ಶಿವಮೊಗ್ಗ,ಜ.13: ಕಾರವಾರ ಕಥೊಲಿಕ್ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾಗಿ(ಬಿಷಪ್) ಶಿವಮೊಗ್ಗ ಕಥೋಲಿಕ್ ಧರ್ಮಕ್ಷೇತ್ರದ ಧರ್ಮ ಗುರುಗಳಾಗಿದ್ದ ಅತಿವಂದನೀಯ ಡುಮಿಂಗ್ ಡಾಯಸ್ ಅವರನ್ನು ಪೋಪ್ ಪ್ರಾನ್ಸಿಸ್ ಅವರು ನೇಮಕ ಮಾಡಿದ್ದಾರೆ. ಜ.13 ರಂದು ಪೋಪ್, ಶಿವಮೊಗ್ಗ ಮತ್ತು ಕಾರವಾರ ಧರ್ಮಕ್ಷೇತ್ರದಲ್ಲಿ ಏಕಕಾಲಕ್ಕೆ ಈ ಘೋಷಣೆ ಮಾಡಲಾಯಿತು. ಜೋಗ ಮೂಲದವರಾದ ಡುಮಿಂಗ್ ಡಾಯಸ್ ಅವರು, 1969ರಲ್ಲಿ ಸೆ.3 ರಂದು ದಿ.ಅಂಬ್ರೋಸ್ ಡಾಯಸ್ ಮತ್ತು ಮರ್ಸಿಲಿನ್ ಡಾಯಸ್ ಅವರ ಮಗನಾಗಿ ಜನಿಸಿದರು. ಮಂಗಳೂರು, ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಅವರು 1997 ರಲ್ಲಿ ಶಿವಮೊಗ್ಗ ಕಥೋಲಿಕ್ ಧರ್ಮಕ್ಷೇತ್ರದಲ್ಲಿ ಗುರುಗಳಾಗಿ ಅಭಿಷೇಕಿಸಲ್ಪಟ್ಟರು. 26 ವರ್ಷಗಳಿಂದ ಶಿವಮೊಗ್ಗ ಧರ್ಮ ಕ್ಷೇತ್ರದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಿಭಾಗದಲ್ಲಿ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶಿವಮೊಗ್ಗ ಧರ್ಮ ಕ್ಷೇತ್ರದ ಪಾಲನಾ ಕೇಂದ್ರ ಸನ್ನಿಧಿ ಯಲ್ಲಿ ನಿರ್ದೇಶಕರಾಗಿದ್ದರು. ಡುಮಿಸ್ ಡಾಯಸ್ ಅವರಿಗೆ ಶಿವಮೊಗ್ಗಕಥೋಲಿಕ್ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಪ್ರಾನ್ಸಿಸ್ ಸೆರಾವೊ ಎಸ್.ಜೆ.ಹಾಗೂ ಕ್ರೈಸ್ತ ಭಕ್ತ ಜನತೆ ಅಭಿನಂದನೆಗಳನ್ನು ಸಲ್ಲಸಿದ್ದಾರೆ.