Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಧನಂಜಯ ಸರ್ಜಿ ಪದವೀಧರ ಕ್ಷೇತ್ರದ ಬಿಜೆಪಿ ಹುರಿಯಾಳು, ಬ್ರಾಹ್ಮಣ ಆಕಾಂಕ್ಷಿಗಳಿಗೆ ನಿರಾಸೆ

ಶಿವಮೊಗ್ಗ: ನೈರುತ್ಯಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಗರದ ಹೆಸರಾಂತ ವೈದ್ಯ ಸಮಾಜ ಸೇವಕ ಡಾ.ಧನಂಜಯ ಸರ್ಜಿ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಅಖೈರುಗೊಳಿಸಿದೆ.

ನಿರೀಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಸರ್ಜಿ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಸರ್ಜಿ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ ಕೊನೇ ಕ್ಷಣದಲ್ಲಿ ತಪ್ಪಿತ್ತು. ಮೂಲತಃ ಚನ್ನಗಿರಿ ತಾಲೂಕು ಗೊಪ್ಪೇನಹಳ್ಳಿಯವರಾದ ಧನಂಜಯ್ ಅವರು, ಮಕ್ಕಳ ತಜ್ಞರಾಗಿ ಹೆಸರುವಾಸಿಯಾಗಿದ್ದಾರೆ. ಸರ್ಜಿ ಸಮೂಹ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಧನಂಜಯ ಸರ್ಜಿ ಅವರು, ಸಮಾಜ ಸೇವೆಯಿಂದಾಗಿ ಜನಪ್ರಿಯರಾಗಿದ್ದಾರೆ.


ಅಸಮಾಧಾನ:

ಬಿಜೆಪಿ ಮೇಲ್ಮನೆ ಚುನಾವಣೆಗೆ ಅರ್ಹತೆ, ಆರ್ಥಿಕ ಸಬಲತೆ ಎಲ್ಲಾ ಇರುವ ಧನಂಜಯ ಸರ್ಜಿ ಅವರನ್ನು ಆಯ್ಕೆ ಮಾಡಿದೆ. ಆದರೆ ಇಬ್ಬರು ಲಿಂಗಾಯತ ಶಾಸಕರು, ಸಂಸದರು, ಮೇಲ್ಮನೆ ಸದಸ್ಯರು ಇದ್ದರೂ ನೈರುತ್ಯ ಪದವೀಧರ ಕ್ಷೇತ್ರಕ್ಕೂ ಲಿಂಗಾಯತ ಸಮುದಾಯದವರಿಗೇ ಪ್ರಾತಿನಿಧ್ಯ ನೀಡಿರುವುದು ಪಕ್ಷದೊಳಗೆ ಒಂದು ಸಣ್ಣ ಅಸಮಾಧಾನ ಎದ್ದಿದೆ. ಧನಂಜಯ ಸರ್ಜಿ ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದಾರೆ. ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಅನೇಕರನ್ನು ನಿರಾಸೆಗೊಳಿಸಲಾಗಿದೆ.
ಐದು ಜಿಲ್ಲೆ ವ್ಯಾಪ್ತಿ ಹೊಂದಿರುವ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಶಿವಮೊಗ್ಗದವರಿಗೇ ಮಾನ್ಯತೆ ನೀಡಲಾಗಿದೆ. ಕಳೆದ ಅವಧಿಯಲ್ಲಿ ಆಯನೂರು ಮಂಜುನಾಥ್ ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದರು. ಈಗ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದಾರೆ.
ಯಾರಿಗೆಲ್ಲಾ ಅಸಮಾಧಾನ:

ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಅವರು ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದರು. ಅದೇ ರೀತಿ ಮಾಜಿ ಶಾಸಕ ಎಂ.ಬಿ.ಭಾನುಪ್ರಕಾಶ್, ಎಸ್. ದತ್ತಾತ್ರಿ, ಎಂ.ಶಂಕರ್ ಕೂಡಾ ಆಕಾಂಕ್ಷಿಯಾಗಿದ್ದರು. ಈ ಎಲ್ಲರೂ ಬ್ರಾಹ್ಮಣ ಸಮುದಾಯದವರಾಗಿದ್ದು, ಜಾತಿಬಲದಿಂದ ನಡೆಯುವ ಚುನಾವಣೆಯಲ್ಲಿ ಬ್ರಾಹ್ಮಣರಿಗೆ ಇರುವುದೊಂದೇ ಮೇಲ್ಮನೆ ಕ್ಷೇತ್ರ ಇಲ್ಲಿಯೂ ಅವಕಾಶ ತಪ್ಪಿಸಲಾಗಿದೆ.
ಈಡಿಗರಿಗೂ ಸಿಗಲಿಲ್ಲ:
ಶಿವಮೊಗ್ಗ, ಉಡುಪಿ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿರುವ ಈಡಿಗ ಸಮುದಾಯಕ್ಕೆ ಪದವೀಧರ ಕ್ಷೇತ್ರಕ್ಕೆ ಆದ್ಯತೆ ನೀಡಬೇಕೆಂಬ ಬೇಡಿಕೆ ಇತ್ತು. ಪಕ್ಷದ ಪ್ರಮುಖರಾದ ಬೇಗುವಳ್ಳಿ ಸತೀಶ್ ಅವರು ಆಕಾಂಕ್ಷಿಯಾಗಿದ್ದರು. ಆದರೆ ಲಿಂಗಾಯತರಿಗೆ ಮಾನ್ಯತೆ ನೀಡಿ ಪ್ರಮುಖ ಜಾತಿಗಳನ್ನು ಕಡೆಗಣಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸಂಘನಿಷ್ಟ ಈಶ್ವರಪ್ಪ ಕುಟುಂಬಕ್ಕೆ ಆದ ಅನ್ಯಾಯವೇ ಪದವೀಧರ ಕ್ಷೇತ್ರದಲ್ಲಿಯೂ ಆಗಿದೆ. ಸಂಘನಿಷ್ಠರಾದ ಬ್ರಾಹ್ಮಣ ಅಭ್ಯರ್ಥಿಗಳು ಹಲವರಿದ್ದರು ಮನ್ನಣೆ ನೀಡಿಲ್ಲ ಎಂಬ ಅಳಲು ಬಿಜೆಪಿ ಪಡಸಾಲೆಯಿಂದಲೇ ಕೇಳಿಬರುತ್ತಿದೆ.

Ad Widget

Related posts

ಮಾಸ್ಕ್ ವಿತರಿಸಿ ಶಿವಮೊಗ್ಗ ಪೊಲೀಸರಿಂದ ವಿಭಿನ್ನ ಜಾಗೃತಿ

Malenadu Mirror Desk

ಬಿಜೆಪಿ ನೂತನ ಪದಾಧಿಕಾರಿಗಳ ನೇಮಕ

Malenadu Mirror Desk

ಕೊರೊನ ವಾರಿಯರ್ಸ್ ಸೇವೆ ಶ್ಲಾಘನೀಯ: ಫಾದರ್ ರೋಶನ್ ಪಿಂಟೊ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.