ಶಿವಮೊಗ್ಗ: ಈ ಬಾರಿಯ ಶಿವಮೊಗ್ಗ ದಸರಾ ಅ.೧೫ ರಿಂದ ೨೪ ರ ವರೆಗೆ ಆಚರಿಸಲ್ಪಡಲಿದೆ. ಪ್ರತಿವರ್ಷದಂತೆ ವಿವಿಧ ಸಾಂಸ್ಕೃತಿಕ, ಸ್ಪ*ರ್ಧೆ, ಆಟೋಟ, ಮಹಿಳಾ, ಮಕ್ಕಳ, ಯೋಗ ಸಹಿತ ಹತ್ತ್ತಾರು ನಮೂನೆಯ ದಸರಾ ನಡೆಯಲಿದೆ. ಹೊಸದಾಗಿ ಜ್ಞಾನ ದಸರಾ ಆರಂಭಿಸಲಾಗುವುದು. ವಿಜಯದಶಮಿಯಂದು ಮೂರು ಆನೆಗಳು ಅಂಬಾರಿಯನ್ನು ಹೊರಲು ಸಕ್ರೆಬೈಲಿನಿಂದ ಆಗಮಿಸಲಿವೆ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಹೇಳಿದರು.
ಮಹಾನಗರ ಪಾಲಿಕೆಯಲ್ಲಿ ಈ ಸಂಬಂಧ ಮೇಯರ್ ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಶಾಸಕರು, ಅ. ೧೫ರಂದು ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮೂಲಕ ದಸರಾ ಹಬ್ಬಕ್ಕೆ ಚಾಲನೆ ನೀಡಲಾಗುವುದು. ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಅಂದು ೧೧ ಗಂಟೆಗೆ ಈ ಕಾರ್‍ಯಕ್ರಮವನ್ನು ಶಾಸ್ತ್ರೀಯ ನೃತ್ಯಗಾರ್ತಿ ವೈಜಯಂತಿ ಕಾಶಿ ಉದ್ಘಾಟಿಸುವರು. ಅತಿಥಿಗಳಾಗಿ ಸಚಿವ ಮಧು ಬಂಗಾರಪ್ಪ, ಡಿ ಸುಧಾಕರ್, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ, ಶಾರದಾ ಪೂರ್‍ಯಾ ನಾಯ್ಕ, ಹಾಗೂ ಎಂಎಲ್ಸಿಗಳಾದ ಎಸ್. ರುದ್ರೇಗೌಡ, ಡಿ ಎಸ್ ಅರುಣ್, ಬೋಜೇಗೌಡ, ಭಾರತಿ ಶೆಟ್ಟಿ ಆಗಮಿಸುವರು ಎಂದರು.
ಮುಕ್ತಾಯ ಸಮಾರಂಭ ವಿಜಯ ದಶಮಿಯ ಮೂಲಕ ನಡೆಯಲಿದ್ದು, ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹವನ್ನು ವೈಭವಯುತವಾಗಿ ಅಂಬಾರಿ ಮೆರವಣಿಗೆಯಲ್ಲಿ ಅ.೨೪ ರಂದು ನಡೆಸಲಾಗುವುದು. ಕೋಟೆಯ ಶಿವಪ್ಪನಾಯಕ ಅರಮನೆ ಆವರಣದಿಂದ ದೇವಾನುದೇವತೆಗಳ ಜೊತೆ ನಂದಿಧ್ವಜಕ್ಕೆ ಸಲ್ಲಿಸಿ ಮೆರವಣಿಗೆ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಯನ್ನು ಮೇಯರ್ ಶಿವಕುಮಾರ್ ೨.೩೦ಕ್ಕೆ ನೆರವೇರಿಸುವರು. ಜಿಲ್ಲಾಧಿಕಾರಿ ಸೆಲ್ವಮಣಿ, ಎಸ್ ಪಿ ಮಿಥುನ್‌ಕುಮಾರ್, ಆಯುಕ್ತ ಮಾಯಣ್ಣ ಗೌಡ ಹಾಗೂ ಪಾಲಿಕೆಯ ಸದಸ್ಯರು ಪಾಲ್ಗೊಳ್ಳುವರು ಎಂದರು.
