Malenadu Mitra
ರಾಜ್ಯಶಿವಮೊಗ್ಗ

ಮೀಸಲಾತಿಯಿಂದ ಅಭಿವೃದ್ಧಿ ಕುಂಠಿತವಾಗುವುದಿಲ್ಲ: ಬಿ.ಕೆ. ಹರಿಪ್ರಸಾದ್

ಶಿವಮೊಗ್ಗಅ೩೦:ಮೀಸಲಾತಿ ನೀಡುವುದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ದೇಶಕ್ಕೆ ನಷ್ಟವಾಗುತ್ತದೆ ಎಂಬುವುದು ಶುದ್ಧ ಸುಳ್ಳು. ಹಿಂದುಳಿದ ವರ್ಗಗಳು ಯಾರೂ ಕೂಡ ದೇಶ ದ್ರೋಹಿಗಳಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ
ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಕಾಂತರಾಜ್ ವರದಿ ಜಾರಿಗೆ ಆಗ್ರಹಿಸಿ ಚಿಂತನ ಮಂಥನ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ ಪ್ರಭುತ್ವ, ರಾಜ ಪ್ರಭುತ್ವದ ನಂತರ ಈಗ ನಮಗೆ ಸಂವಿಧಾನವೇ ಪವಿತ್ರ ಮತ್ತು ಪರಮೋಚ್ಛ ಗ್ರಂಥವಾಗಿದ್ದು, ಅದನ್ನು ಓದಿ ಅದರಲ್ಲಿರುವ ಹಕ್ಕನ್ನು ಪಡೆಯಲು ನಾವು ಕಾರ್ಯಪ್ರವೃತ್ತರಾಗಬೇಕು ಎಂದರು.
ಸ್ವಾತಂತ್ರ್ಯ ಬಂದು ೭೫ ವರ್ಷಗಳಾದರೂ ಅಧಿಕಾರ ಹಿಡಿದವರು ತಮ್ಮದೇ ಸಮಾಜದ ಪರ ಕೆಲಸ ಮಾಡುತ್ತಾ ಬಂದಿದ್ದು, ಪ್ರಜಾಪ್ರಭತ್ವ ಇನ್ನೂ ಬಾಲ್ಯಾವಸ್ಥೆ ಯಲ್ಲಿದೆ. ಎಲ್ಲರಿಗೂ ಸಮಾನ ಹಕ್ಕು ಸಿಗಬೇಕು ಎಂಬುವುದು ಸಂವಿಧಾನದ ಆಶಯವಾಗಿದೆ. ಆದರೂ ಬಹುಪಾಲು ಹಿಂದುಳಿದ ವರ್ಗ ಸೌಲಭ್ಯ ಮತ್ತು ಸವಲತ್ತುಗಳಿಂದ ವಂಚಿತರಾಗುತ್ತಾ ಬಂದಿದೆ ಎಂದರು.
ವೈವಿದ್ಯತೆಯಲ್ಲಿ ಏಕತೆ ಇರುವ ಭಾರತೀಯ ಮಕ್ಕಳು ನಾವು. ನಾವು ಪಂಚಾಂಗ ನೋಡುವುದು ಬೇಡ, ಸಂವಿಧಾನ ಓದಿದರೆ ಸಾಕು. ನಮ್ಮ ಹೋರಾಟ ಯಾವುದೇ ಜಾತಿ, ಧರ್ಮದ ವಿರುದ್ಧ ಅಲ್ಲ. ರಾಜಕೀಯ ದುರುದ್ದೇಶ ಈ ಹೋರಾಟದಲ್ಲಿ ಇಲ್ಲ. ನಮ್ಮ ಹಕ್ಕಿಗಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕಾಗಿದೆ. ರಾಷ್ಟ್ರ ಮಟ್ಟದಲ್ಲಿ ಜನಗಣತಿ, ಜಾತಿಗಣತಿ ಆಗಬೇಕೆಂಬ ತೀರ್ಮಾನವನ್ನು ರಾಹುಲ್ ಗಾಂಧಿ ತೆಗೆದುಕೊಂಡಿದ್ದಾರೆ ಎಂದ ಅವರು, ಕಾಂತರಾಜು ವರದಿ ಜಾರಿಗೆ ಬರಲೇಬೇಕು ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲೇಬೇಕು ಎಂದರು.
ಈಡಿಗ ಸಮಾಜದ ಗೀತಾಂಜಲಿ ಮಾತನಾಡಿ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಮತ್ತು ಸಮಾಜಿಕ, ಆರ್ಥಿಕ ಬಲವಿಲ್ಲದ್ದರಿಂದ ಅವರು ಇನ್ನೂ ಹಿಂದುಳಿದಿದ್ದಾರೆ. ಈ ವರದಿ ಜಾರಿಗೆ ಬರಲಿ ನ್ಯಾಯ ಸಿಗಲಿ ಎಂದರು.
ಸಮಾರಂಭದ ಅಧ್ಯಕ್ಷರಾದ ತಿ.ನ. ಶ್ರೀನಿವಾಸ್ ಮಾತನಾಡಿ, ನಮ್ಮ ಹಕ್ಕಿಗಾಗಿ ಸಂವಿಧಾನಿಕ ನ್ಯಾಯ ಪಡೆಯಲು ಹೋರಾಟ ಮಾಡುವ ಕಾಲ ಬಂದಿದೆ. ೧೬೫ ಕೋಟಿ ಖರ್ಚು ಮಾಡಿ, ೫.೧೫ಲಕ್ಷ ಜನರು ಮಾಹಿತಿ ಸಂಗ್ರಹಿಸಿದ ಈ ಕಾಂತರಾಜು ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಈ ದೇಶದಲ್ಲಿ ಅತ್ಯಂತ ಕೆಳ ವರ್ಗದ ಸಣ್ಣ ಜಾತಿಗಳಿಗೆ ಸಾಮಾಜಿಕ ಶೈಕ್ಷಣಿಕ, ರಾಜಕೀಯ ಸ್ಥಾನಮಾನಗಳು ಬೇಕಾದರೆ, ಸರ್ಕಾರಿ ನೌಕರಿ ಬೇಕಾದರೆ, ಈ ವರದಿ ಜಾರಿಗೆ ಬರಬೇಕು. ಈ ವರದಿಯಲ್ಲಿ ೫೬ ಅಂಶಗಳನ್ನು ಸಂಗ್ರಹ ಮಾಡಿದ್ದಾರೆ ತಕ್ಷಣ ಜಾರಿಗೊಳಿಸಿ ಎಂದರು.
ಕಾರ್ಯಕ್ರಮದ ಸಂಚಾಲಕ ರಾದ ಆರ್. ಮೋಹನ್, ಶ್ರೀನಿವಾಸ್, ಚಂದ್ರಕಾಂತ್,ಸಾಧುಶೆಟ್ಟಿ ಸಮಾಜದ ಅಧ್ಯಕ್ಷರಾದ ಉಮಾಪತಿ ,ಬಲಿಜ ಸಮಾಜದ ಜಿ. ಪದ್ಮನಾಭ ,ಪಿ.ಓ. ಶಿವಕುಮಾರ್, ವಿಶ್ವನಾಥ್ ಕಾಶಿ, ಶಿವಾನಂದ, ಮಂಜಪ್ಪ ಮತ್ತಿತರರು ಇದ್ದರು.

