ಶಿವಮೊಗ್ಗ,ಜ.೨೬: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದ್ದಾರೆ. ಅಚ್ಚರಿಯಾದರೂ ಇದು ನಿಜ. ಶಿವಮೊಗ್ಗದಲ್ಲಿ ಬೆಕ್ಕಿನ ಕಲ್ಮಠ ಕೊಡಮಾಡುವ ಗುರು ಬಸವಶ್ರೀ ಪ್ರಶಸ್ತಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು,
ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರರನ್ನು ಗೆಲ್ಲಿಸಲು ಕರೆ ನೀಡಿದರು. ಅಭಿವೃದ್ಧಿ ಕೆಲಸಗಳು ಶಿವಮೊಗ್ಗ ಜಿಲ್ಲೆಯಲ್ಲಿ ಆಗಿರುವುದನ್ನು ಗಮನಿಸಿ ಉತ್ತಮ ಸಂಸದರನ್ನು ಆಯ್ಕೆ ಮಾಡಿದ್ದೀರಿ, ಮುಂದೆಯೂ ಇವರನ್ನು ಆಯ್ಕೆ ಮಾಡಬೇಕಿರುವುದು ಸಾರ್ವಜನಿಕರ ಕರ್ತವ್ಯ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿರುವ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನ ಪ್ರಭಾವಿ ನಾಯಕರೂ ಆಗಿರುವ ಶಾಮನೂರು ಶಿವಶಂಕರಪ್ಪ ಅವರ ಈ ಹೇಳಿಕೆ ವಿವಾದದ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಶಾಮನೂರು ಅವರ ಪುತ್ರ ಸಂಪುಟ ದರ್ಜೆ ಸಚಿವರಾಗಿದ್ದರೂ ಹಿರಿಯ ನಾಯಕನ ಈ ಹೇಳಿಕೆ ವೇದಿಕೆಯಲ್ಲಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಪೇಚಿಗೆ ಸಿಲುಕಿಸಿದೆ.
ವೀರಶೈವ ಲಿಂಗಾಯತರಲ್ಲಿ ಅನೇಕ ಒಳ ಪಂಗಡಗಳಿವೆ, ಅವುಗಳು ದೂರವಾಗಿ ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು ಆಗ ಐಕ್ಯತೆ ಮೂಡುತ್ತದೆ ಎಂದರು.
ಬಿ.ವೈ.ರಾಘವೇಂದ್ರ ಅವರಂತಹ ಲೋಕಸಭೆ ಸದಸ್ಯರನ್ನುಪಡೆದ ನೀವೇ ಧನ್ಯರು. ಜಿಲ್ಲೆಯಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನು ಪೂರ್ಣ ಮಾಡಿ ಮುನ್ನಡೆಯುತ್ತಿದ್ದಾರೆ. ಜನರಿಗೆ ಅಭಿವೃದ್ಧಿ ಕೆಲಸ ಆಗಬೇಕಿರುವುದು ಮೊದಲ ಆದ್ಯತೆ. ಜನರ ಅಭಿಲಾಷೆಯಂತೆ ಕೆಲಸ ಮಾಡಿರುವ ಲೋಕಸಭಾ ಸದಸ್ಯರನ್ನು ಬರುವ ಲೋಕಸಭೆ ಚುನಾವಣೆಯಲ್ಲಿಯೂ ಗೆಲ್ಲಿಸಬೇಕು.
ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್ ಶಾಸಕರು.
ದೇಶ ಸದೃಢ: ಸಂಸದ ರಾಘವೇಂದ್ರ
ಗುರು ಹಿರಿಯರ ಮಾರ್ಗದರ್ಶನದಲ್ಲಿ ಭಾರತ ದೇಶವು ಸದೃಢವಾಗಿ ಮುನ್ನಡೆಯುತ್ತಿದ್ದು, ಶ್ರೇಷ್ಠ ಧಾರ್ಮಿಕ ಹಿನ್ನೆಲೆ ಹೊಂದಿರುವ ಐತಿಹಾಸಿಕ ದೇಶ ನಮ್ಮದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಬೆಕ್ಕಿನ ಕಲ್ಮಠದಲ್ಲಿ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ ೧೧೨ನೇ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಆಯೋಜಿಸಿದ್ದ ಭಾವೈಕ್ಯ ಸಮ್ಮೇಳನ ಹಾಗೂ ಗುರು ಬಸವಶ್ರೀ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮ ಆಗುತ್ತಿದ್ದು, ಇಂದು ಸವಳಂಗ ರಸ್ತೆ ಮೇಲ್ಸೇತುವೆ ಉದ್ಘಾಟನೆಯಾಗಿದೆ, ಎಫ್.ಎಂ, ಹೆದ್ದಾರಿ ಕಾಮಗಾರಿ, ಪ್ರವಾಸಿ ತಾಣಗಳ ಅಭಿವೃದ್ಧಿ ಹೀಗೆ ನೂರಾರು ಅಭಿವೃದ್ಧಿ ಕೆಲಸಗಳು ಮಾಡಿದ್ದು, ಅಲ್ಲಮ ಪ್ರಭು ಜನ್ಮಸ್ಥಳ ಅಭಿವೃದ್ಧಿಗೆ ಕೇಂದ್ರದ ಪುರಾತತ್ವ ಇಲಾಖೆ ಒಪ್ಪಿಗೆ ನೀಡಿದ್ದು, ೪ ಕೋಟಿ ವೆಚ್ಚದಲ್ಲಿ ಸರ್ಕಾರದ ವತಿಯಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಡಾ. ರಾಜೇಂದ್ರ ಚೆನ್ನಿ ಅವರು ಭಾವೈಕ್ಯತೆ ವಿಷಯ ಕುರಿತು ಉಪನ್ಯಾಸ ನೀಡಿ, ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದು, ದೇಶದ ಸಮಗ್ರತೆ ಹಾಗೂ ಐಕ್ಯತೆ ಕಾಪಾಡುವುದು ಸಂವಿಧಾನ ನಮಗೆ ನೀಡಿರುವ ಪ್ರಮುಖ ಕರ್ತವ್ಯ ಆಗಿದೆ. ಭಾವೈಕ್ಯ ಮನೋಭಾವ ಪ್ರತಿಯೊಬ್ಬರಲ್ಲಿ ಬರದಿದ್ದರೆ ದೇಶದ ಐಕ್ಯತೆ ಕಾಪಾಡುವುದು ಸಹ ಕಷ್ಟದ ಸಂಗತಿ ಎಂದು ಹೇಳಿದರು.
