ಶಿವಮೊಗ್ಗ: ಯುವ ಜನತೆ ಉದ್ಯೋಗ ಪಡೆದ ನಂತರ ಓದುವ ಹವ್ಯಾಸ ಮರೆತಿದ್ದಾರೆ. ಜೀವನದ ಯಶಸ್ಸಿಗೆ ಓದು ಬಹಳ ಮುಖ್ಯ. ಆದ್ದರಿಂದ ಓದುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಹೇಳಿದರು.
ಸಿಟಿಜನ್ಸ್ ಫೋರಂ, ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಜಿಲ್ಲಾ ಸೊಸೈಟಿ, ಪೀಪಲ್ಸ್ ಲಾಯರ್ಸ್ ಗಿಲ್ಡ್ ಸಹಯೋಗದಲ್ಲಿ ಇಲ್ಲಿನ ವಕೀಲರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ‘ಕಳೆದ ಕಾಲ, ನಡೆದ ದೂರ’ ಎನ್ನುವ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ನಮ್ಮ ಓದಿನ ಅರಿವನ್ನು ವಿಸ್ತರಿಸಬೇಕು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲರಿಗೂ ನೆಮ್ಮದಿ ನೀಡಿದೆ. ಇದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಅವರು ತಮ್ಮ ವೃತ್ತಿ ಬದುಕಿನ ವಿಶ್ರಾಂತಿ ನಂತರವೂ ಕ್ರಿಯಾಶೀಲರಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಮಾತನಾಡಿ, ಮಾನವೀಯತೆಯೇ ದೊಡ್ಡ ಶಕ್ತಿ. ನ್ಯಾಯಾಂಗ ಶಕ್ತಿಯೇ ಮನುಷ್ಯತ್ವ. ಇಲ್ಲಿ ಮಾನವೀಯತೆಯನ್ನು ಕಳೆದುಕೊಳ್ಳಬಾರದು. ನಮಗಾಗಿ ಬದುಕುವುದು ದೊಡ್ಡದಲ್ಲ. ಸಮಾಜದ ಏಳಿಗೆಗಾಗಿ ಕೆಲಸ ಮಾಡುವುದೇ ಶ್ರೇಷ್ಠ. ಇಂದಿನ ಯುವಕರು ಮನುಷ್ಯ ಪ್ರೇಮ ಮೆರೆದಾಗ ಸದೃಢ ದೇಶ ಕಟ್ಟಲು ಸಾಧ್ಯ ಎಂದರು.
ಆತ್ಮಾವಲೋಕನ ಮಾಡಿಕೊಳ್ಳಲು ‘ಕಳೆದ ಕಾಲ ನಡೆದ ದೂರ’ ಕೃತಿ ಬರೆಯ ಬೇಕಾಯಿತು. ಆದರೆ, ಆತ್ಮಕತೆ ಬರೆಯುವುದು ತುಂಬಾ ಕಷ್ಟ. ಬದುಕು ಹೇಗಿತ್ತು, ವೃತ್ತಿಯಲ್ಲಿನ ಅನುಭವಗಳು ಬೇರೆಯವರಿಗೆ ಮಾದರಿಯಾಗಬಹುದು ಎಂದು ತಿಳಿಸಲು ಕೃತಿ ರಚಿಸಬೇಕಾಯಿತು ಎಂದರು.
ಪೀಪಲ್ಸ್ ಲಾಯರ್ಸ್ ಗಿಲ್ಡ್ ಸಂಚಾಲಕ ಕೆ.ಪಿ. ಶ್ರೀಪಾಲ್ ಮಾತನಾಡಿ, ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಕನ್ನಡದ ಕಣ್ಮಣಿ. ಕನ್ನಡದಲ್ಲಿಯೇ ಕೃತಿ ಬರೆದಿದ್ದಾರೆ. ಅವರ ಮೊಬೈಲ್ ಸಂದೇಶಗಳು ಕೂಡ ಕನ್ನಡದಲ್ಲಿಯೇ ಇರುತ್ತವೆ. ಈ ನಾಡಿಗೆ, ಭಾಷೆಗೆ ಅವರು ಅತ್ಯಂತ ಗೌರವ ನೀಡಿದ್ದಾರೆ. ಅವರ ತೇಜಸ್ಸು ಕನ್ನಡ ನಾಡಿಗಲ್ಲದೇ ಇಡೀ ದೇಶಕ್ಕೆ ಹಬ್ಬಿದೆ. ಅತ್ಯಂತ ಹೃದಯವಂತ, ಮಾನವೀಯತೆಯ ಪ್ರತೀಕ ಮತ್ತು ಅತ್ಯಂತ ಸರಳ ವ್ಯಕ್ತಿ ಎಂದು ಬಣ್ಣಿಸಿದರು.
ವಕೀಲರ ಸಂಘದ ಅಧ್ಯಕ್ಷ ಶಿವಮೂರ್ತಿ, ಹಿರಿಯ ನ್ಯಾಯವಾದಿ ಕೆ. ಬಸಪ್ಪಗೌಡ, ಫಾ.ರೋಷನ್ ಪಿಂಟೋ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಇಮ್ತಿಯಾಜ್, ವೈದ್ಯ ಇದ್ದರು.