Malenadu Mitra
ರಾಜ್ಯ ಶಿವಮೊಗ್ಗ

ಬಿಜೆಪಿಯಲ್ಲಿ ಈಶ್ವರಪ್ಪ ಮೂಲೆ ಗುಂಪು, ಬಾಯಿಗೆ ಬಂದಂಗೆ ಮಾತನಾಡುವುದೇ ಅವರ ಅರ್ಹತೆ: ಆಯನೂರು ಮಂಜುನಾಥ್

ಶಿವಮೊಗ್ಗ: ಹರುಕು ಬಾಯಿಗೆ ಹೊಲಿಗೆ ಬಿದ್ದರೂ ಬುದ್ದಿ ಬಂದಿಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಸರ್ಕಾರ ರಚನೆಗೆ ರಾಜ್ಯದ ಜನರು ಅವಕಾಶ ಕೊಟ್ಟಿದ್ದಾರೆ. ಕಳೆದ ನಾಲ್ಕೈದು ತಿಂಗಳಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ನಾಯಕರು ನೀರಿನಿಂದ ಹೊರಬಿದ್ದ ಮೀನಿನ ತರ ಒದ್ದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಕೇವಲ ೫ ತಿಂಗಳೊಳಗೆ ಬಿಜೆಪಿ ಅಧಿಕಾರವಿಲ್ಲದೆ ಒದ್ದಾಡುತ್ತಿದೆ. ಅದಕ್ಕಾಗಿ ೫೦ ಕೋಟಿ ರೂಪಾಯಿ ಹಣದ ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರ ಮನೆಯ ಬಾಗಿಲನ್ನು ಬಡಿಯುತ್ತಿದ್ದಾರೆ. ಸರ್ಕಾರ ಬೀಳಿಸುವ ಯತ್ನ ಮಾಡುತ್ತಿದೆ. ಈಶ್ವರಪ್ಪ ಅವರು ಸಹ ಸರಕಾರ ಬೀಳಿಸುತ್ತೇವೆ, ಬೀಳಿಸಿದರೆ ತಪ್ಪೇನು ಅಂದಿದ್ದಾರೆ. ಈಶ್ವರಪ್ಪ ಅವರಿಗೆ ಪ್ರಜಾಪ್ರಭುತ್ವ ಗೊತ್ತಿಲ್ಲ. ಅವರು ಸಂವಿಧಾನ ಓದಿಲ್ಲ. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾಗ ಯಡಿಯೂರಪ್ಪ ವಿರುದ್ದ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಈಶ್ವರಪ್ಪ ಕೊಡುಗೆಯೇನು. ಈಶ್ವರಪ್ಪ ಅವರನ್ನು ನಂಬಿ ಒಬ್ಬನಾದರೂ ಶಾಸಕ ಬಿಜೆಪಿಗೆ ಬಂದಿದ್ದಾನಾ. ಈಶ್ವರಪ್ಪ ಅವರಿಗೆ ಅಂತಹ ಶಕ್ತಿ, ಸಾಮರ್ಥ್ಯ ಇಲ್ಲ. ಅಪ್ರಬುದ್ದ ರಾಜಕಾರಣಿಗಳಲ್ಲಿ ಈಶ್ವರಪ್ಪ ಒಬ್ಬರು. ಬೇಜವಾಬ್ದಾರಿ ಮಾತನಾಡುವ ಈಶ್ವರಪ್ಪ ಅವರಿಂದ ಪಕ್ಷಕ್ಕೆ ನಷ್ಟ. ಹೀಗಾಗಿಯೇ ಈಶ್ವರಪ್ಪ ಅವರನ್ನು ಪಕ್ಷ ಎಲ್ಲಾ ಹುದ್ದೆಯಿಂದ ದೂರ ಇಟ್ಟಿದೆ ಎಂದರು.

ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವ ಶಕ್ತಿ ಇಲ್ಲ. ಪುರಸಭೆಯಲ್ಲಿ ಪಕ್ಷವನ್ನು ತಮ್ಮ ಶಕ್ತಿ ಮೇಲೆ ಅಧಿಕಾರಕ್ಕೆ ತರುವ ಸಾಮರ್ಥ್ಯ ಅವರಿಗಿಲ್ಲ. ಇಂತಹ ವ್ಯಕ್ತಿ ಡಿ.ಕೆ.ಶಿವಕುಮಾರ್ ರನ್ನು ಏಕವಚನದಲ್ಲಿ ಸಂಬೋಧಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.
ಈಶ್ವರಪ್ಪ ಅವರ ಅರ್ಹತೆ, ಭ್ರಷ್ಟಾಚಾರ ನೋಡಿ ಅವರಿಗಿದ್ದ ಎಲ್ಲಾ ಅವಕಾಶವನ್ನು ಕಿತ್ತುಕೊಂಡಿದ್ದಾರೆ. ಯಡಿಯೂರಪ್ಪ ಅವರು ಜೈಲಿಗೆ ಹೋದಾಗ ನನ್ನಂತವನು ಆಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಅಂದಿದ್ದರು. ಯಡಿಯೂರಪ್ಪ ಜೈಲಿಗೆ ಹೋದಾಗ ಖುಷಿಪಟ್ಟ ನಿಮಗೆ ಕನಿಷ್ಠ ಕೃತಜ್ಞತೆ ಇಲ್ಲ. ಸೌಜನ್ಯಕ್ಕೂ ಜೈಲಿಗೆ ಭೇಟಿ ಸಾಂತ್ವಾನ ಹೇಳಲಿಲ್ಲ. ಶಿವಮೊಗ್ಗದ ಅಭಿವೃದ್ಧಿ ಮಾಡಿದ್ದ ಯಡಿಯೂರಪ್ಪ ಅವರು ಶಿವಮೊಗ್ಗದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಶೂನ್ಯ. ಕೇವಲ ಹಣ ಸಂಪಾದನೆ ಮಾಡಿದ್ದೀರಿ ಅಷ್ಟೇ. ಯಡಿಯೂರಪ್ಪ ನವರ ವಿರುದ್ಧ ಸಂಚು ಮಾಡಿದ ರಾಜಕಾರಣಿ ಈಶ್ವರಪ್ಪ ಎಂದರು.

ಈಶ್ವರಪ್ಪ ನೀರಾವರಿ ಸಚಿವರಾಗಿದ್ದಾಗ ಗುತ್ತಿಗೆದಾರನ ವಿರುದ್ಧ ನಿಮ್ಮ ಮಗ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆದರೆ ಗುತ್ತಿಗೆದಾರ ನಿಮ್ಮನ್ನು ಬಂದು ಭೇಟಿ ಮಾಡಿದಾಗ ಸುಮ್ಮನಾದಿರಿ ಏಕೆ ಎಂದು ಪ್ರಶ್ನಿಸಿದ ಅವರು, ನೀರಾವರಿ ಸಚಿವರಾಗಿದ್ದರು ಒಂದೇ ಒಂದು ದಿನ ಕಾವೇರಿ ಸಮಸ್ಯೆ ಬಗ್ಗೆ ಮಾತನಾಡುವ ಪ್ರೌಢಿಮೆ ಇಲ್ಲ. ಬಾಯಿಗೆ ಬಂದ ಹಾಗೆ ಮಾತನಾಡುವುದೆ ಅವರ ಪ್ರತಿಭೆ. ಎಲ್ಲರನ್ನು ಏಕವಚನದಲ್ಲಿ ಮಾತನಾಡುವುದು.ಈಶ್ವರಪ್ಪ ಹರಕು ಬಾಯಿ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತು. ಇಂಧನ, ನೀರಾವರಿ ಸೇರಿದಂತೆ ನೀವು ನಿರ್ವಹಿಸಿದ ಖಾತೆಗಳಲ್ಲಿ ಲೂಟಿ ಮಾಡಿದ್ದು ಬಿಟ್ಟರೆ ಬೇರೇನು ಮಾಡಲಿಲ್ಲ ಎಂದ ಅವರು, ನೀರಾವರಿ-ಇಂಧನ ಇಲಾಖೆಯನ್ನೆ ದೋಚಿದ ಈ ವ್ಯಕ್ತಿಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ವಿರುದ್ಧ ದ್ರೋಹದ ರಾಜಕಾರಣ ನಾನು ಮಾಡಿಲ್ಲ. ನಿಮ್ಮಂತೆ ನಾನು ಪಕ್ಷದ ನಾಯಕರ ವಿರುದ್ಧವೇ ಕತ್ತಿ ಮಸೆಯಲಿಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಲಿಲ್ಲ. ಬದಲಿಗೆ ಮನಸ್ಸಿಗೆ ಸರಿ ಬರಲಿಲ್ಲ ಎಂದಾಗ ಪಕ್ಷ ಬಿಟ್ಟು ಹೊರಬಂದಿದ್ದೇನೆ. ನನಗೆ ನೈತಿಕತೆ ಇಲ್ಲ ಎನ್ನುವ ನಿಮಗೆ ಅದರ ಅರ್ಥವಾದರೂ ಗೊತ್ತಾ. ಈ ಮನುಷ್ಯನ ನೈತಿಕ ನೆಲಗಟ್ಟು ಯಾವುದು. ಈಶ್ವರಪ್ಪ ಭ್ರಷ್ಟಾಚಾರದ ತುತ್ತ ತುದಿಯಲ್ಲಿ ಇದ್ದಾರೆ ಎಂದು ಆರೋಪಿಸಿದರು.
.

