ಶಿವಮೊಗ್ಗ: ನಗರದ ಸೋಮಿನಕೊಪ್ಪದ ಕೆ ಎಚ್ ಬಿ ಪ್ರೆಸ್ ಕಾಲನಿಯಲ್ಲಿರುವ ದೊಡ್ಡಮ್ಮ ದೇವಿ ದೇವಸ್ಥಾನವು ಅನುಗ್ರಹ ಪ್ರಶಸ್ತಿ ಪುರಸ್ಕಾರವನ್ನು ಪ್ರಸ್ತುತ ವರ್ಷದಿಂದ ಆರಂಭಿಸಿದ್ದು, ಶರನ್ನವರಾತ್ರಿ ನಿಮಿತ್ತ ನಡೆಯುವ ಕಾರ್‍ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಎಂ ಎನ್ ಸುಂದರರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. ೨೪ರ ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ದೊಡ್ಡಮ್ಮ ಚಾರಿಟೇಬಲ್ ಟ್ರಸ್ಟ್ ಎಂಬ ಸಂಸ್ಥೆಯನ್ನು ರಾಷ್ಟ್ರಮಟ್ಟದ ಪ್ರಶಸ್ತಿ ಕೊಡಲೆಂದೇ ಹುಟ್ಟುಹಾಕಲಾಗಿದೆ. ಸಮಾಜದಲ್ಲಿ ಬಡವರು, ದೀನದಲಿತರ, ಅಂಗವಿಕಲರ, ರೋಗಿಗಳ ಪರ ಸಮಾಜಕಾರ್‍ಯಗಳಲ್ಲಿ ತೊಡಗಿಕೊಂಡವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎಂದರು.
ಪ್ರಸ್ತುತ ವರ್ಷದ ಪ್ರಶಸ್ತಿಯನ್ನು ಕಲಬುರಗಿಯಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಲೇ ಕುಷ್ಟರೋಗಿಗಳ ಸೇವೆಯನ್ನು ೨೨ ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಕರ್ಮಯೋಗಿ ಹಣಮಂತ ದೇವನೂರ ಇವರಿಗೆ ಘೋಷಿಸಲಾಗಿದೆ. ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂ. ಆಗಿದೆ. ಮಹಾತ್ಮಾ ಗಾಂಧಿ ಲೆಪಸಿ ಸೊಸೈಟಿಯನ್ನು ಸ್ಥಾಪಿಸಿರುವ ಹಣಮಂತ, ಭಿಕ್ಷೆ ಬೇಡುವ, ಮನೆಯಿಂದ ಹೊರಹಾಕಲ್ಪಟ್ಟ, ಸಮಾಜದಿಂದ ಬಹಿಷ್ಕೃತರಾದ ಕುಷ್ಠರೋಗಿಗಳನ್ನು ಕರೆತಂದು ತಾನೇ ಅವರನ್ನು ಸ್ವಚ್ಛಗೊಳಿಸಿ ಸೇವೆ ಮಾಡುತ್ತಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದರು.
ಇದೇ ವೇಳೆ ಸೌಂದರ್‍ಯ ಲಹರಿ ಉಪಾಸಕಿ ಶಿವಮೊಗ್ಗದ ಅಶೋಕನಗರದ ಕಾಮಾಕ್ಷಮ್ಮ ಅವರಿಗೆ ಲಲಿತಾ ಪುರಸ್ಕಾರವನ್ನು ನೀಡಲಾಗುವುದು. ಸಮಾರಂಭದಲ್ಲಿ ಪ್ರಶಸ್ತಿಯನ್ನು ಮಾಗಡಿಯ ಪೋಲೋಹಳ್ಳಿಯ ಭಗವತಾರಿಣಿ ಆಶ್ರಮದ ಮಾತಾಜಿ ವಿವೇಕಮಯಿ ಪ್ರದಾನ ಮಾಡುವರು, ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ಸಿದ್ದಪ್ಪಾಜಿ ವಹಿಸುವರು ಎಂದರು.
ಪತ್ರಿಕಾಗೋಷ್ಟಿಯಲ್ಲಿ ದೇವಸ್ಥಾನ ಸಮಿತಿಯ ನರಸಿಂಹ, ಪುರುಷೋತ್ತಮ ಹಾಜರಿದ್ದರು.