ಮಲೆನಾಡಿನ ವನದೇವತೆಯಾದ ಸಿಗಂದೂರು ಚೌಡಮ್ಮ ದೇವಿ ನಾಡಿನ ಜನರನ್ನು ಪೊರೆಯುವ ಆರಾದ್ಯ ದೇವಿಯಾಗಿದ್ದಾಳೆ. ಧರ್ಮ ರಕ್ಷಣೆಯೊಂದಿಗೆ ನಾಡಿನ ಶ್ರೇಯಸ್ಸಿಗೆ ದೇವಿಯ ಆಶೀರ್ವಾದ ಇರುತ್ತದೆ ಎಂದು ಕೇರಳದ ಶಿವಗಿರಿಯ ನಾರಾಯಣ ಗುರು ಪೀಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಸೀಗೆಕಣಿವೆಯಲ್ಲಿ ಭಾನುವಾರ ಸಿಗಂದೂರು ಜಾತ್ರೆಗೆ ಧರ್ಮಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದ ಅವರು, ಹಿಂದುಳಿದ ವರ್ಗಗಳಿಗೆ ಸ್ವಾಭಿಮಾನ ನೀಡಿದ್ದ ಸಂತ ನಾರಾಯಣಗುರುಗಳು ಜಗತ್ತಿಗೆ ಮಾದರಿಯಾದರು. ಬುದ್ದ ಬಸವ,ಗಾಂಧಿ ಮತ್ತು ನಾರಾಯಣಗುರುಗಳ ತತ್ವಗಳು ಇಂದಿಗೂ ಮನುಕುಲಕ್ಕೆ ದಾರಿದೀಪವಾಗಿವೆ. ಪೃಕೃತಿಯ ಮಡಿಲಲ್ಲಿ ಉದ್ಭವಿಸಿ ನಾಡಿನ ಆರಾದ್ಯ ದೇವಿಯಾದ ಚೌಡೇಶ್ವರಿ ಜಾತ್ರೆಯಲ್ಲಿ ಇಷ್ಟೊಂದು ಜನಸ್ತೋಮ ಸೇರಿರುವುದು ನಮಗೆ ಸಂತೋಷ ತಂದಿದೆ. ಅನುವಂಶಿಕ ಧರ್ಮದರ್ಶಿ ರಾಮಪ್ಪನವರ ಧರ್ಮಕಾರ್ಯಗಳು ಹೀಗೇ ಮುಂದುವರಿಯಲಿ ಅವರಿಗೆ ನಾಡಿನ ಸದ್ಭಕ್ತರ ಬೆಂಬಲ ಇದೆ ಎಂದು ಹೇಳಿದರು.
ಕೇರಳ ವರ್ಕಲ್ ಮಠದ ಸತ್ಯಾನಂದ ಸ್ವಾಮೀಜಿ ಮಾತನಾಡಿ, ಉತ್ತರಾಯಣ ಪುಣ್ಯಕಾಲದಲ್ಲಿ ದೇವಿಯ ಜಾತ್ರೆ ನಡೆಯುತ್ತಿದ್ದು, ಎಲ್ಲರಿಗೂ ಸನ್ಮಂಗಳ ಉಂಟುಮಾಡಲಿ ಎಂದು ಹೇಳಿದರು.
ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿ, ಸಮಾಜದ ಆಡಳಿತ ಮಂಡಳಿಯಿರುವ ಈ ದೇವಾಲಯದ ಅಭಿವೃದ್ಧಿ ಮತ್ತು ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾತನಾಡಿ, ಶ್ರೀಕ್ಷೇತ್ರದ ಮಹಿಮೆ ಅಪಾರವಾಗಿದೆ. ಸಿಗಂದೂರು ಆಡಳಿತದಲ್ಲಿ ನಮ್ಮ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸಿಗಂದೂರು ಸರ್ವ ಧರ್ಮದ, ಸರ್ವಜಾತಿಯ ಭಕ್ತರ ಕೇಂದ್ರವಾಗಿದ್ದು, ಈ ಕ್ಷೇತ್ರ ದೇಶದ ಭಕ್ತಿಭಾವದ ಕೇಂದ್ರವಾಗಿದೆ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಮಳಲಿಮಠದ ಡಾ.ನಾಗಭೂಷಣ್ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವಿನಲ್ಲಿ ಶ್ರದ್ಧೆ ದೇವರಲ್ಲಿ ಭಕ್ತಿ ಇದ್ದರೆ ಸಾಧನೆ ಮಾಡಬಹುದು. ರಾಮಪ್ಪನವರ ಶ್ರಮ, ತಾಳ್ಮೆ ಸಿಗಂದೂರು ಕ್ಷೇತ್ರ ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣವಾಗಿದೆ ಎಂದು ಹೇಳಿದರು.
ಧರ್ಮದರ್ಶಿ ಡಾ.ಎಸ್.ರಾಮಪ್ಪನವರು ಮಾತನಾಡಿ, ಭಕ್ತರ ಪ್ರೀತಿ, ಸರಕಾರದ ಸಹಕಾರ ಹಾಗೂ ಧರ್ಮದ ರಕ್ಷಣೆಯಿಂದಾಗಿ ಎಲ್ಲವೂ ಮುಂದುವರಿಯುತ್ತದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಸೂರಜ್ ನಾಯ್ಕ್, ಸೈದಪ್ಪ ಗುತ್ತೇದಾರ್, ತುಮರಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ದೇವಾಲಯದ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ರವಿಕುಮಾರ್ ಸೇರಿದಂತೆ ಹಲವ ಗಣ್ಯರು ಹಾಜರಿದ್ದರು.
ವಿವಿಧ ಜಾನಪದ ಕಲಾ ತಂಡಗಳ ಆಕರ್ಷಕ ನೃತ್ಯದಿಂದ ಜಾತ್ರೆಗೆ ಸಾಂಸ್ಕೃತಿಕ ಮೆರಗು ಬಂದಿತ್ತು. ದೇವಿಯ ಮೂಲ ಸ್ಥಾನದಿಂದ ಜ್ಯೋತಿಯನ್ನು ಮೆರವಣಿಗೆ ಮೂಲಕ ಸಿಗಂದೂರು ದೇವಾಲಯಕ್ಕೆ ಕರೆತರಲಾಯಿತು. ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಸಂಜೆ ದೇಗುಲದಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.
ರಾಮಪ್ಪಾಜಿಯವರ ಶ್ರಮದಿಂದ ಸಿಗಂದೂರು ಚೌಡೇಶ್ವರಿ ದೇವಾಲಯ ಇಂದು ರಾಜ್ಯದಲ್ಲಿ ಪ್ರಸಿದ್ದಿಯಾಗಿದೆ. ತಾಯಿಯ ಆಶೀರ್ವಾದ ಪಡೆಯಲು ಬರುವ ಭಕ್ತರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗಿದೆ. ಸರಕಾರ ಮುಂದಿನ ದಿನಗಳಲ್ಲಿ ದೇವಾಲಯಕ್ಕೆ ಬೇಕಿರುವ ಅಗತ್ಯ ಸೌಲಭ್ಯ ಕೊಡಲಿದೆ. ಈ ಜಾತ್ರೆ ಸಂದರ್ಭ ನಾಡಿನ ಸಮಸ್ತ ಜನತೆಗೆ ಶುಭವಾಗಲಿ ಎಂದು ಹಾರೈಸುವೆ.
ಮಧುಬಂಗಾರಪ್ಪ, ಶಿಕ್ಷಣ ಸಚಿವ