ಶಿವಮೊಗ್ಗ: ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಭೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದರು.
ಗಲಭೆ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡು ಗಂಟೆಗಳ ಕಾಲ ಮನೆಗಳ ಭೇಟಿ ನೀಡಿ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದಿದ್ದೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ನಾಲ್ಕೈದು ಘಟನೆಯಾಗಿದೆ. ನ್ಯಾಯಾಂಗ ತನಿಖೆ ನಡೆಸಬೇಕು ಎಂದರು.
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಶಾಂತಿ ರೀತಿಯಿಂದ ನಡೆದಿದೆ. ಗಣೇಶೋತ್ಸವ ಮುಗಿದ ಮೇಲೆ ಈದ್ ಮಿಲಾದ್ ಆಚರಣೆ ವೇಳೆ ಕೇಲವು ಕಟೌಟ್ ಗಳನ್ನು ಹಾಕಿದ್ದಾರೆ. ಟಿಪ್ಪು ಪೋಟೋ, ಕತ್ತಿಯ ಪೊಟೋ, ಔರಂಗಜೇಬನ ಪೋಟೋ ಹಾಕಿದ್ದಾರೆ. ಸಾಬ್ರ ಸಾಮ್ರಾಜ್ಯ ಎಂದು ಹಾಕಿದ್ದಾರೆ. ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಈ ಕಟೌಟ್ ಹಾಕಲಾಗಿದೆ. ಸರ್ಕಾರದ ಹಾಗೂ ಪೊಲೀಸ್ ಇಲಾಖೆಯ ವೈಪಲ್ಯವಿದು. ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಕಂಡಿದೆ. ಎಸ್ಪಿಯ ಮೇಲೆಯೇ ಕಲ್ಲು ತೂರಾಟವಾಗಿದೆ, ಎಸ್ಪಿಗೆ ರಕ್ಷಣೆ ಇಲ್ಲವಾದರೆ ಸಾರ್ವಜನಿಕರ ಕಥೆ ಏನು ಎಂದು ಪ್ರಶ್ನಿಸಿದರು.
ಮಹಿಳೆಯರು ಟಾರ್ಗೆಟ್:
ಆ ಪ್ರದೇಶದಲ್ಲಿ ಹೋದಾಗ ಮೂರು ವಿಷಯಗಳು ಸ್ಪಷ್ಟವಾಗಿದೆ. ಟಾರ್ಗೆಟ್ ಮಾಡಿ ಹಲ್ಲೆ ಮಾಡಲಾಗಿದೆ. ಗಣೇಶ ಹಬ್ಬದಲ್ಲಿ ಭಾಗಿಯಾದವರ ಮೇಲೆ ಹಲ್ಲೆಯಾಗಿದೆ, ಆ ಪ್ರದೇಶದ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗಿದೆ. ಈ ಘಟನೆಗೆ ಮೊದಲು ಮುಸ್ಲಿಂ ಮಹಿಳೆಯರಿಂದ ರಸ್ತೆ ಅಡ್ಡಗಟ್ಟಲಾಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಹಿಂದೂಗಳ ಮನೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಅವರನ್ನು ಮಾತಾಡಿಸಿದ್ದೇವೆ. ರಕ್ಷಣೆ ನೀಡಿದವರ ಮೇಲೆಯೇ ಪ್ರಕರಣ ದಾಖಲಿಸುವ ಕೆಲಸ ಆಗಿದೆ ಎಂದರು.
ದಾರಿಯಲ್ಲಿ ಹೋಗುತ್ತಿದ್ದ ಕ್ರೈಸ್ತ ವ್ಯಕ್ತಿಯ ಮೇಲೆಯೂ ಕೇಸ್ ಹಾಕಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಬಂದು ಹೋದ ಮೇಲೆ ಹಿಂದೂಗಳ ಮೇಲೆ ಕೇಸ್ ಹಾಕಲಾಗಿದೆ. ಕಾಂಗ್ರೆಸ್ ಒತ್ತಡದಿಂದ ಪ್ರಕರಣ ದಾಖಲಿಸಿದೆ ಎಂದು ದೂರಿದರು.
