ಶಿವಮೊಗ್ಗ : ತುಂಗಾಭದ್ರಾ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರೈತರ ಪರ ನಿಲ್ಲುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ.ಅವರ ನಿರ್ಧಾರನ್ನು ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುಂಗಾಭದ್ರಾ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಬೇಕು ಎಂಬ ಕೂಗು ಹಬ್ಬಿಸಿ ಕಳೆದ ೨-೩ ತಿಂಗಳಿನಿಂದ ಸಕ್ಕರೆ ಕಾರ್ಖಾನೆ ಜಮೀನನ್ನು ಉಳುಮೆ ಮಾಡುತ್ತಿರುವ ರೈತರಲ್ಲಿ ಆತಂಕ ಹುಟ್ಟಿಸುವ ಹುನ್ನಾರ ಕೆಲವು ಹಿತಾಸಕ್ತಿಗಳಿಂದ ನಡೆಯುತ್ತಿದ್ದು, ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಸಂಸದರ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ.ಸಂಸದ ರಾಘವೇಂದ್ರ ಅವರು ರೈತರ ಪರವಾಗಿ ನಿಂತಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ಥರ ವಿಚಾರವಾಗಿ ಜಿಲ್ಲೆಯ ಬಿಜೆಪಿ ಶಾಸಕರು ಸಂಸದರು ಮತ್ತು ಯಡಿಯೂರಪ್ಪನವರು ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ, ಶರಾವತಿ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಯಾಕೆ ಬಗೆಹರಿಸಲಿಲ್ಲ ಎಂದು ಪ್ರಶ್ನಿಸಿದರು..
ಜನವರಿ ೧೨ಕ್ಕೆ ಸಕ್ಕರೆ ಕಾರ್ಖಾನೆ ಜಮೀನು ಉಳುಮೆ ಮಾಡುವವರಿಗೆ ಖಾಲಿ ಮಾಡಿ ಎಂಬ ಹೈಕೋರ್ಟ್ ಆದೇಶದ ದಿನಾಂಕ ಮುಗಿಯುತ್ತದೆ. ರೈತರಿಗೆ ಒಂದು ನೋಟೀಸ್ ಬಂದಿಲ್ಲ. ಕೋರ್ಟಿನಿಂದ ತಡೆ ತರುತ್ತಾರೆ ಎಂಬ ಜಾಣ್ಮೆ ಪ್ರದರ್ಶಿಸಿ ಏಕಾಏಕಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ರೈತರ ಆರ್ಥನಾದ ಯಾರಿಗೂ ಕೇಳಿಸಿಲ್ಲ. ಸಂಸದರು, ದೆಹಲಿ ಪ್ರವಾಸ ಮೊಟಕುಗೊಳಿಸಿ ರೈತರ ಪರವಾಗಿ ನಿಂತಿದ್ದಾರೆ. ಸರ್ಕಾರ ರೈತರ ಪರವಾಗಿ ನಿಂತು ಭದ್ರತೆ ಒದಗಿಸುವ ಕೆಲಸ ಮಾಡಬೇಕು ಎಂದರು. ಸಚಿವರ ಮಾತಿನ ವರಸೆಗೆ ಬಿಜೆಪಿ ಆಕ್ಷೇಪಣೆ ಇದೆ. ಅವರದೇ ಪಕ್ಷದ ಮುಖಂಡರಾದ ಯೋಗೀಶ್ ಮತ್ತು ಇತರರು ರೈತರ ಪರವಾಗಿ ಹೋರಾಟ ಮಾಡಿದಾಗ ಸಚಿವರ ಗಮನಕ್ಕೆ ಬಂದಿಲ್ಲವೇ ಎಂದರು.
ರಾಜ್ಯದಲ್ಲಿರುವ ಹಾಲು ಒಕ್ಕೂಟಗಳ ಸ್ಥಿತಿ ಸಂಕಷ್ಟದಲ್ಲಿದೆ. ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಜೂನ್ ತಿಂಗಳಿನಿಂದಲೇ ನಿಲ್ಲಿಸಲಾಗಿದೆ. ರೈತರಿಗೆ ನೀಡುತ್ತೇವೆ ಎಂದು ಗ್ರಾಹಕರಿಂದ ಹೆಚ್ಚುವರಿ ವಸೂಲಿ ಮಾಡಿದ ೩ ರೂ.ಗಳನ್ನು ಕೂಡ ರೈತರಿಗೆ ನೀಡುತ್ತಿಲ್ಲ. ಒಂದೆಡೆ ಬರಗಾಲ, ಇನ್ನೊಂದೆಡೆ ಹಾಲಿನ ಖರೀದಿ ದರ ಕಡಿಮೆ ಮಾಡಿದ್ದಾರೆ. ಪ್ರೋತ್ಸಾಹ ಧನ ನಿಲ್ಲಿಸಿದ್ದಾರೆ. ಹಾಲು ಒಕ್ಕೂಟಗಳು ನಷ್ಟದಲ್ಲಿವೆ. ನ್ಯಾಯ ಕೇಳಲು ಹೋದರೆ, ಮುಖ್ಯಮಂತ್ರಿಗಳು ಸೂಪರ್ ಸೀಡ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಶಿಮೂಲ್‌ಗೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ರೈತರು ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಹಾಲಿನ ಖರೀದಿದರ ಕಡಿತ ಮಾಡಿದ್ದಲ್ಲಿ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಶಾಸಕ ಎಸ್.ರುದ್ರೇಗೌಡ, ಪ್ರಮುಖರಾದ ಶಿವರಾಜ್, ಜಗದೀಶ್, ಬಿ.ಕೆ. ಶ್ರೀನಾಥ್, ಮಂಡಿನಕೊಪ್ಪ ಗಂಗಾಧರ್, ದಿನೇಶ್, ಋಷಿಕೇಶ್ ಪೈ, ಮಾಲತೇಶ್, ರತ್ನಾಕರ್ ಶೆಣೈ, ಅಣ್ಣಪ್ಪ ಮೊದಲಾದವರು ಇದ್ದರು.