ಸಾಂಸ್ಕೃತಿಕ ನೆನಪುಗಳನ್ನೇ ನಾವು ಮರೆತಿದ್ದೇವೆ. ೧೨ನೇ ಶತಮಾನದಲ್ಲಿ ಸಂಸ್ಕೃತಿ, ಧರ್ಮ ಹಾಗೂ ಮೌಲ್ಯಗಳ ಐಕ್ಯತೆಯನ್ನು ಅನುಷ್ಠಾನಗೊಳಿಸಿದವರು ಬಸವಣ್ಣ, ಮಹಾಮನೆ, ಅನುಭವ ಮಂಟಪದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಸಮಾನತೆ ಸಂದೇಶ ಸಾರಿದರು. ಅಂತಹ ಶರಣರ ಆಲೋಚನೆಗಳನ್ನೇ ಇಂದು ಮರೆಯುತ್ತಿದ್ದೇವೆ. ಜಾತಿಯ ಗೋಡೆಗಳನ್ನು ಮೀರಿ ಐಕ್ಯತೆ ಹಾಗೂ ಸಮಾನತೆಯ ಸಮಾಜದ ಪರಿಕಲ್ಪನೆ ಕುರಿತು ಶರಣರ ಆಲೋಚನೆಗಳನ್ನು ನಾವು ಗಮನಿಸಬೇಕಿದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ “ಗುರು ಬಸವಶ್ರೀ” ಪ್ರದಾನ ಮಾಡಿ ಗೌರವಿಸಲಾಯಿತು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಚ್.ಎಲ್.ಷಡಾಕ್ಷರಿ, ಧಾರವಾಹಿ ನಿರ್ದೇಶಕ ಪಿ.ಎನ್.ರುದ್ರಪ್ಪ, ವಿಶ್ವ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಡಾ. ಬಿ.ಜೆ.ಗಿರೀಶ್ ಅವರನ್ನು ಸನ್ಮಾನಿಸಲಾಯಿತು. ಹಿಂದೂಸ್ತಾನಿ ಗಾಯಕ ಹುಮಾಯೂನ್ ಹರ್ಲಾಪುರ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸವಣೂರು ಶ್ರೀ ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ಉಪಸ್ಥಿತರಿದ್ದರು. ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಡಾ. ಬಸವ ಜಯಚಂದ್ರ ಸ್ವಾಮೀಜಿ ಮಾತನಾಡಿದರು.
ಸರ್ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ, ಸಿ.ಎಸ್.ಷಡಾಕ್ಷರಿ, ಇಂಪನಾ, ವೀರಣ್ಣ, ರಾಜಣ್ಣ, ಡಾ. ಪ್ರವೀಣ್ ದೇವರಬಾವಿ, ಡಿ.ಜಿ.ಬೆನಕಪ್ಪ ಪಾಲ್ಗೊಂಡಿದ್ದರು.
ಪುಣ್ಯ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಎಚ್.ಸಿ.ಯೋಗೀಶ್, ಉಪಾಧ್ಯಕ್ಷ ಎನ್.ಜೆ.ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಎಸ್.ಎನ್.ಮಹಾಲಿಂಗಯ್ಯ ಶಾಸ್ತ್ರಿ, ಕೋಶಾಧ್ಯಕ್ಷ ಇ.ವಿಶ್ವಾಸ್, ಹಣಕಾಸು ಸಮಿತಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರಚಾರ ಸಮಿತಿ ಅಧ್ಯಕ್ಷ ಸೋಮನಾಥ್.ಕೆ.ಆರ್., ಶೀಲಾ ಸುರೇಶ್, ಸಂತೋಷ್ ಬಳ್ಳೇಕೆರೆ, ರುದ್ರಯ್ಯ ಶಾಸ್ತ್ರಿ, ಶಾಂತಾ ಆನಂದ್, ಸುಜಯಾ ಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು.