ತುಮಕೂರು: ನಗರದ ಸಿದ್ಧಗಂಗಾ ಮಠಕ್ಕೆ ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಭಾನುವಾರ ಭೇಟಿ ನೀಡಿ, ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದು,ಸಿದ್ಧಲಿಂಗ ಸ್ವಾಮೀಜಿಯ ಆಶೀರ್ವಾದ ಪಡೆದುಕೊಂಡರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಮಠಕ್ಕೆ ಭೇಟಿ ನೀಡಿರುವುದು ಸಂತಸ ತಂದಿದೆ. ಈ ಹಿಂದೆ ದೊಡ್ಡವರು (ನಟ ರಾಜಕುಮಾರ) ಮಠದೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. ಇಲ್ಲಿಗೆ ಅನೇಕ ಭಾರಿ ಭೇಟಿ ನೀಡಿದ್ದೇನೆ. ಅದೆಲ್ಲವೂ ಈಗ ನೆನಪಾಗುತ್ತಿದೆ’ ಎಂದರು.
ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಕಾರ್ಯ ಉತ್ತಮವಾಗಿ ಸಾಗುತ್ತಿದೆ. ಜಿಲ್ಲೆಯ ಜನರು ನನ್ನ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಅದೇ ರೀತಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲಾ ವರ್ಗದವರಿಗೆ ವರದಾನವಾಗಿವೆ. ಇದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವರಾಜಕುಮಾರ ಅವರ ಆಶಯ ಈಡೇರಿದೆ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅದೇ ರೀತಿ, ಶಿವಮೊಗ್ಗದಲ್ಲಿ ಹರಿಹರಿಸಬಹುದಾದ ಸಮಸ್ಯೆಗಳು ಸಾಕಷ್ಟಿವೆ. ಮುಳುಗಡೆ ಸಂತ್ರಸ್ತರ ಸಮಸ್ಯೆ, ಬಗರ್ ಹುಕುಂ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ, ರಸ್ತೆ- ಚರಂಡಿ ಹೀಗೆ ಹತ್ತು ಹಲವು ಪ್ರಮುಖ ಸಮಸ್ಯೆಗಳು ನೆನೆಗುದಿಗೆ ಬಿದ್ದಿವೆ. ಇವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.
ನಟ ಶಿವರಾಜಕುಮಾರ ಮಾತನಾಡಿ, ಪತ್ನಿ ಗೀತಾ ಅವರು ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರು ಸಲ್ಲಿಸಿದ್ದಾರೆ. ಪತಿಯಾಗಿ ಅರ್ಧಾಂಗಿಗೆ ಬೆಂಬಲ ಸೂಚಿಸುವುದು ನನ್ನ ಜವಬ್ದಾರಿ. ಶಿವಮೊಗ್ಗ ಕ್ಷೇತ್ರದಲ್ಲಿ ಮತದಾರರು ಗೀತಾಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಅದೇ ರೀತಿ, ಈ ಭಾರಿಯ ಚುನಾವಣೆಯ ಫಲಿತಾಂಶ ಗೀತಾಳ ಪರವಾಗಿರಲಿದೆ ನಂಬಿಕೆ ನನಗಿದೆ ಎಂದರು.
ತಂದೆಯವರು ಮಠದ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅದೇ ರೀತಿ, ಇಲ್ಲಿ ತಂದೆಯವರ ಅನೇಕ ಸಿನಿಮಾಗಳನ್ನು ಚಿತ್ರಿಸಲಾಗಿದೆ. ಇತ್ತೀಚೆಗೆ, ನಾನು ನಟಿಸಿದ ‘ಟಗರು’ ಸಿನಿಮಾ ಕೂಡ ಇಲ್ಲಿಯೇ ಚಿತ್ರಿಸಲಾಗಿತ್ತು. ಆದ್ದರಿಂದ, ಇಲ್ಲಿನ ಪರಿಸರ ನನಗೆ ಇಷ್ಟ ಎಂದರು.
ಲೋಕಸಭಾ ಚುನಾವಣೆ ಶಿವಮೊಗ್ಗ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ವಿಜಯ ರಾಘವೇಂದ್ರ, ಮಠದ ಆಡಳಿತ ಅಧಿಕಾರಿ ನಾಗರಾಜ, ಪ್ರಮುಖರಾದ ರಾಧಾ ವಿಜಯ್, ದಯಾನಂದ ಸೇರಿ ಮಠದ ಸಿಬ್ಬಂದಿ ಇದ್ದರು.