ಭಯೋತ್ಪಾದಕ ಸರ್ಕಾರ: ಕಾಂಗ್ರೆಸ್ ಸರ್ಕಾರ ಮೊದಲು ಬಂದಾಗ ಟಿಪ್ಪು ಜಯಂತಿ ನಡೆದಿತ್ತು. ಈಗ ಔರಂಗಜೇಬ್ ಬಂದಿದ್ದಾನೆ. ಈ ಸರ್ಕಾರ ಕೇವಲ ಹಿಂದೂ ವಿರೋದಿಯಾಗಿದೆ. ಕಾಂಗ್ರೆಸ್ ಪಕ್ಷವೇ ಭಯೋತ್ಪಾದಕ ಸರ್ಕಾರ. ಹಾದಿ ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ. ನಾಳೆ ನಮ್ಮ ಮೇಲೂ ಕೇಸ್ ದಾಖಲಿಸಬಹುದು. ಎಸ್ಡಿಪಿಐ ಪಿತಾಮಹ ಕಾಂಗ್ರೆಸ್. ಈ ರಾಜ್ಯದಲ್ಲಿ ಆತಂಕ ಸೃಷ್ಟಿಯಾದರೆ ಕಾಂಗ್ರೆಸ್ ಸರ್ಕಾರವೇ ಕಾರಣ. ಮನೆ ಹಾನಿಯಾದವರಿಗೆ ಸರ್ಕಾರ ಪರಿಹಾರ ಕೊಡಬೇಕು ಎಂದರು.
ಮಾಜಿ ಸಚಿವರಾದ ಕೆ.ಎಸ್ ಈಶ್ವರಪ್ಪ, ಆರಗ ಜ್ಣಾನೇಂದ್ರ,ಅಶ್ವತ್ ನಾರಾಯಣ ಗೌಡ, ಶಾಸಕರಾದ ಎಸ್,ಎನ್ ಚನ್ನಬಸಪ್ಪ,ಎಸ್.ರುದ್ರೇಗೌಡ,ಡಿ.ಎಸ್ ಅರುಣ್,ಎನ್.ರವಿಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್ ಸೇರಿದಂತೆ ಹಲವರಿದ್ದರು.
ರಾಗಿಗುಡ್ಡದಲ್ಲಿ ಬಿಜೆಪಿ ‘ಸತ್ಯ’ಶೋಧ
ಶಿವಮೊಗ್ಗ: ಇಂತಹ ಘಟನೆಯನ್ನು ಎಂದೂ ನೋಡಿಲ್ಲ. ಒಂದೇ ಸಲ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಪೊಲೀಸರು ಸಹ ಅಸಹಾಯಕರಾಗಿದ್ದರು. ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ ಇದು ರಾಗಿಗುಡ್ಡಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರ ಸತ್ಯಶೋಧನ ತಂಡದ ಮುಂದೆ ಮಹಿಳೆಯೊಬ್ಬರು ಅಳಲು ತೋಡಿಕೊಂಡ ರೀತಿ.
ಈದ್ ಮಿಲಾದ್ ಮೆರವಣಿಗೆಯ ವೇಳೆ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣ ನಡೆದಿದ್ದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ನಾಯಕರ ತಂಡವು ರಾಗಿಗುಡ್ಡಕ್ಕೆ ಭೇಟಿ ನೀಡಿತು.
ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಆಗಮಿಸಿರುವ ಸತ್ಯ ಶೋಧನಾ ತಂಡದ ಎದುರು ಹಾನಿಗೊಳಗಾದ ನಿವಾಸಿಗಳು ಕಣ್ಣೀರು ಹಾಕಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವರಾದ ಅಶ್ವತ್ ನಾರಾಯಣ್, ಕೆ.ಎಸ್ ಈಶ್ವರಪ್ಪ, ಎನ್ ರವಿಕುಮಾರ್, ಸಂಸದ ರಾಘವೇಂದ್ರ ಸೇರಿದಂತೆ ಬಿಜೆಪಿ ನಾಯಕರು ಜೊತೆಗಿದ್ದರು. ಇದಕ್ಕೂ ಮುನ್ನ ನಿಯೋಗವು ರಾಗಿಗುಡ್ಡಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಮಾತನಾಡಿಸಿ ಸಾಂತ್ವನ ಹೇಳಲಾಯಿತು.