ಶಿವಮೊಗ್ಗ: ಮಾಧ್ಯಮಗಳು ಯಾವುದೇ ಒಂದು ಸಿದ್ಧಾಂತಕ್ಕೆ ಕಟ್ಟು ಬೀಳದೆ ಸಮಷ್ಟಿ ಚಿಂತನೆಯನ್ನು ಅಳವಡಿಸಿಕೊಂಡಲ್ಲಿ ಹೆಚ್ಚು ಕಾಲ ಬಾಳುತ್ತವೆ. ಓದುಗರ ಪರವಾದ ಜನಮುಖಿ ಚಿಂತನೆ ಇಂದಿನ ದಿನಮಾನಗಳಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಬಸವಕೇಂದ್ರದ ಡಾ.ಬಸವ ಮರುಳ ಸಿದ್ದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಶುಕ್ರವಾರ ನಡೆದ ಮಲೆನಾಡು ಮಿತ್ರ ಪತ್ರಿಕೆಯ ಮರುಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಒಂದು ಪತ್ರಿಕೆ ಓದುಗರನ್ನು ಗೆಲ್ಲಬೇಕೆಂದರೆ ಅದು ಸಮತೂಕದ ಹಾಗೂ ಸಮತೋಲನ ನಿಲುವನ್ನು ಹೊಂದಿರಬೇಕು. ಎಡಪಂಥ, ಬಲಪಂಥ ಎಂಬ ಗೊಡವೆಗೆ ಹೋಗಬಾರದು. ಈ ರೀತಿಯ ಧೋರಣೆ ಹೊಂದಿದಲ್ಲಿ ಅದು ಸರ್ವಜನರನ್ನು ಪ್ರತಿನಿಧಿಸಲಾರದು. ಮಲೆನಾಡು ಮಿತ್ರ ಪತ್ರಿಕೆ ಈದಿಸೆಯಲ್ಲಿ ಸಾಗಬೇಕು. ಮುದ್ರಣ ಮಾಧ್ಯಮ ಸವಾಲುಗಳನ್ನು ಎದುರಿಸಿ ಮುಂದೆ ಸಾಗುತ್ತಿದೆ ಹಿರಿಯ ಅನುಭವಿ ಪತ್ರಕರ್ತನ ಸಂಪಾದಕತ್ವದಲ್ಲಿ ಜನರ ವಿಶ್ವಾಸ ಗಳಿಸಲಿ ಎಂದು ಹೇಳಿದರು.
ನಿಟ್ಟೂರು ಶ್ರೀ ನಾರಾಯಣಗುರು ಸಂಸ್ಥಾನ ಮಠದ ಶ್ರೀರೇಣುಕಾನಂದ ಸ್ವಾಮೀಜಿ ಮಾತನಾಡಿ, ಪತ್ರಿಕೆಗಳು ಸಮಾಜದಲ್ಲಿ ಪರಿವರ್ತನೆ ತರುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತವೆ. ಆದರೆ ಪತ್ರಿಕೆ ನಡೆಸುವುದು ಸದ್ಯ ಕಷ್ಟ. ಅನುಭವ ಮತ್ತು ಜನರ ಧ್ವನಿಯಾದರೆ ಪತ್ರಿಕೆಗಳು ಯಶಸ್ವಿಯಾಗಲಿವೆ. ಮಲೆನಾಡು ಮಿತ್ರ ಪತ್ರಿಕೆ ಜನರ ಧ್ವನಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಪತ್ರಿಕೆಯ ಲೋಗೊ ಬಿಡುಗಡೆ ಮಾಡಿದ ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ.ಎಸ್. ರಾಮಪ್ಪ ಮಾತನಾಡಿ, ಒಳ್ಳೆತನ, ಸೇಡು ಇಲ್ಲದೆ ಕಾರ್ಯ ನಿರ್ವಹಿಸಿದರೆ ಸಾಧನೆ ಸಾಧ್ಯ. ಪತ್ರಿಕೆ ಓದುವ ಅಭಿರುಚಿ ಬೆಳೆಸುತ್ತದೆ. ಸನ್ಮಾರ್ಗದಿಂದ ಸಾಧನೆ ಸಾಧ್ಯ ಎಂದರು. ಪತ್ರಿಕೆಗಳನ್ನು ನಾವು ಓದಿ ಬೆಂಬಲಿಸಬೇಕು. ಪತ್ರಿಕೆಗಳು ಸಮಾಜಕ್ಕೆ ದೊಡ್ಡ ಶಕ್ತಿಯಾಗಿವೆ. ಮಲೆನಾಡು ಮಿತ್ರ ಪತ್ರಿಕೆ ಈ ದಿಸೆಯಲ್ಲಿ ಮುಂದೆ ಸಾಗಬೇಕು. ಪಕ್ಷಾತೀತವಾಗಿದ್ದರೆ ಮಾತ್ರ ಎಲ್ಲರನ್ನೂ ತಲುಪಬಹುದು ಎಂದು ಹೇಳಿದರು.