ಸ್ಮಾರ್ಟ್ ಸಿಟಿ ಯೋಜನೆಯಡಿ ನೀವು ಎಷ್ಟು ಲೂಟಿ ಹೊಡೆದಿದ್ದೀರಾ, ನಿಮ್ಮ ಕುಟುಂಬದವರ ಪಾತ್ರವೇನು ಎಂಬುದು ಜನತೆಗೆ ಗೊತ್ತಿದೆ. ಹೆರಿಗೆ ಬೇರೆಯವರದ್ದಾದರೆ ತೊಟ್ಟಿಲು ಕಟ್ಟುವವರು ಈಶ್ವರಪ್ಪ ಎಂದ ಅವರು, ಜೈಲಿಗೆ ಹೋಗಿಬಂದ ಯಡಿಯೂರಪ್ಪರನ್ನು ಬಿಜೆಪಿಗರು ಒಪ್ಪಿಕೊಳ್ಳುವುದಾರೆ ಡಿ.ಕೆ.ಶಿವಕುಮಾರ್ ರನ್ನು ಕಾಂಗ್ರೆಸ್ಸಿಗರು ಒಪ್ಪಿಕೊಳ್ಳಬಾರದೆ. ಈಶ್ವರಪ್ಪರದು ಹರಕು ಬಾಯಿ ಎಂದು ಗೊತ್ತಿದೆ. ಅವರು ಗಟಾರಾದಲ್ಲೇ ಇರಲಿ ಎಂದು ಲೇವಡಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಪ್ರಮುಖರಾದ ಎಸ್.ಕೆ ಮರಿಯಪ್ಪ,ಧೀರರಾಜ್ ಹೊನ್ನವಿಲೆ ಸೇರಿದಂತೆ ಮೊದಲಾದವರಿದ್ದರು.

ನನಗೂ ಏಕವಚನ ಬಳಸುವುದು ಗೊತ್ತು. ಯಾವುದೇ ಅಧ್ಯಯನ ಮಾಡದ ನಿಮಗೆ ವಿಚಾರಗಳೆ ಗೊತ್ತಿಲ್ಲ. ಪಕ್ಷ ನಿಮ್ಮ ಭ್ರಷ್ಟಾಚಾರ ಗಮನಿಸಿಯೇ ನಿಮಗೆ ದೂರವಿಟ್ಟಿದೆ. ನಾಲಿಗೆ ಹರಿಬಿಟ್ಟರೆ ನಿಮ್ಮ ಭ್ರಷ್ಟಾಚಾರವನ್ನು ದಾಖಲೆ ಸಮೇತ ಬಿಚ್ಚಿಡ ಬಲ್ಲೆ. ಆದರೆ ಎಲ್ಲಿಂದ ಶುರು ಮಾಡಬೇಕೆಂದು ಯೋಚಿಸುತ್ತಿದ್ದೇನೆ

ಆಯನೂರು ಮಂಜುನಾಥ್, ಕಾಂಗ್ರೆಸ್ ವಕ್ತಾರ

Ad Widget

Related posts

ಸಂಸದರಿಂದ ಶಿಷ್ಟಾಚಾರ ಉಲ್ಲಂಘನೆ : ಆಯನೂರು ಆರೋಪ

Malenadu Mirror Desk

ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಿನಿಂದ ಪಾಲನೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Malenadu Mirror Desk

ಅಂದಗಾತಿಯ ಸಾವಿನ ಹಿಂದಿನ ಕರಾಳ ಮುಖ ಗೊತ್ತೆ ? ಆನೆಗದ್ದೆಯ ಮನೆಯೊಂದರಲಿ ಒಂದು ತಿಂಗಳಲ್ಲಿ ಎರಡು ಆತ್ಮಹತ್ಯೆನಡೆದದ್ದಾದರೂ ಯಾಕೆ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.