ಶಿವಮೊಗ್ಗ: ಚುನಾವಣೆ ಬಹಿರಂಗ ಪ್ರಚಾರ ಅಂತಿಮ ದಿನವಾದ ಭಾನುವಾರ ಮೂವರೂ ಅಭ್ಯರ್ಥಿಗಳು ಭರ್ಜರಿ ರೋಡ್ ಶೊ ಮಾಡುವ ಮೂಲಕ ಮತಯಾಚನೆ ಮಾಡಿದರು. ಸಂಸದ ರಾಘವೇಂದ್ರ ಅವರು ಹೊಸನಗರ ತಾಲೂಕು ಬಸವಾಪುರದಲ್ಲಿ ಮೊನ್ನೆ ಆನೆ ತುಳಿತಕ್ಕೊಳಗಾಗಿ ಸಾವಿಗೀಡಾದ ತಿಮ್ಮಪ್ಪ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಬಳಿಕ ಸೊರಬದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಅಭ್ಯರ್ಥಿ ರಾಘವೇಂದ್ರ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಮತಯಾಚನೆ ಮಾಡಿದರು.
ಈ ಸಂದರ್ಭ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ತಾಲೂಕಿನ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರು ಹೆಚ್ಚಿನ ಪರಿಶ್ರಮ ಹಾಕಿದ್ದಾರೆ
ಮೂಡಿ ಮೂಗೂರು ಏತ ನೀರಾವರಿ ಯೋಜನೆ ಸೇರಿದಂತೆ ಇನ್ನೂ ಅನೇಕ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿತ್ತು ತಾಲೂಕಿನ ರೈತರು ನೆಮ್ಮದಿಯ ದಿನಗಳನ್ನು ಹಾಗೂ ಸ್ವಾಭಿಮಾನದಿಂದ ಬದುಕಲು ಅನುಕೂಲ ಕಲ್ಪಿಸಲಾಗಿದೆ ಇದರಿಂದಾಗಿ ತಾಲೂಕು ಅತ್ಯಂತ ಮುಂದುವರೆದಿದ್ದು ಕ್ಷೇತ್ರದಲ್ಲಿ ಜನತೆ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದು ಹೇಳಿದರು
ಮಾಜಿ ಸಚಿವ ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪ ಮತ್ತಿತರರಿದ್ದರು.
ನಾವು ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಕ್ಷೇತ್ರದ ಜನರು ಬೆಂಬಲ ನೀಡುತ್ತಾತ್ತಾರೆ. ಇನ್ನೂ ಉಳಿದಿರುವ ಕೆಲಸಗಳನ್ನು ಪೂರೈಸಲು ಸಮರ್ಥರನ್ನು ಗೆಲ್ಲಿಸುವ ಸಂಕಲ್ಪವನ್ನು ಕ್ಷೇತ್ರದ ಜನತೆ ಮಾಡಿದ್ದಾರೆ. ಮೋದಿಯವರ ಶಕ್ತಿ ಮತ್ತು ಕೆಲಸ ನಮಗೆ ಅನುಕೂಲವಾಗಲಿವೆ.
ಬಿ.ವೈ.ರಾಘವೇಂದ್ರ
ಹಿಂದಿನ ಸರಕಾರದ ಅವಧಿಯಲ್ಲಿ ನಾವು ಮಾಡಿರುವ ಕೆಲಸಗಳು ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಮುನ್ನಡೆ ಕೊಡಿಸಲಿವೆ. ಜಾತಿಯ ಹೆಸರಲ್ಲಿ ರಾಜಕಾರಣ ಮಾಡುವ ದುರಹಂಕಾರಿಗಳಿಗೆ ಕ್ಷೇತ್ರದ ಜನತೆ ಪಾಠ ಕಲಿಸಲಿದ್ದಾರೆ.
ಕುಮಾರ್ ಬಂಗಾರಪ್ಪ, ಮಾಜಿ ಸಚಿವ
ಶಿಕಾರಿಪುರದಲ್ಲಿ ಬೃಹತ್ ರೋಡ್ ಶೊ
ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶಿಕಾರಿಪುರ,ಶಿರಾಳಕೊಪ್ಪ ಮತ್ತು ಆನವಟ್ಟಿಯಲ್ಲಿ ಬೃಹತ್ ರ್‍ಯಾಲಿ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು, ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಹೆಜ್ಜೆ ಗುರುತುಗಳನ್ನು ಅಳಿಸಲು ಬಿಡಕೂಡದು. ಇದರಿಂದ, ಕ್ಷೇತ್ರದ ಅಸ್ತಿತ್ವ ಕುಂಠಿತಗೊಳ್ಳಲಿದೆ’ ಎಂದು ಹೇಳಿದರು.