ಈ ಬಾರಿ ಅಂಬಾರಿಯನ್ನು ಹೊರಲು ಸಕ್ರೆಬೈಲಿನಿಂದ ಸಾಗರ್, ನೇತ್ರಾವತಿ ಮತ್ತು ಹೇಮಾವತಿ ಎಂಬ ಆನೆಗಳು ಬರಲಿವೆ. ಜಂಬೂಸವಾರಿಯಲ್ಲಿ ಮಂಗಳವಾದ್ಯ, ಸಮಾಳ ವಾದ್ಯ, ನಂದಿ ಧ್ವಜ ಕುಣಿತ, ವೀರಗಾಸೆ, ಚಂಡೆ-ಮದ್ದಳೆ, ಯಕ್ಷಗಾನ, ಗೊಂಬೆಗಳ ಕುಣಿತ, ಕೀಲುಕುದುರೆ, ಕುಂಡ ಹೊತ್ತ ಮಹಿಳೆಯ ಕುಣಿತ, ಮಹಿಳಾ ಡೊಳ್ಳು, ಹುಲಿವೇಷ ಮತ್ತಿತರ ಕಲಾತಂಡಗಳು ಭಾಗವಹಿಸಲಿವೆ. ಬನ್ನಿಮುಡಿಯುವ ಕಾರ್‍ಯಕ್ರಮಕ್ಕ್ಕೆ ಸಾಂಪ್ರದಾಯಿಕವಾಗಿ ತಹಶೀಲ್ದಾರ್ ಆರ್. ಪ್ರದೀಪ್ ಚಾಲನೆ ನೀಡುವರು. ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಲಕ್ಷ್ಮೀ ಶಂಕರ್ ನಾಯ್ಕ್ ಸಹಿತ ಸದಸ್ಯರು ಹಾಜರಿದ್ದರು.
ಕಳೆದ ವರ್ಷ ದಸರಾಕ್ಕೆ ಎರಡು ಕೋಟಿ ೬೦ ಲಕ್ಷ ಖರ್ಚಾಗಿತ್ತು. ಸರಕಾರ ೧ ಕೋಟಿ ಹಣ ನೀಡಿತ್ತು. ಈ ಬಾರಿ ಸರ್ಕಾರಕ್ಕೆ ೧.೫೦ ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಎಷ್ಟು ಹಣ ನೀಡುತ್ತದೆ ಎನ್ನುವುದು ಗೊತ್ತಿಲ್ಲ. ಇದರ ಜೊತೆಗೆ ನಗರಪಾಲಿಕೆಯಲ್ಲೂ ದಸರಾಕ್ಕಾಗಿ ವಿಶೇಷ ಅನುದಾನ ಇಡಲಾಗಿದೆ. ಎಲ್ಲವನ್ನೂ ಸೇರಿಸಿ ಅದ್ದೂರಿ ದಸರಾ ಮಾಡಲಾಗುವುದು. ಕಳೆದ ಬಾರಿ ೨೯ ಲಕ್ಷ ಆನೆಗಳಿಗೆ ಖರ್ಚಾಗಿತ್ತು. ಆನೆಗಳಿಗೆ ಆಹಾರ ಕೊರತೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ಅಂತಹ ಘಟನೆ ನಡೆದಿಲ್ಲ ಚೆನ್ನಾಗಿಯೇ ಸಾಕಲಾಗುತ್ತದೆ. ಮಾವುತರಿಗೂ ಸಹ ಗೌರವಧನ ನೀಡಿ ಸನ್ಮಾನಿಸಲಾಗುತ್ತದೆ
– ಚನ್ನಬಸಪ್ಪ್ಪ, ಶಾಸಕ