ಶಿವಮೊಗ್ಗ: ಸಾಕು ನಾಯಿ ಒಂದರ ಮೇಲೆ ಗುಂಡು ಹಾರಿಸಿದ ವ್ಯಕ್ತಿಯೊಬ್ಬನ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ನಾಯಿಗೆ ಗುಂಡು ಹಾರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಿವಮೊಗ್ಗದ ಅಮೀರ್ ಅಹಮದ್ ಕಾಲೋನಿಯಲ್ಲಿ ಚಂದ್ರಿಕಾ ಎಂಬುವವರು ಕಳೆದ ೮ ವರ್ಷದಿಂದ ಹೆಣ್ಣು ನಾಯಿ ಸಾಕಿದ್ದಾರೆ. ಈಚೆಗೆ ಈ ನಾಯಿ ಅದೇ ಬೀದಿಯಲ್ಲಿರುವ ವ್ಯಕ್ತಿಯೊಬ್ಬರ ಮನೆಯ ಸಾಕು ನಾಯಿಗೆ ಕಚ್ಚಿತ್ತು. ಇದರಿಂದ ಆಕ್ರೋಶಗೊಂಡ ಆತ, ಚಂದ್ರಿಕಾ ಅವರ ಮನೆ ನಾಯಿಗೆ ಕಲ್ಲು ಮತ್ತು ದೊಣ್ಣೆಯಿಂದ ಹೊಡೆಯುತ್ತಿದ್ದರು. ಹತ್ಯೆ ಮಾಡುವುದಾಗಿ ಹೇಳುತ್ತಿದ್ದರು ಎಂದು ಆರೋಪಿಸಲಾಗಿದೆ.
ಡಿ.೨೪ರಂದು ಮಧ್ಯಾಹ್ನ ಗುಂಡಿನ ಶಬ್ದ ಕೇಳಿಸಿತ್ತು. ಚಂದ್ರಿಕಾ ಅವರು ಮನೆಯಿಂದ ಹೊರ ಬಂದಾಗ ಆ ವ್ಯಕ್ತಿ ಏರ್ ಗನ್ ಹಿಡಿದು ಮನೆ ಕಡೆಗೆ ತೆರಳುತ್ತಿದ್ದ. ಅಲ್ಲದೆ ಚಂದ್ರಿಕಾ ಅವರ ಸಾಕು ನಾಯಿ ಸೊಂಟದ ಭಾಗದಲ್ಲಿ ಗಾಯವಾಗಿದ್ದು ಕಾಣಿಸಿತು. ಹಾಗಾಗಿ ಮನೆಯಲ್ಲಿ ಚಿಕಿತ್ಸೆ ನೀಡಲಾಯಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಾರಿನ ಕೆಳಗೆ ಮಲಗಿದ್ದ ನಾಯಿ ಮೇಲೆ ಆ ವ್ಯಕ್ತಿ ಗುಂಡು ಹಾರಿಸಿರುವ ದೃಶ್ಯ ಸೆರೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ಮುಸ್ತಫಾ ಖಾನ್ ಎಂಬಾತನ ವಿರುದ್ಧ ಚಂದ್ರಿಕಾ ಅವರು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ ೧೧ರ ಅಡಿ ಪ್ರಕರಣ ದಾಖಲಾಗಿದೆ.