ಶಿವಮೊಗ್ಗ ಶಾಸಕ ಎಸ್.ಎನ್.ಚೆನ್ನಬಸಪ್ಪ, ಡಿಎಸ್ ಎಸ್ ಸಂಚಾಲಕ ಎಂ.ಗುರುಮೂರ್ತಿ, ವಕೀಲರಾದ ಎನ್.ಪಿ.ಧರ್ಮರಾಜ್, ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಾರುತಿ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ ಶಿವಕುಮಾರ್, ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಪ್ರೊ. ಎ.ಎಸ್.ಚಂದ್ರಶೇಖರ್,ಮಾಜಿ ಸಂಸದ ಆಯನೂರು ಮಂಜುನಾಥ್, ನಾಗರಾಜ ನೇರಿಗೆ, ಕಾಂಗ್ರೆಸ್ ನಾಯಕ ಕಲಗೋಡು ರತ್ನಾಕರ್, ಎಸ್‌ಪಿ ದಿನೇಶ್, ಡಾ.ಶ್ರೀನಿವಾಸ್ ಕರಿಯಣ್ಣ, ಜಿ.ಡಿ.ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಪತ್ರಿಕೆಗಳು ಸತ್ಯದ ಕನ್ನಡಿ:
ಮಲೆನಾಡು ಮಿತ್ರ ಪತ್ರಿಕೆ ಮರು ಲೋಕಾರ್ಪಣೆಗೊಳಿಸಿ ಮಾತನಾಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಮಾತನಾಡಿ, ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪ್ರಭಾವಿಯಾಗಿರುವುದು ಮಾಧ್ಯಮ ಕ್ಷೇತ್ರ. ಈ ಕ್ಷೇತ್ರದಲ್ಲಿಯೂ ಇಂದು ಹುಳುಕುಗಳಿವೆ. ಸತ್ಯ ಮತ್ತು ಶ್ರದ್ಧೆಯಿಂದ ಮಾಡುವ ಕಾಯಕಕ್ಕೆ ಬೆಲೆ ಇದೆ. ಆತುರಕ್ಕೆ ಬಿದ್ದು ಟಿಆರ್‌ಪಿಗಾಗಿ ಸುಳ್ಳು ಮತ್ತು ವೈಭವೀಕರಣದ ಸುದ್ದಿಗಳನ್ನು ನೀಡಬಾರದು. ಮಲೆನಾಡು ಮಿತ್ರ ಪತ್ರಿಕೆಗೆ ಯಶಸ್ಸು ಸಿಗಬೇಕು. ವಸ್ತುನಿಷ್ಠ ಸುದ್ದಿ ನೀಡುವ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ನ್ಯಾಯನಿಷ್ಠವಾಗಿ ಕೆಲಸ ಮಾಡಲಿ. ಪತ್ರಿಕೋದ್ಯಮದ ಪಾವಿತ್ರ್ಯತೆಯನ್ನು ಕಾಪಾಡಲಿ ಎಂದು ಹೇಳಿದರು.
ಮುದ್ರಣ ಮಾಧ್ಯಮ ಶಕ್ತಿಯುತ:
“ನಮ್ಮ ಮಲೆನಾಡು ನಮ್ಮ ಹೆಮ್ಮೆ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ನೇರ ನಿಷ್ಠುರ ವರದಿಗಾರಿಕೆಗೆ ಹೆಸರಾದ ನಾಗರಾಜ್ ನೇರಿಗೆ ಅವರು ಈಗ ಸಂಪಾದಕರಾಗಿ ಪತ್ರಿಕೆ ಮುನ್ನಡೆಸುತ್ತಿರುವುದು ಸಂತೋಷವಾಗಿದೆ. ಮಲೆನಾಡು ಮಿತ್ರ ಮೂರು ದಶಕಗಳ ಇತಿಹಾಸ ಇರುವ ಪತ್ರಿಕೆ ನೂತನ ವಿನ್ಯಾಸದಲ್ಲಿ ಮತ್ತಷ್ಟು ಜನಪ್ರಿಯವಾಗಲಿ. ಸಾಮಾಜಿಕ ಮಾಧ್ಯಮಗಳ ಭರಾಟೆಯಲ್ಲಿಯೂ ಮುದ್ರಣ ಮಾಧ್ಯಮ ಇಂದಿಗೂ ತನ್ನ ವಿಶ್ವಾಸಾರ್ಹತೆ ಕಾಪಾಡಿಕೊಂಡಿದೆ ಎಂದು ಹೇಳಿದರು.
ಪತ್ರಿಕೆ ಯಶಸ್ವಿಯಾಗಲಿ…
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಮಾತನಾಡಿ, ಸಮಾಜದಲ್ಲಿ ಆನೇಕ ಪತ್ರಿಕೆಗಳು ಬರುತ್ತವೆ, ಹೋಗುತ್ತವೆ. ಆದರೆ ಇಂದು ಹಿರಿಯರ ಆಶೀರ್ವಾದ ಪಡೆದ ಮಲೆನಾಡು ಮಿತ್ರ ಪತ್ರಿಕೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.
ಪತ್ರಿಕಾ ರಂಗ ಪ್ರಜಾಪ್ರಭುತ್ವದ ಕೀರಿಟವಿದ್ದಂತೆ. ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕೆಗಳು ನಿರ್ವಹಿಸಿದ ಪಾತ್ರ ಬಹುದೊಡ್ಡದು. ಮಾಧ್ಯಮಗಳಿರುವ ಶಕ್ತಿ ದೊಡ್ಡದು ಎಂದು ಹೇಳಿದರು.