ಬಂಗಾರಪ್ಪ ಅವರು ಎಲ್ಲಾ ಸಮುದಾಯಗಳಿಗೆ ಆಸರೆಯ ಬೆಳಕಾಗಿದ್ದರು. ಅದೇ ರೀತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವರಾಜಕುಮಾರ ಕೂಡ ಜನಪರ ಕಾಳಜಿಯೊಂದಿಗೆ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಇಲ್ಲಿ, ಕಾಂಗ್ರೆಸ್ ಆಳ್ವಿಕೆಯಿಂದ ಬಡವರು, ಕೂಲಿ ಕಾರ್ಮಿಕರ ದುಡಿಯುವ ರೆಟ್ಟೆಗೆ ಶಕ್ತಿ ತುಂಬಿದ್ದಾರೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿಯ ಬದುಕು ನಡೆಸಲು ಅನುಕೂಲವಾಗಿದೆ. ಜಿಲ್ಲೆಯಲ್ಲಿನ ಅನೇಕ ಸಮಸ್ಯೆಗಳ ಅಂತರಾಳ ಅರಿತು, ಪರಿಹಾರ ಒದಗಿಸಲು ಒಂದು ಅವಕಾಶ ಕಲ್ಪಿಸಿಕೊಡಿ ಎಂದು ಕೋರಿದರು.
ನಟ ದುನಿಯಾ ವಿಜಯ್ ಮಾತನಾಡಿ, ಹಿಂದೂ- ಮುಸ್ಲಿಂರು ಸಮ ಬಾಳ್ವೆಯ ಬದುಕು ನಡೆಸಲು ಬಿಡದಂತೆ ಕೆಲವರು ಹುಳಿ ಹಿಂಡುತ್ತಿದ್ದಾರೆ. ಇದಕ್ಕೆ ಜನರು ಎಚ್ಚೆತ್ತುಕೊಳ್ಳಬೇಕು.ಕ್ಷೇತ್ರದ ಹಿತ ಕಾಯಲು ಗೀತಕ್ಕ ಉತ್ತಮ ನಾಯಕಿ. ಆದ್ದರಿಂದ ಮತ ನೀಡಿ ಆಶೀರ್ವದಿಸಿ ಎಂದರು.
ಕಾಂಗ್ರೆಸ್ ಮುಖಂಡರಾದ ನಾಗರಾಜ ಗೌಡ, ನಗರದ ಮಹದೇವಪ್ಪ, ಗೋಣಿ ಮಾಲ್ತೇಶ್, ರಾಘವೇಂದ್ರ ನಾಯಕ, ಶಿವು ಬಂಡಾರಿ, ದರ್ಶನ್ ಉಳ್ಳಿ, ಪುಷ್ಪಾ ಸೇರಿ ಕಾರ್ಯಕರ್ತರು ಇದ್ದರು.
ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮಹಿಳೆಯರ ಪಾತ್ರ ಹಿರಿದು. ಅದೇ ರೀತಿ, ಮಹಿಳೆಯರಿಗೆ ಶಕ್ತಿ ನೀಡಿದರೆ, ಸಮಾಜದ ಕಣ್ಣಾಗಿ ಕಾಯುವರು. ಅದೇ ಕಾರಣಕ್ಕೆ ಇಲ್ಲಿ ಸೇವೆ ಸಲ್ಲಿಸಲು ಗೀತಾಗೆ ಅವಕಾಶ ಕಲ್ಪಿಸಿಕೊಡಿ.
ಡಾ. ಶಿವರಾಜಕುಮಾರ್
ಕಳೆದ ಹದಿನೈದು ವರ್ಷದಲ್ಲಿ ಸಂಸದರು ಏನು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿಯಾಗಿಲ್ಲ. ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಿಲ್ಲ. ಸುಳ್ಳು ಹೇಳಿಕೊಂಡು ಜನರನ್ನು ಹೆಚ್ಚುದಿನ ಮರಳುಮಾಡಲಾಗದು. ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳು ಮತ್ತ ಬಂಗಾರಪ್ಪಾಜಿಯವರು ತಂದು ಇಂದಿಗೂ ಜಾರಿಯಲ್ಲಿರುವ ಯೋಜನೆಗಳ ಸ್ಮರಿಸುವ ಜನ ಗೀತಕ್ಕರನ್ನು ಆಯ್ಕೆಮಾಡುವುದು ನಿಶ್ಚಿತ.
–ಮಧುಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
೨ ಲಕ್ಷ ಮತಗಳ ಅಂತರದಲ್ಲಿ ಗೆಲುವು: ಈಶ್ವರಪ್ಪ
ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ೨ ಲಕ್ಷ ಮತಗಳ ಅಂತರದಿಂದ ಗೆಲ್ಲುವೆ. ಶಿಕಾರಿಪುರ ಮತ್ತು ಸೊರಬ ಕ್ಷೇತ್ರಗಳಲ್ಲಿಯೇ ನನಗೆ ಮುನ್ನಡೆ ಸಿಗಲಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟೂ ವಿಧಾನ ಸಭೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದಾಗ ನನಗೆ ಗೆಲುವಿನ ಭರವಸೆ ಬಂದಿದೆ. ಹಾಲಿ ಸಂಸದರ ವಿರುದ್ಧ ಭಾರೀ ಆಕ್ರೋಶ ಕೇಳಿಬರುತ್ತಿದೆ. ಶಿಕಾರಿಪುರ ಮತ್ತು ಸೊರಬ, ಹೊಸನಗರ ಹಾಗೂ ಗ್ರಾಮಾಂತರ ಕ್ಷೇತ್ರದಲ್ಲಿ ಭೂಮಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಭದ್ರಾವತಿಯಲ್ಲಿ ಕಾರ್ಮಿಕರು ನನಗೆ ಬೆಂಬಲ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದು, ಈ ಎಲ್ಲಾ ಸಮಸ್ಯೆಗಳಿಗೆ ಆಯಾ ಭಾಗದ ಜನರ ನಿಯೋಗ ಕರೆದುಕೊಂಡು ಹೋಗಿ ಸಮಸ್ಯೆ ಇತ್ಯರ್ಥ ಮಾಡುವೆ ಎಂದು ಹೇಳಿದರು.
