ಶಿವಮೊಗ್ಗ,ಅ.೩೧:ಈಡಿಗ ಸಮುದಾಯ ಸಂಘಟನೆಗೆ ಶ್ರೀಮಠಗಳ ಪಾತ್ರ ಹಿರಿದಾಗಿದ್ದು, ಎಲ್ಲಾ ಮಠಗಳ ನಡುವೆ ಸಮನ್ವಯ ಮೂಡಬೇಕು. ಸಮಾಜಕ್ಕೆ ಸಿಗಬೇಕಿರುವ ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾಟವಾಗಬೇಕು ಎಂದು ಕರ್ನಾಟಕ ಪ್ರದೇಶ ಆರ್ಯಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ಹೇಳಿದರು.
ತೀರ್ಥಹಳ್ಳಿ ತಾಲೂಕು ನಿಟ್ಟೂರಿನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಹಲವೆಡೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಠಗಳ ಕಾಯಕವೂ ಸಮಾಜಮುಖಿಯಾಗಿವೆ. ಈಡಿಗರ ಸಂಘ ಎಲ್ಲ ಮಠಗಳೊಂದಿಗೆ ಸಮನ್ವಯ ಸಾಧಿಸುತ್ತದೆ. ಸಂಘದ ವಜ್ರಮಹೋತ್ಸವ ಕಾರ್ಯಕ್ರಮ ಡಿ.೧೦ ರಂದು ನಡೆಯಲಿದ್ದು, ಅಂದಿನ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಯಿಂದ ಸಮುದಾಯದ ಜನರು ಬರಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಜನ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈಡಿಗರ ಸಂಘದ ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಿದ ರೇಣುಕಾನಂದ ಸ್ವಾಮೀಜಿ ಅವರು, ಕೊನೇ ಉಸಿರಿರುವ ತನಕ ಸಮಾಜಕ್ಕೆ ದುಡಿಯುತ್ತೇನೆ. ಸರಕಾರ ಹಾಗೂ ಸಮಾಜದ ನೆರವಿನಿಂದ ಮಠದಲ್ಲಿ ದೇವಸ್ಥಾನ ,ಶಾಲೆ, ಸಮುದಾಯಭವನದ ಕೆಲಸಗಳು ನಡೆಯುತ್ತಿದ್ದು, ಮೂರು ತಿಂಗಳಲ್ಲಿ ಮುಗಿಯುವ ಸಾಧ್ಯತೆಯಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಠಕ್ಕೆ ಜಾಗ ಮತ್ತು ನೆರವು ಕೊಟ್ಟವರ ಸೇವೆ ಅನನ್ಯವಾದುದು. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಕುಲಗುರು ನಾರಾಯಣಗುರುಗಳ ತತ್ವಾದರ್ಶದಂತೆ ಕೆಲಸ ಮಾಡುತ್ತೇವೆ. ನಿಟ್ಟೂರು ಮಠವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಸಮಾಜ ಸಂಘಟನೆಗೆ ರಾಜ್ಯ ಸುತ್ತಿದರೂ ಇಲ್ಲಿಯೇ ನೆಲೆಸಿ ಸಮುದಾಯ ಪರ ಕೆಲಸ ಮುಂದುವರಿಸುವೆ ಎಂದು ಹೇಳಿದರು.
ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ಸಮಾಜ ಸಂಘಟನೆಗೆ ಎಲ್ಲರೂ ಕೈಜೋಡಿಸಿಬೇಕು. ಸಮಾಜದಲ್ಲಿ ವಿದ್ಯಾವಂತರು ಹೆಚ್ಚಿದ್ದು, ಜಾಗೃತಿ ಮೂಡಿದೆ .ಯುವಜನರಿಗೆ ಮಾರ್ಗದರ್ಶನ ನೀಡಲು ಧಾರ್ಮಿಕ ಕೇಂದ್ರಗಳು ಮುಂದಾಗಬೇಕು ಎಂದು ಹೇಳೀದರು.
ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಪ್ರಮುಖರಾದ ಬಿದರಹಳ್ಳಿ ಪುರುಷೋತ್ತಮ್, ಕಲಗೋಡು ರತ್ನಾಕರ್, ಬಿ.ಪಿ.ರಾಮಚಂದ್ರ, ಸುರೇಶ್ ಬಾಳೆಗುಂಡಿ ಅವರು ಮಾತನಾಡಿ, ರೇಣುಕಾನಂದ ಸ್ವಾಮೀಜಿ ಕಷ್ಟಪಟ್ಟು ಮಠ ಕಟ್ಟಿದ್ದಾರೆ. ಅವರೊಂದಿಗೆ ಸಮಾಜ ನಿಂತಿದೆ. ಈ ಕ್ಷೇತ್ರವನ್ನು ಮಾದರಿಯಾಗಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕೆಂದು ವಿನಂತಿ ಮಾಡಿದರು.
ವೇದಿಕೆಯಲ್ಲಿ ರಾಜ್ಯ ಸಂಘದ ಪ್ರತಿನಿಧಿಗಳಾದ ರಮೇಶ್, ಶಿವಕುಮಾರ್, ದುಷ್ಯಂತ, ರವಿ, ಮೂಲಗಿರೀಶ್, ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಪ್ರಶಾಂತ್ ಸಾಗರ್, ಎಸ್.ಎನ್.ಜಿವಿ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ, ಸತೀಶ್ ರಿಪ್ಪನ್ ಪೇಟೆ, ಬಿದರಹಳ್ಳೀ ನಾಗೇಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
next post