ಜನಜಾಗೃತಿ ಪಕ್ಷ ವಿರೋಧಿ ಚಟುವಟಿಕೆಯಲ್ಲ: ಹರಿಪ್ರಸಾದ್

ಶಿವಮೊಗ್ಗಚಿ.೩೦: ಜಾತಿಗಣತಿ ವಿಷಯವಾಗಿ ಕಾಂಗ್ರೆಸ್ ನಿಲುವು ಸ್ಪಷ್ಟವಾಗಿದೆ. ರಾಜ್ಯದಲ್ಲಿ ನಡೆದಿರುವ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತಾದ ಕಾಂತ್‌ರಾಜ್ ವರದಿಯನ್ನು ಬಹಿರಂಗಪಡಿಸಬೇಕು, ಜಾತಿಗಣತಿ ಜಾರಿಗೆ ತರಬೇಕು ಎಂದು ಎಂಎಲ್ ಸಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ನಾಯಕ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದರು.
ಸೋಮವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ, ದಲಿತ, ಆದಿವಾಸಿ ಸಮುದಾಯಗಳಿಗೆ ಸಂವಿಧಾನದ ಆಶಯದಂತೆ ಸಮಬಾಳು, ಸಮಪಾಲು ಹಂಚಿಕೆ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೆ ನಡೆದಿರುವ ಜಾತಿಗಣತಿಯ ಕಾಂತರಾಜ್ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕಾಗಿದೆ ಎಂದರು.
ಬಲಾಡ್ಯ ಜಾತಿಗಳು ಕಾಂತರಾಜ್ ವರದಿಯನ್ನು ವಿರೋಧಿಸುವುದು ಸಹಜವೇ, ಸರ್ಕಾರದಲ್ಲಿ ದುರ್ಬಲ, ಪ್ರಬಲ ಜಾತಿಗಳ ಶಾಸಕರು, ಸಚಿವರುಗಳು ಇರುವುದರಿಂದ ಸಾಧಕ-ಬಾಧಕಗಳನ್ನು ನೋಡಿಕೊಂಡು ವರದಿಯನ್ನು ಜಾರಿಗೊಳಿಸಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ಮೇಲೆ ಸಾರ್ವಜನಿಕವಾದ ಒತ್ತಡವನ್ನು ಹೇರಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರೇತರ ಸಂಘ, ಸಂಸ್ಥೆಗಳ ಮೂಲಕ ಜನರಲ್ಲಿ ಜಾತಿಗಣತಿ ಮತ್ತು ಅದರ ಆಧಾರಿತ ಮೀಸಲಾತಿ ಬಗ್ಗೆ ಅರಿವು ಮೂಡಿಸಲು ರಾಜ್ಯಾದ್ಯಂತ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.
ಪ್ರವರ್ಗ ೧ ರಲ್ಲಿ ೧೦೧ ಜಾತಿಗಳಿವೆ, ಕೇವಲ ೪-೫ ಜಾತಿಗಳು ರಾಜಕೀಯವಾಗಿ ಪ್ರಬಲವಾಗಿವೆ. ಕೆಲವು ಜಾತಿಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಲ್ಲ. ಹಿಂದುಳಿದ ವರ್ಗದಲ್ಲಿ ೧೯೭ ಸಮಾಜಗಳಿವೆ. ೧೯೦ ಜಾತಿಗಳು ಇನ್ನು ಕೆಟ್ಟ ಸ್ಥಿತಿಯಲ್ಲಿವೆ. ದೇಶದಲ್ಲಿ ಕೆಲವೇ ಪ್ರಬಲ ಜಾತಿಗಳು ಸರ್ಕಾರದ ಯೋಜನೆಗಳು, ಸೌಲತ್ತುಗಳನ್ನು ಕಬಳಿಸುತ್ತಾ ಬಂದಿವೆ. ಮೀಸಲಾತಿ ಎಂಬುದು ಭಿಕ್ಷೆಯೂ ಅಲ್ಲ ಆರ್ಥಿಕ ಕಾರ್ಯಕ್ರಮವೂ ಅಲ್ಲ. ಅದು ಸಂವಿಧಾನದ ಅಡಿಯಲ್ಲಿ ಬರುವ ಸಾಮಾಜಿಕ ನ್ಯಾಯದ ಹಂಚಿಕೆಯಾಗಿದೆ. ಇದನ್ನು ದುರ್ಬಲ ಜಾತಿಗಳಿಗೆ ನೀಡುವುದು ಅಗತ್ಯವಿದೆ. ಇದಕ್ಕಾಗಿ ಜಾತಿಗಣತಿ ಅಗತ್ಯವಿದೆ ಎಂಬುದನ್ನು ಸುಪ್ರೀಂ ಕೋರ್ಟು ನ ತೀರ್ಪುಗಳಲ್ಲಿ ಹೇಳಲಾಗಿದೆ. ಜಾತಿಗಣತಿ ಆಧಾರವಾಗಿಟ್ಟುಕೊಂಡು ಅರ್ಹರಿಗೆ ಮೀಸಲಾತಿ ನೀಡುವುದು ಜಾತಿಗಣತಿಯ ಉದ್ದೇಶವಾಗಿದೆ. ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲಾ ರಾಜ್ಯಗಳಲ್ಲೂ ಜಾತಿಗಣತಿ ನಡೆಸಿ ಮೀಸಲಾತಿ ಹಂಚಿಕೆ ಆಗಬೇಕೆಂಬ ನಿರ್ಣಯ ಕೈಗೊಂಡಿದೆ ಎಂದರು.
ಜಾತಿಗಣತಿ ವಿಷಯವಾಗಿ ನಾನು ರಾಜ್ಯದ್ಯಾಂತ ಜನರಲ್ಲಿ ಜಾಗೃತಿ ಮೂಡಿಸಲು ಸಭೆಗಳನ್ನು ನಡೆಸುತ್ತಿದ್ದೇನೆ. ಇದು ಪಕ್ಷ ವಿರೋಧಿ ಚಟುವಟಿಕೆ ಎಂದು ಯಾರೂ ಭಾವಿಸಬೇಕಾಗಿಲ್ಲ. ನಾನು ಈಗಲೂ ರಾಷ್ಟ್ರರಾಜಕಾರಣದಲ್ಲಿದ್ದೇನೆ. ರಾಜ್ಯದಲ್ಲೂ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ ಪ್ರಚಾರ ಪಡೆಯಲಿಲ್ಲ ಅಷ್ಟೆ ಎಂದರು.

Ad Widget

Related posts

ಶಿಮುಲ್ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಆನಂದ್‌ಗೆ ಸೋಲು

Malenadu Mirror Desk

ನನ್ನ ಸೋಲಿಗೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಕಾರಣ ; ಹರತಾಳು ಹಾಲಪ್ಪ

Malenadu Mirror Desk

ಮಾನವೀಯತೆ ಕಟ್ಟಿಕೊಡುವ ಶಿಕ್ಷಣದ ಅಗತ್ಯವಿದೆ ,ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿಖ್ಯಾತನಂದ ಸ್ವಾಮೀಜಿ ಅಭಿಮತ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.