ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಅವರ ತೀರ್ಥಹಳ್ಳಿಯ ಬೆಟ್ಟಮಕ್ಕಿ ಹಾಗೂ ಕರಕುಚ್ಚಿ ನಿವಾಸ ಹಾಗೂ ಶಿವಮೊಗ್ಗದ ಶರಾವತಿ ನಗರದ ಮನೆಯ ಮೇಲೆ ಏಕಾಏಕಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಮಾಡಿರುವ ದಾಳಿಯು ರಾಜಕೀಯ ಪ್ರೇರಿತವಾದುದ್ದು ಎಂದು ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾ ಜನಪರ ಹೋರಾಟ ಸಮಿತಿಯ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಮಂಜುನಾಥ ಗೌಡ ಸಹಕಾರಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆಯನ್ನು ಮಾಡಿಕೊಂಡು ಬಂದಿದ್ದು, ಸಹಕಾರಿ ದಿಗ್ಗಜರೆಂದು ಹೆಸರಾಗಿದ್ದಾರೆ. ಅವರ ಉತ್ತಮ ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ದಕ್ಕಿವೆ. ಜೊತೆಗೆ ಕಾಂಗ್ರೆಸ್ ಮುಖಂಡರಾಗಿದ್ದು ಜಿಲ್ಲೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದನ್ನು ಸಹಿಸಲಾರದೆ ಈ ರೀತಿ ದಾಳಿ ನಡೆಸಿ ಇ ಡಿ ಮೂಲಕ ಕಿರುಕುಳ ಕೊಡಿಸುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಗೌಡರು ಡಿ.ಸಿ.ಸಿ ಬ್ಯಾಂಕಿಗೆ ಆರನೇ ಬಾರಿ ಅಧ್ಯಕ್ಷರಾಗಿದ್ದಾರೆ. ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಅವರ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ ಸಂಬಂಧ ಅವರು ನ್ಯಾಯಲಯದಲ್ಲಿ ದಾವೆ ಸಲ್ಲಿಸಿ ಅವರ ಪರ ತೀರ್ಪು ಬಂದ ನಂತರದಲ್ಲಿ ಕಳೆದ ಸೆ. ೨೯ ರಂದು ಶಿವಮೊಗ್ಗ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು ಆ ದಿನ ಸಾವಿರಾರು ಮಂದಿ ಅವರನ್ನು ಪಕ್ಷಾತೀತವಾಗಿ ಅಭಿನಂದಿಸಿದ್ದಾರೆ ಎಂದಿದ್ದಾರೆ.
ಗೌಡರ ಏಳಿಗೆಯನ್ನು ಸಹಿಸಲಾಗದೆ ಈ ಹಿಂದೆ ಶಿವಮೊಗ್ಗ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್‌ನಲ್ಲಿ ಆದಂತಹ ಅವ್ಯವಹಾರದ ಸಂಬಂಧ ಆರ್.ಎಂ. ಮಂಜುನಾಥ ಗೌಡರವರನ್ನು ಸಹ ಆರೋಪಿಯನ್ನು ಮಾಡಲಾಗಿತ್ತು. ಈ ಅವ್ಯವಹಾರದ ಸಂಬಂಧ ಸಿ.ಒ.ಡಿ ಅಧಿಕಾರಿಗಳ ಮೂಲಕ ತನಿಖೆಯಾಗಿದೆ. ಪ್ರಕರಣದಲ್ಲಿ ಗೌಡರ ಪಾತ್ರವು ಅವ್ಯವಹಾರದಲ್ಲಿ ಇಲ್ಲವೆಂದು, ಹೇಳಿ ಕ್ಲೀನ್‌ಚೀಟ್ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ಗೌಡರ ವರ್ಚಸನ್ನು ಸಹಿಸದ ಬಿ.ಜೆ.ಪಿ ನಾಯಕರು ದುರುದ್ದೇಶದಿಂದ ಕೇಂದ್ರ ಸರ್ಕಾರದ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ಪ್ರೇರಿತವಾಗಿ ಗೌಡರವರ ಮನೆಗಳ ಮೇಲೆ ದಾಳಿಯನ್ನು ಮಾಡಿಸಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಎಂದು ಹೇಳಿದರು
ನಾಗರಾಜ್ ಕಂಕಾರಿ, ಹೆಚ್. ಪಾಲಾಕ್ಷಿ, ಎನ್.ಎಸ್. ಮಹೇಶ್, ಎಂ. ರಾಜಣ್ಣ, ವಕೀಲರಾದ ಉಮೇಶ್ ಕೆ.ಎಲ್, ಅನಿಲ್‌ಕುಮಾರ್ ಬಿ.ಎನ್. ಎನ್.ಎಸ್. ಆನಂದ್, ಮುಖಂಡರಾದ ಎಸ್.ಕೆ. ಭಾಸ್ಕರ್, ಶಾಮು.ಡಿ., ಎಸ್.ಡಿ ಪ್ರಸನ್ನಕುಮಾರ, ಎಸ್. ಬಸವರಾಜ್ ಮೊದಲಾದವರಿದ್ದರು.