ಸೊರಬ: ತಾಲೂಕು ದಸರಾ ಉತ್ಸವ ಸಮಿತಿ, ತಾಲೂಕು ಆಡಳಿತ ಹಾಗೂ ಪುರಸಭೆ ವತಿಯಿಂದ ೯ ದಿನಗಳ ಕಾಲ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ದಸರಾ ಉತ್ಸವಕ್ಕೆ ಮಂಗಳವಾರ ಬನ್ನಿ ಮುಡಿಯುವುದರೊಂದಿಗೆ ವೈಭವದ ತೆರೆ ಎಳೆಯಲಾಯಿತು.
ಇಲ್ಲಿನ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ನಾಡ ದೇವತೆ ದುರ್ಗಾದೇವಿಯ ಮೆರವಣಿಗೆಯು ವಿವಿಧ ಜನಪದ ಕಲಾತಂಡಗಳೊಂದಿಗೆ ಹಾಗೂ ವಾದ್ಯ ಘೋಷಗಳೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಸಾಗಿ ಬನ್ನಿ ಮಂಟಪದವರೆಗೆ ನಡೆಯಿತು.
ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ತಹಸೀಲ್ದಾರ್ ಹುಸೇನ್ ಸರಕಾವಸ್ ಹಾಗೂ ಪುರೋಹಿತ ನಾರಾಯಣ ಅವರು ಬನ್ನಿ ಮರಕ್ಕೆ ಬಿಲ್ಲು ಹೊಡೆಯುವ ಮೂಲಕ ಬನ್ನಿ ಮುಡಿಯುವುದಕ್ಕೆ ಚಾಲನೆ ನೀಡಿದರು.
ಸಚಿವ ಮಧ ಬಂಗಾರಪ್ಪ ಮಾತನಾಡಿ, ಬರಗಾಲದ ನಡುವೆ ಅಸಂಖ್ಯಾತ ಜನರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಬರ ಎದುರಿಸುವ, ಸಮಸ್ಯೆಗಳನ್ನು ನಿವಾರಿಸುವುದಕ್ಕೆ ದೇವಿಯನ್ನು ಪ್ರಾರ್ಥಿಸಿದ್ದಾರೆ. ಇಷ್ಟೊಂದು ಸಂಖ್ಯೆಯ ಜನರು ಹಿಂದೆಂದೂ ಸೇರಿರಲಿಲ್ಲ. ನಾನೂ ಕೂಡ ನಾಡಿನ ಜನತೆಗೆ ಒಳಿತಾಗಲಿ ಸಂಕಷ್ಟಗಳು ದೂರಾಗಲಿ ಎಂದು ದೇವಿಯನ್ನು ಪ್ರಾಥಿಸಿದ್ದೇನೆ ಎಂದರು.
ಮಹಿಳೆಯರು ಸೇರಿದಂತೆ ಅನೇಕರರು ಮೈಸೂರು ಪೇಟ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ಮೆರವಣಿಗೆಯಲ್ಲಿ ಪಟ್ಟಣದ ಲಕ್ಷ್ಮೀರಂಗನಾಥ, ಎಲ್ಲಮ್ಮ ದೇವಿ, ವಿಠ್ಠಲ ರುಖುಮಾಯಿ, ಪೇಟೆ ಬಸವೇಶ್ವರ, ದುರ್ಗಮ್ಮ, ಮಾರಿಕಾಂಬಾ, ನಾಗ ಚೌಡೇಶ್ವರಿ ಸೇರಿದಂತೆ ಪಟ್ಟಣದ ವಿವಿಧ ದೇವತಿಗಳ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಸಚಿವ ಮಧು ಬಂಗಾರಪ್ಪ, ಅನಿತಾ ಮಧು ಬಂಗಾರಪ್ಪ, ಸೂರ್ಯ ಮಧು ಬಂಗಾರಪ್ಪ ಅವರು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಸರಾ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿ ಪರಶುರಾಮ್ ಸಣ್ಣಬೈಲು, ಎಂ.ಡಿ.ಉಮೇಶ್, ಸುಜಾತಾ ಜೋತಾಡಿ, ರತ್ನಾ, ದೇವಕಿ ಪಾಣಿ ರಾಜಪ್ಪ, ಹೆಚ್.ಗಣಪತಿ, ದೀಪಕ್ ಧೋಂಗಡೇಕರ್, ಸೇರಿದಂತೆ ತಾಲೂಕಿನಾದ್ಯಂತ ಸಂಘ-ಸಂಸ್ಥೆಯವರು, ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ, ಉತ್ಸವಕ್ಕೆ ಮೆರಗು ತುಂಬಿದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಸಾವಿರಾರು ಭಕ್ತರು ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ನಂತರ ಪರಸ್ಪರ ಬನ್ನಿ ಹಂಚಿಕೊಳ್ಳುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು