ಶಿವಮೊಗ್ಗ : ವಿದ್ಯೆ ಎಂಬುದು ಯಾರೂ ಕದಿಯಲಾಗದ ಸಂಪತ್ತು. ಸಮಾಜದಲ್ಲಿ ಸ್ಥಾನಮಾನ ಪಡೆಯಲು ವಿದ್ಯೆ ಸಾಧನವಾಗಬೇಕು. ಅದೊಂದೇ ನಮ್ಮ ರಕ್ಷಣೆಯ ಅಸ್ತ್ರ. ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕು, ಇದು ಪೋಷಕರ ಒತ್ತಾಯ. ಆದರೆ, ಅಂಕಗಳಿಂದ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎನ್ನುವುದು ಸುಳ್ಳು. ಮಕ್ಕಳಿಗೆ ಸಾಧಿಸಲು ಹಲವು ಕ್ಷೇತ್ರಗಳಲ್ಲಿ ಅವಕಾಶವಿದೆ ಸ್ಪರ್ಧೆಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸುಜಾತ ರಾಮಕೃಷ್ಣ ಅಭಿಪ್ರಾಯಪಟ್ಟರು.
ಬ್ರಹ್ಮಶ್ರೀ ನಾರಾಯಣ ಗುರು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಮಹಿಳಾ ಜಿಲ್ಲಾ ಸಂಘ ವತಿಯಿಂದ ಇಲ್ಲಿನ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಕೈಬೆರಳಿನ ತುದಿಯಲ್ಲಿ ಮಾಹಿತಿಯ ಕೋಶವಿದೆ. ಅದನ್ನ ಸಮರ್ಪಕ ಸದ್ಬಳಕೆ ಮಾಡಿಕೊಳ್ಳಬೇಕು. ಇಪ್ಪತ್ತು ವರ್ಷದ ಹಿಂದೆ ಇದಾವುದಕ್ಕೂ ಅವಕಾಶವಿರಲಿಲ್ಲ. ಆದ್ದರಿಂದ ಮಕ್ಕಳು ಅಚಲ ಗುರಿ ಮತ್ತು ಪರಿಶ್ರಮದಿಂದ ಮುಂದಡಿಯಿಡಬೇಕು. ಈಡಿಗ ಸಮುದಾಯದ ಹೆಣ್ಣುಮಕ್ಕಳು ವಿದ್ಯಾವಂತರಿದ್ದಾರೆ. ಅವರಿಗೆ ಅವಕಾಶಗಳನ್ನು ಸಮಾಜದ ಸಂಘಟನೆಗಳು ಮತ್ತು ಪೋಷಕರು ಕಲ್ಪಿಸಿಕೊಡಬೇಕು ಎಂದರಲ್ಲದೆ, ಕುಟುಂಬದ ಹಿರಿಯರ ಹೆಸರಲ್ಲಿ ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಿಸುವುದಾಗಿ ಹೇಳಿದರು.
ಬಂಜೆತನ ನಿವಾರಣೆ ಹಾಗೂ ಪ್ರಸೂತಿ ತಜ್ಞೆ ಡಾ.ಕಾವ್ಯ ಪ್ರದೀಪ್ ಅವರು, ಹೆಣ್ಣುಮಕ್ಕಳಿಗಿರುವ ಸಮಸ್ಯೆ ಕುರಿತು ಆರೋಗ್ಯ ಅರಿವು ಕಾರ್ಯಕ್ರಮ ನಡೆಸಿಕೊಟ್ಟರು. ಸಾಗರ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು.
ಈಡಿಗ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿ, ನಗರದಲ್ಲಿ ಸಮಾಜದ ಹೆಣ್ಣು ಮಕ್ಕಳ ವಸತಿ ನಿಲಯದ ಕೊರತೆ ಇದೆ. ಇದರಿಂದ ಅನೇಕ ಹೆಣ್ಣು ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಮಹಿಳಾ ಜಿಲ್ಲಾ ಸಂಘದ ನೇತೃತ್ವದಲ್ಲಿ 300 ಜನ ಹೆಣ್ಣುಮಕ್ಕಳು ಆಶ್ರಯ ಪಡೆಯುವಂತಹ ವಸತಿ ನಿಲಯ ನಿರ್ಮಾಣಕ್ಕೆ ಒತ್ತು ನೀಡಬೇಕು. ಗಂಡುಮಕ್ಕಳಿಗೆ ಈಗಾಗಲೇ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಉದ್ಯಮಿ ಸುರೇಶ್ ಬಾಳೇಗುಂಡಿ ಮಾತನಾಡಿ, ಸಮಾಜದ ಯುವಪೀಳಿಗೆ ವಿದ್ಯಾವಂತರಾಗಬೇಕು ಮತ್ತು ಸಂಘಟಿತರಾಗಬೇಕು. ಇದು ನಾರಾಯಣ ಗುರುಗಳ ಆಶಯ. ಸಮಾಜದ ಮಕ್ಕಳು ಹೆಚ್ಚು ಅಂಕ ಪಡೆಯುವ ಮೂಲಕ ಚಿಕ್ಕ ವಯಸ್ಸಿಗೆ ಸಾಧನೆ ಮಾಡಿದ್ದಾರೆ. ಈ ಸಾಧನೆ ಇಲ್ಲಿಗೇ ನಿಲ್ಲಬಾರದು. ಬದುಕಿನಲ್ಲಿ ಗುರಿ ದೊಡ್ಡದಿರಲಿ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ ಅವರು, ಮಕ್ಕಳನ್ನು ವಿದ್ಯಾವಂತ ಹಾಗೂ ಬುದ್ದಿವಂತರನ್ನಾಗಿ ಮಾಡುತ್ತಿದ್ದೇವೆ. ಆದರೆ, ಮಾನವೀಯ ಮೌಲ್ಯ ಕಲಿಸುವಲ್ಲಿ ಹಿಂದೆ ಉಳಿದ್ದೇವೆ. ಹಿಂದುಳಿದ ವರ್ಗ ಮುನ್ನಲೆಗೆ ಬರಲು ನಾರಾಯಣ ಗುರುಗಳು ಶ್ರಮಿಸಿದ್ದರು. ಅದೇ ಮಾರ್ಗದಲ್ಲಿ ಸಂಘಟನೆ ಸಾಗುತ್ತಿದೆ. ಸಮಾಜದ ಅನೇಕ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿನ ಸ್ನಾತಕ, ಪದವಿಯಲ್ಲಿ ರ್‍ಯಾಂಕ್ ವಿಜೇತ ಮತ್ತು ಪಿಯುಸಿ ಹಾಗೂ ಎಸ್‌ಎಸ್ ಎಲ್ ಸಿಯಲ್ಲಿ ಅತೀ ಹೆಚ್ಚು ಅಂಕಪಡೆದ ಸಮಾಜದ 80 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಭದ್ರಾವತಿ ವಾಸು ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.
ಪತ್ರಕರ್ತ ನಾಗರಾಜ್ ನೇರಿಗೆ, ರಾಜಪ್ಪ ತೇಕಲೆ, ಪ್ರವೀಣ್ ಹಿರೇಇಡಗೋಡು, ಭುಜಂಗ ಪೂಜಾರಿ, ಪ್ರಭಾವತಿ ಚಂದ್ರಕಾಂತ್, ಎಚ್.ನಾಗರಾಜ್, ಸಾವಿತ್ರಮ್ಮ ಶಿವಪ್ಪ, ಗಾಯತ್ರಿಶಂಕರ್, ರೀತಾ ಪೂಜಾರಿ,ಲಲಿತಾ ಹೊನ್ನಪ್ಪ ಮತ್ತಿತರರು ವೇದಿಕೆಯಲ್ಲಿದ್ದರು. ಪುಷ್ಪಾ ಮೂರ್ತಿ ಸ್ವಾಗತಿಸಿದರು. ವೀಣಾ ವೆಂಕಟೇಶ್ ಅತಿಥಿ ಪರಿಚಯ ಮಾಡಿದರು.ಸರೋಜಾ ಪಾಂಡುರಂಗ, ಪ್ರೇಮಾ ಚಂದ್ರಶೇಖರ್, ರೇಷ್ಮಾ ಮಡೆನೂರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು.