕು. ಈಗ ಈ ವಿಚಾರದಲ್ಲಿ ಹೆಚ್ಚು ಪ್ರತಿಕ್ರಿಯಿಸಿದರೆ, ಅದಕ್ಕೆ ಮತ್ತೆ ಪ್ರತಿಕ್ರಿಯೆ ಬರಬಹುದು. ಹೀಗಾಗಿ ಎಲ್ಲರೂ ಮೌನವಾಗಿ ಈ ಗೊಂದಲ-ಗದ್ದಲ ಸರಿಪಡಿಸಬೇಕಾಗಿದೆ ಎಂದರು.

ಸುಳ್ಳು ವದಂತಿ ಹಬ್ಬಿಸುವವರ ವಿರುದ್ಧ ದೂರು ದಾಖಲು, ನಗರ ಶಾಂತವಾಗಿದೆ: ಎಸ್ಪಿ

ಶಿವಮೊಗ್ಗ : ರಾಗಿಗುಡ್ಡದ ಘಟನೆಗೆ ಸಂಬಂಧಿಸಿದಂತೆ ಒಂದು ಗಂಟೆಯಲ್ಲಿ ಹತೋಟಿಗೆ ತಂದಿದ್ದೇವೆ. ಗಲಭೆಯಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಬಂಧಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಗಿಗುಡ್ಡದಲ್ಲಿ ಸೆಕ್ಷನ್ ಹಾಕಲಾಗಿದೆ. ರಾಗಿಗುಡ್ಡ ಮೆರವಣಿಗೆ ಸಂದರ್ಭದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಂ ಯುವಕ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದವರ ವಿರುದ್ದ ಎಫ್‌ಐಆರ್ ದಾಖಲಾಗಿದೆ ಎಂದರು.
ಗಲಭೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಗೊಂಡವರನ್ನು ಈಗಾಗಲೇ ಆಸ್ಪತ್ರೆಯಲ್ಲಿ ದಾಖಲಿಸಿದ್ದೇವೆ. ಒಟ್ಟು ೧೨ ಜನರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಳ್ಳುಸುದ್ದಿಗೆ ಕಿವಿಗೊಡಬೇಡಿ ಎಂದರು.
ಓಮ್ನಿಯಲ್ಲಿ ಬಂದವರ ಬಗ್ಗೆ ಸುಳ್ಳುಸುದ್ದಿ ವರದಿಯಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗ ಅವರು ದಾವಣಗೆರೆ ಜಿಲ್ಲೆಯ ನ್ಯಾಮತಿಯವರು ಎಂದು ತಿಳಿದು ಬಂದಿದೆ. ಅವರನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಇದರಲ್ಲಿ ಬಂದವರಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ. ಒಮಿನಿಯಲ್ಲಿ ಬಂದವರಲ್ಲಿ ಎರಡೂ ಕೋಮಿನ ಜನ ಇದ್ದಾರೆ. ಸಾರ್ವಜನಿಕರು ಸುಳ್ಳುಸುದ್ದಿಗಳಿಗೆ ಕಿವಿಗೊಡಬೇಡಿ. ಗಲಭೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಸಾಗರದಲ್ಲಿ ಈದ್ ಮಿಲಾದ್ ಮೆರವಣಿಗೆ ಕತ್ತಿ ಪ್ರದರ್ಶನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾಗರದಲ್ಲಿ ಪ್ರದರ್ಶನ ಮಾಡಿರುವುದು ಪ್ಲಾಸ್ಟಿಕ್ ಕತ್ತಿ. ಪ್ರಚೋದನಾಕಾರಿ ಹೇಳಿಕೆ ನೀಡಿದ್ದರೆ ಆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಯಾರೊ ಒಬ್ಬರು ಕಳಿಸಿದ ವಿಡಿಯೊಗೆ ಬೆಲೆ ನೀಡಿದರೆ, ನಗರದ ಶಾಂತಿ ಹಾಳಾಗುತ್ತದೆ. ಕಾನೂನಿಗೆ ವಿರುದ್ಧ ಕೆಲಸ ಮಾಡಿದವರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸುಮೊಟೊ ಕೇಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾನೂನು ಕೈಗೆತ್ತಿಕೊಂಡವರ ಮೇಲೆ ಎಫ್‌ಐಆರ್ ಆಗುತ್ತಿದೆ. ಅಮಾಯಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ. ಫ್ಲೆಕ್ಸ್ ಮತ್ತು ಸಂಜೆ ರಾಗಿಗುಡ್ಢದಲ್ಲಿ ನಡೆದ ಘಟನೆಗೂ ಯಾವುದೆ ಸಂಬಂಧವಿಲ್ಲ. ಗಲಭೆಯಲ್ಲಿ ಆರು ಜನ ಪೊಲೀಸರಿಗೆ ಏಟು ಬಿದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ನಗರದಲ್ಲಿ ೧೪೪ ರನ್ವಯ ಮೆರವಣಿಗೆಗೆ ನಿಷೇಧವಿದೆ. ಉಳಿದಂತೆ ಸಾರ್ವಜನಿಕರಿಗೆ ಯಾವುದೆ ನಿರ್ಬಂಧವಿಲ್ಲ. ರಾಗಿಗುಡ್ಡದಲ್ಲಿ ಮಾತ್ರ ನಿಷೇಧಾಜ್ಞೆ ಹೇರಿದ್ದೇವೆ ಎಂದರು.
ಕಲ್ಲು ತೂರಾಟದಲ್ಲಿ ಮೂರು ಸಮುದಾಯದ ಮನೆಗಳಿಗೂ ಹಾನಿಯಾಗಿದೆ. ನಗರದ ರಕ್ಷಣೆಯ ದೃಷ್ಟಿಯಿಂದ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು. ಆರೋಪಿಗಳ ಹುಡುಕಾಟಕ್ಕೆ ತಂಡ ರಚಿಸಲಾಗಿದೆ ಎಂದರು.

Ad Widget

Related posts

ಮಲೆನಾಡಿಗೆ ಮತ್ತೆ ಒಕ್ಕರಿಸಿದ ಮಂಗನಕಾಯಿಲೆ

Malenadu Mirror Desk

ಮಧು ಬಂಗಾರಪ್ಪ ಅದ್ದೂರಿ ಸ್ವಾಗತಕ್ಕೆ ಸಿದ್ದತೆ
ಮೇ ೩೧ ರಂದು ನಗರಕ್ಕೆ ಆಗಮಿಸುವ ಸಚಿವರು

Malenadu Mirror Desk

ಹೋರಾಟಗಾರರ ತ್ಯಾಗದ ಫಲವಾಗಿ ಸ್ವಾತಂತ್ರ್ಯ ಧಕ್ಕಿದೆ, ೭೭ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ ಸಚಿವ ಮಧು ಬಂಗಾರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.