ಶಿವಮೊಗ್ಗ: ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ತನಿಖೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ದೊಡ್ಡಮಟ್ಟದ ತನಿಖೆ ಆಗಬೇಕು. ಈ ಬಗ್ಗೆ ಸಿಎಂ ಅವರಿಗೆ ಮನವಿ ಮಾಡಿದ್ದೇನೆ. ಕಳಪೆ ಕಾಮಗಾರಿ ಬಗ್ಗೆ ೧೫೦೦ ಅರ್ಜಿ ಬಂದಿದೆ. ತಪ್ಪಿತಸ್ಥರ ಮೇಲೆ ತನಿಖೆ ಆಗಬೇಕು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಬರಗಾಲ ಆವರಿಸಿದೆ. ಮುಂಬರುವ ದಿನಗಳಲ್ಲಿ ನೀರಿನ ಹಾಹಾಕಾರ ಉಂಟಾಗಬಹುದು. ಹಾಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲೆಯಲ್ಲಿ ಸಮಪರ್ಕವಾಗಿ ಅನುಷ್ಟಾನಗೊಳಿಸಲಾಗುವುದು. ಆ ಮೂಲಕ ಹಳ್ಳಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದು ಎಂದರು.
ವಿದ್ಯುತ್ ಸಮಸ್ಯೆ ಬಗ್ಗೆ ಇಂಧನ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಬರಗಾಲ ಛಾಯೆ ಇರುವುದರಿಂದ ಸರಕಾರ ರೈತರಿಗೆ ೫ ತಾಸು ವಿದ್ಯುತ್ ನೀಡುವ ಭರವಸೆ ನೀಡಿದೆ.ನಾನ್ ಸ್ಟಾಪ್ ಐದು ತಾಸು ಕೊಡುವಂತೆ ಸೂಚನೆ ನೀಡಿದ್ದೇನೆ. ಐದು ತಾಸು ವಿದ್ಯುತ್ ಕೊಟ್ಟರೆ ರೈತರಿಗೆ ಅನುಕೂಲ ಆಗಲಿದೆ ಎಂದರು.
ಶಿಕ್ಷಕರ ನೇಮಕಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ೯ ಸಾವಿರ ಅಭ್ಯರ್ಥಿಗಳು ನಾನ್ ಹೈದ್ರಾಬಾದ್ ಕರ್ನಾಟಕದಲ್ಲಿ ತೆಗೆದುಕೊಂಡಿದ್ದೇವೆ. ಇನ್ನು ೪ ಸಾವಿರ ಹೈದ್ರಾಬಾದ್ ಕರ್ನಾಟಕಕ್ಕೆ ತೆಗೆದುಕೊಳ್ಳಬೇಕು. ಆ.೩೦ ರಂದು ಈ ಬಗ್ಗೆ ನ್ಯಾಯಾಲಯದಲ್ಲಿ ಒಂದು ಕೇಸ್ ಇದೆ. ಬಹಳ ಬೇಗ ಇತ್ಯರ್ಥ ಆಗಲಿದೆ. ಇತ್ಯರ್ಥ ಆದರೆ ಹೈದರಾಬಾದ್ ಕರ್ನಾಟಕಕ್ಕೆ ೪ ಸಾವಿರ ಶಿಕ್ಷಕರ ನೇಮಕವಾಗಲಿದೆ. ಮುಂದಿನ ವರ್ಷ ೨೦ ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. ೨೦ ಸಾವಿರದಲ್ಲಿ ೧೫ ಸಾವಿರ ರೆಗ್ಯುಲರ್ ಟೀಚರ್ ಹಾಗೂ ೫ ಸಾವಿರ ಸಂಗೀತ, ಪಿಇ ಶಿಕ್ಷಕರ ನೇಮಕವಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಕ್ವಾಲಿಟಿ ಎಜುಕೇಷನ್ ಕೊಡಲು ಯೋಜನೆ ಸಿದ್ದಪಡಿಸುತ್ತಿದ್ದೇವೆ. ಅಜೀಂ ಫ್ರೇಂಜಿ, ಇನ್‌ಪೋಸಿಸ್ ಖಾಸಗಿ ಸಂಸ್ಥೆಯಿಂದ ಶಿಕ್ಷಕರಿಗೆ ತರಬೇತಿ ಕೊಡಿಸುತ್ತೇವೆ. ಮಕ್ಕಳಿಗೆ ಪೌಷ್ಟಿಕಾಂಶ ಕೊಡಲು ಸಿದ್ದತೆ ನಡೆಯುತ್ತಿದೆ. ೨೩ ನೇ ತಾರೀಖು ಬಿಡುಗಡೆ ಆಗಲಿದೆ ಎಂದ ಅವರು, ಪಠ್ಯಪುಸ್ತಕ ಗಾತ್ರ ಕಡಿಮೆ ಆಗಬೇಕು. ಈ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ ಎಂದರು.
ಕರ್ನಾಟಕ ಬಸವಣ್ಣನ ನಾಡು ಅಂತಾಗಬೇಕು ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಂ.ಬಿ.ಪಾಟೀಲ್ ಅವರು ವೈಯಕ್ತಿಕವಾಗಿ ಅವರ ಅಭಿಪ್ರಾಯ ಕೊಟ್ಟಿದ್ದಾರೆ. ಈ ಬಗ್ಗೆ ಸರಕಾರ ತೀರ್ಮಾನ ಮಾಡುತ್ತದೆ. ನಾನು ಈ ಬಗ್ಗೆ ಚರ್ಚೆ ಮಾಡಲ್ಲ, ಬಸವಣ್ಣನವರ ಬಗ್ಗೆ ಅಪಾರವಾದ ಗೌರವ ಇದೆ. ಬಸವಣ್ಣನವರ ಮಾರ್ಗದರ್ಶನ ನಾವು ಅನುಸರಿಸುತ್ತೇವೆ ಎಂದರು.
ಸಿಎಂ, ಡಿಸಿಎಂ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮಾಜಿ ಸಿಎಂ ಹೆಚ್‌ಡಿಕೆ ಆರೋಪ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಅವರು,ಕಾನೂನು ಇದೆ ಎಲ್ಲವೂ ಅದರಂತೆ ನಡೆಯುತ್ತದೆ ಎಂದು ಹೇಳಿದರು.