ಶಿವಮೊಗ್ಗ:ಬಿಜೆಪಿ ನಾಯಕರುಗಳು ಸತ್ಯಶೋಧದ ಹೆಸರಿನಲ್ಲಿ ನಗರವನ್ನು ಪ್ರಕ್ಷುಬ್ದಗೊಳಿಸುವ ಹೇಳಿಕೆ ನೀಡಬಾರದು ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ನಡೆಯಬಾರದ ಘಟನೆ ನಡೆದಿದೆ. ನಿಷೇಧಾಜ್ಞೆಯಿಂದ ಬಡವರು, ಕೂಲಿ ಕಾರ್ಮಿಕರು, ದುಡಿದು ತಿನ್ನುವ ವರ್ಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.ಅಲ್ಲಿನ ಪರಿಸ್ಥಿತಿ ಸಹಜತೆ ಮರಳಲು ಜಿಲ್ಲಾಡಳಿತ, ಪೋಲಿಸ್ ಇಲಾಖೆ ಜತೆ ರಾಜಕಾರಣಿಗಳು, ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಜಿಲ್ಲೆಯ ಹೊರಗಿನ ರಾಜಕಾರಣಿಗಳು ಬರಲು ತೊಂದರೆ ಇಲ್ಲ. ಆದರೆ ಅವರು ಸತ್ಯಶೋಧನೆ ಹೆಸರಲ್ಲಿ ನಗರವನ್ನು ಪ್ರಕ್ಷುಬ್ದಗೊಳಿಸುವ ಹೇಳಿಕೆ ನೀಡಬಾರದು.ಜಿಲ್ಲೆಯ ರಾಜಕಾರಣಿಗಳಾರೂ ಗಲಭೆ ಬೆಂಬಲಿಸುತ್ತಿಲ್ಲ. ಹೊರಗಿನಿಂದ ಬಂದವರೆ ಪೂರ್ವ ನಿಯೋಜಿತ ಕೃತ್ಯ, ಕತ್ತಿ ಹೊರತೆಗೆಯಿರಿ ಎಂಬ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ.ಇದು ಸರಿಯಾದ ಕ್ರಮವಲ್ಲ ಎಂದರು.
ಪೂರ್ವ ನಿಯೋಜಿತ ಕೃತ್ಯವಾಗಿದ್ದರೆ ಮೆರವಣಿಗೆಯ ದಿನವೇ ಇಡೀ ನಗರಕ್ಕೆ ಗಲಭೆ ವ್ಯಾಪಿಸುತ್ತಿತ್ತು.ಮೆರವಣಿಗೆಯನ್ನು ಶಾಂತ ರೀತಿಯಲ್ಲಿ ತೆಗೆದುಕೊಂಡ ಹೋದ ಡಿಸಿ, ಎಸ್‌ಪಿ ಶ್ರಮ ಮೆಚ್ಚುವಂತದ್ದು,ಗಲಭೆಯಲ್ಲಿ ಮೂರೂ ಸಮುದಾಯದವರಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಸಮಸ್ಯೆ ಬಗೆಹರಿಸಬೇಕು.ಎರಡೂ ಗುಂಪಿನವರನ್ನು ಕರೆದು ಈಗ ಶಾಂತಿಸಭೆ ನಡೆಸುವ ಅನಿವಾರ್ಯತೆ ಇದೆ ಆದರೆ ಈ ನಡುವೆ ವಿರೋಧ ಪಕ್ಷದ ನಾಯಕರುಗಳು ರಾಗಿಗುಡ್ಡ ಗಲಭೆಯನ್ನು ರಾಜ್ಯಾದ್ಯಂತ ಹಬ್ಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ನಗರದಲ್ಲಿ ೩೫ ವಾರ್ಡ್‌ಗಳಿವೆ. ೧೩ -೧೪ ವಾರ್ಡ್‌ಗಳಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಲ್ಲಿ ಎಲ್ಲೂ ಗಲಾಟೆ ಆಗಿಲ್ಲ. ಅದರಲ್ಲಿ ರಾಗಿಗುಡ್ಡ ವಾರ್ಡ್ ೮ನೇ ಕ್ರಾಸ್‌ನಲ್ಲಿ ಮಾತ್ರ ಗಲಾಟೆ ಆಗಿದೆ. ಘಟನೆಯನ್ನು ನಾವೆಲ್ಲರೂ ಖಂಡಿಸಲೇಬೇಕು. ಹೊರಗಡೆಯಿಂದ ಬಂದವರು ೮ನೇ ಕ್ರಾಸ್ ಗಲಾಟೆಯನ್ನು ೮೦೦ ಕ್ರಾಸ್‌ಗಳಿಗೆ ಹಬ್ಬಿಸಲು ಪ್ರಯತ್ನ ಮಾಡಬಾರದು ಎಂದರು.
ಎಲ್ಲರೂ ಜವಾಬ್ದಾರಿಯಿಂದ ಮಾತಾಡುವುದು ಕಲಿಯಬೇಕು. ನನಗೆ ಈ ಘಟನೆ ಪೂರ್ವ ನಿಯೋಜಿತ ಸಂಚು ಎನಿಸುವುದಿಲ್ಲ. ನಿಷೇಧಾಜ್ಞೆ ಇದ್ದರೂ ೫೦-೬೦ ಹೊರಗಿನಿಂದ ಬಂದ ಬಿಜೆಪಿ ನಾಯಕರು ಆಯುಧ ಪೂಜೆಗೆ ಶಸ್ತ್ರಗಳನ್ನು ಪೂಜೆ ಮಾಡಿ ಎಂದು ಕರೆ ಕೊಟ್ಟಿದ್ದಾರೆ ನಮಗೂ ಕತ್ತಿ ಹಿಡಿಯಲು ಬರುತ್ತೆ ಎಂದೆ ಹೇಳಿದ್ದಾರೆ. ಆಯುಧ ಪೂಜೆ ಸಂದರ್ಭದಲ್ಲಿ ತಲ್ವಾರ್ ಪೂಜೆ ಮಾಡಿ ಎಂದು ಕರೆ ನೀಡಿದರೆ ಇವು ಸಾಂತ್ವಾನದ ಮಾತುಗಳೇ? ಎಂದು ಪ್ರಶ್ನೆ ಮಾಡಿದರು.
ಇ.ಡಿ ದಾಳಿ ರಾಜಕೀಯ ಪ್ರೇರಿತ
ಆರ್.ಎಂ.ಮಂಜುನಾಥ್ ಗೌಡ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದೇ ತಪ್ಪಾಯಿತೆ ಎನ್ನಿಸುತ್ತಿದೆ. ಹತ್ತು ವರ್ಷದ ಹಿಂದಿನ ಪ್ರಕರಣಕ್ಕೆ ಕೇಂದ್ರ ಸರ್ಕಾರ ಈಗ ಇಡಿ ಮೂಲಕ ಸೇಡಿನ ತನಿಖೆ ನಡೆಸುತ್ತಿದೆ. ರಾಜಕೀಯ ಪ್ರೇರಿತ ಎಂದರು.
ಅನಗತ್ಯವಾಗಿ ರಾಜಕೀಯ ಮೇಲ್ಪಂಕ್ತಿಯ ನಾಯಕನ ತೇಜೋವಧೆ ಮಾಡಲಾಗುತ್ತಿದೆ.ಇಡಿಯನ್ನು ಏಡಿಯ ರೀತಿ ಬೆಳೆಸುತ್ತಿದ್ದಾರೆ. ಎದುರಾಳಿ ಯಾಗುತ್ತಾನೆ ಎಂಬ ಭಯದಲ್ಲಿ ರಾಜಕೀಯ ನಾಯಕನ ಮೇಲೆ ಇಡಿ ದಾಳಿ ನಡೆಸಿದರೆ, ಟೀಕೆ ಮಾಡುವ ನನ್ನ ಮೇಲೂ ದಾಳಿ ನಡೆಯಬಹುದು. ಬಿಜೆಪಿಯಲ್ಲಿನ ನಾಯಕರ ಮೇಲೆ ಇಡಿ ದಾಳಿ ಏಕಿಲ್ಲ. ಅವರ ಆಸ್ತಿಗಳ ತಪಾಸಣೆ ಏಕಿಲ್ಲ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಧೀರರಾಜ್ ಹೊನ್ನವಿಲೆ, ರಮೇಶ್ ಶೆಟ್ಟಿ ಶಂಕರಘಟ್ಟ, ಹಿರಣ್ಣಯ್ಯ, ಶಿ.ಜು. ಪಾಷಾ, ಐಡಿಯಲ್ ಗೋಪಿ, ಏಸುದಾಸ, ಅಫ್ರೀದಿ, ಮುಕ್ತಿಯಾರ್ ಅಹಮ್ಮದ್ ಮೊದಲಾದವರಿದ್ದರು