ಸಾಗರ, ಅ.೧೫- ಗೇಣಿ ರೈತರಿಗೆ ಭೂಮಿ ಹಕ್ಕು ಕೊಡಿಸುವ ಹೋರಾಟವೇ ನನ್ನ ರಾಜಕೀಯ ಜೀವನಕ್ಕೆ ದಾರಿ ಮಾಡಿಕೊಟ್ಟಿತು ಎಂದು ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಸಮೀಪದ ಈಡಿಗ ಸಮುದಾಯ ಭವನದಲ್ಲಿ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಏರ್ಪಡಿಸಿದ್ದ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪನವರಿಗೆ ಹಾಗೂ ಶಾಸಕರಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಹೋರಾಟದ ದಾರಿಯನ್ನು ಹೇಳಿಕೊಟ್ಟವರು ಗೋಪಾಲ ಗೌಡರು ಮತ್ತು ಲೋಹಿಯಾರವರು. ನಾನು ಹೈಸ್ಕೂಲು ಓದುತ್ತಿರುವಾಗಲೇ ಗೇಣಿ ರೈತರ ಚಳವಳಿ ಆರಂಭಗೊಂಡಿತ್ತು. ಗಣಪತಿಯಪ್ಪನವರು ರೈತ ಸಂಘದ ಅಧ್ಯಕ್ಷರಾಗಿದ್ದರು. ಗೋಪಾಲ ಗೌಡರು ಚಳವಳಿಯ ನೇತೃತ್ವ ವಹಿಸಿಕೊಂಡಿದ್ದರು. ಕಾರ್ಯಕರ್ತರನ್ನು ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದರು. ಆ ಸಂದರ್ಭದಲ್ಲಿ ಲೋಹಿಯಾರವರೂ ಕಾಗೋಡಿಗೆ ಬಂದರು.
ಚಳವಳಿಯಲ್ಲಿ ಹಿಂಸೆ ಮಾಡಕೂಡದು ಎಂದು ಸೂಚಿಸಿ ಚಳವಳಿಗೆ ಹೊಸ ಶಕ್ತಿ ನೀಡಿದರು. ಕಾಗೋಡಿನ ನಡೆದ ಚಳವಳಿ ನನ್ನ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಿತು ಎಂದು ಇತಿಹಾಸವನ್ನು ನೆನಪಿಸಿಕೊಂಡ ಅವರು, ಅಂದಿನ ಹೋರಾಟದಲ್ಲಿ ನಂಬಿಕೆ, ವಿಶ್ವಾಸ ಇತ್ತು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ನಂಬಿಕೆ, ವಿಶ್ವಾಸ ಬರುವುದು ಕಷ್ಟ ಎಂದವರು ವಿಷಾದಿಸಿದರು.
ರಾಜ್ಯ, ಜಿಲ್ಲೆಯಲ್ಲಿ ವಿಶೇಷವಾಗಿ ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಹೆಚ್ಚು ಗೇಣಿ ರೈತರು ಭೂಮಿ ಪಡೆದುಕೊಂಡರು. ನೆಂಟರು, ಬಂಧು ಬಳಗ ಯಾವುದನ್ನೂ ನೋಡದೆ ಭೂಮಿ ನೀಡಿದ ತೃಪ್ತಿ ನನಗಿದೆ. ಆದರೆ ಭೂಮಿ ಕಳೆದುಕೊಂಡವರು ನನ್ನ ಮೇಲೆ ದ್ವೇಷ ಇಟ್ಟುಕೊಂಡಿದ್ದಾರೆ ಎಂದರು.
ಸಂಘದ ವತಿಯಿಂದ ಕಾಗೋಡು ತಿಮ್ಮಪ್ಪ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನೌಕರರು ಬದ್ಧತೆಯಿಂದ ಕೆಲಸ ಮಾಡಿದಾಗ ಸಂಘದ ಗೌರವವೂ ಹೆಚ್ಚುತ್ತದೆ. ನೌಕರರಲ್ಲಿ ಬಹುಸಂಖ್ಯಾತ ಈಡಿಗರೇ ಶೇ. ೭೫ ರಷ್ಟು ಇದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಣ ಇಲಾಖೆಯ ಡಾ.ಅನ್ನಪೂರ್ಣ ಎಚ್., ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಸವರಾಜು ಕೆ., ಶ್ರದ್ಧಾ ಡಿ.ಎನ್. ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ನಿವೃತ್ತ ನೌಕರರಾದ ಗಣಪತಪ್ಪ, ಶೇಖರಪ್ಪ, ಚಂದ್ರಪ್ಪ, ಕೃಷ್ಣಮೂರ್ತಿ, ಗಾಮಪ್ಪ, ನಾಗರಾಜ, ಗಣಪತಿ, ಶ್ರೀನಿವಾಸ, ಪ್ರಭಾಕರ ಅವರನ್ನು ಸನ್ಮಾನಿಸಲಾಯಿತು.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಯೋಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಬಾಲಕಿ ಸನ್ನಿಧಿಯನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತ, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಸೀಲ್ದಾರ್ ಚಂದ್ರಶೇಖರ ನಾಯ್ಕ್, ಬಿಇಒ ಪರಶುರಾಮಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡ.ಭರತ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಸವಿನಯ್, ಕಲ್ಯಾಣಾಧಿಕಾರಿ ಮಂಜಪ್ಪ, ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಸಹನಿ ಮತ್ತಿತರರು ಹಾಜರಿದ್ದರು.
ಸತೀಶ್ ಸಂಗಡಿಗರು ಪ್ರಾರ್ಥಿಸಿದರು. ವೀರಭದ್ರಪ್ಪ ಪಿ. ಸ್ವಾಗತಿಸಿದರು. ಜ್ಯೋತಿ ಆರ್. ನಿರೂಪಿಸಿದರು.
, ಸಮಾಜಕ್ಕೆ ಗಟ್ಟಿ ದನಿಯಾಗಿ ಸಂಘಟನೆ ನಿಲ್ಲಬೇಕು. ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ. ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಿದರೆ ಮತ್ತೊಬ್ಬ ವಿದ್ಯಾರ್ಥಿಗೆ ಅದು ಸ್ಫೂರ್ತಿಯಾಗುತ್ತದೆ. ಹಿರಿಯರಾದ ಕಾಗೋಡು ತಿಮ್ಮಪ್ಪನವರು, ದಿವಂಗತ ಬಂಗಾರಪ್ಪನವರು, ಜಾಲಪ್ಪನವರು, ಡಾ.ರಾಜಕುಮಾರ್ ಮುಂತಾದವರೆಲ್ಲ ಸಮಾಜಕ್ಕೆ ಘನತೆಯನ್ನು ಹೆಚ್ಚಿಸಿದ್ದಾರೆ. ಅವರ ಸಾಧನೆ ಸಮಾಜಕ್ಕೆ ಪ್ರೇರಣೆ ನೀಡಬೇಕು.
– ಶಾಸಕ ಗೋಪಾಲಕೃಷ್ಣ ಬೇಳೂರು