ಜನರಿಗೆ ಯಡಿಯೂರಪ್ಪ ಮತ್ತು ಕಾಂಗ್ರೆಸ್ ಸರಕಾರದ ಸಚಿವರ ಮೇಲೆ ವಿಶ್ವಾಸ ಇಲ್ಲವಾಗಿದೆ. ಶಿಕಾರಿಪುರದಲ್ಲಿಯೇ ಅವರಿಗೆ ಆಕ್ರೋಶವಿದೆ ಎಂದು ಹೇಳಿದರು.
ಸಂಘಪರಿವಾರದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಬೂತ್ ಮಟ್ಟದಲ್ಲಿ ನನ್ನ ಪರವಾಗಿ ಕೆಲಸ ಮಾಡುತ್ತಾರೆ. ಪ್ರಚಾರದಲ್ಲಿ ಹೋದಾಗ ಎಲ್ಲರೂ ಈ ಬಗ್ಗೆ ಭರವಸೆ ನೀಡಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ, ಮಧುಬಂಗಾರಪ್ಪ ಎಲ್ಲಾ ಜಾತಿವಾದಿಗಳು. ಆದರೆ ಈಶ್ವರಪ್ಪ ಹಿಂದುತ್ವವಾದಿ ಎಲ್ಲ ಜಾತಿ ಸಮುದಾಯಗಳ ಪ್ರತಿನಿಧಿಯಾಗಿದ್ದೇನೆ. ಈ ಭರಸೆಯ ಮೇಲೆ ಜನ ನನ್ನ ಗೆಲ್ಲಿಸುವರು.-ಕೆ.ಎಸ್.ಈಶ್ವರಪ್ಪ.
ಪರಿಶಿಷ್ಟ ಜಾತಿ, ಪಂಗಡ, ಭೋವಿ ಸಮಾಜ ಸೇರಿದಂತೆ ಎಲ್ಲಾ ವರ್ಗದ ಜನರು ಈಶ್ವರಪ್ಪ ಅವರ ಮೇಲೆ ನಂಬಿಕೆ ಇಟ್ಟು ಬೆಂಬಲ ನೀಡಿದ್ದಾರೆ. ಯಡಿಯೂರಪ್ಪ ಮತ್ತವರ ಮಕ್ಕಳಿಂದ ಶಿವಮೊಗ್ಗದಲ್ಲಿ ಅಭಿವೃದ್ಧಿಯಾಗಿಲ್ಲ. ಆಗಬೇಕಿರುವ ಬಡಜನರ ಕೆಲಸಗಳು ಈಶ್ವರಪ್ಪರು ಈಡೇರಿಸುತ್ತಾರೆ. ಅವರು ಗೆದ್ದು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲ ಪಡಿಸುವಲ್ಲಿ ಅನುಮಾನವಿಲ್ಲ.
–ಗೂಳಿಹಟ್ಟಿ ಶೇಖರ್, ಮಾಜಿ ಸಚಿವ
ಭೂಮಾಲೀಕರ ಪಳೆಯುಳಿಕೆಗಳು ಬಡಜನರಿಗೆ ಭೂಮಿ ಕೊಡುವಲ್ಲಿ ಅಡ್ಡಿಯಾಗಿವೆ. ಈ ಕಾರಣದಿಂದ ಅರಣ್ಯವಾಸಿಗಳು, ಶರಾವತಿ ಸಂತ್ರಸ್ತರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಹಿಂದುಳಿದ ವರ್ಗಗಳ ನಾಯಕ ಈಶ್ವರಪ್ಪರು ಚುನಾವಣೆಯಲ್ಲಿ ಗೆದ್ದು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡಿಸಲಿದ್ದಾರೆ. ರೈತರ ಹೆಸರಲ್ಲಿ ಹಸಿರು ಶಾಲು ಹಾಕಿ ಪ್ರಮಾಣ ವಚನ ಮಾಡಿದವರು ಕ್ಷೇತ್ರದಲ್ಲಿ ೨೫ ಸಾವಿರ ಬಗರ್‌ಹುಕುಂ ಅರ್ಜಿಗಳು ದಶಕಗಳಿಂದ ಬಾಕಿ ಉಳಿದಿವೆ.
ತೀನಾ ಶ್ರೀನಿವಾಸ್, ರೈತ ಹೋರಾಟಗಾರ