ಶಿವಮೊಗ್ಗ: ಗ್ರಾಮ ಪಂಚಾಯಿತಿ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆ.೨೨ರಂದು ಬೆಳಿಗ್ಗೆ ೧೦ಗಂಟೆಗೆ ಜಿ.ಪಂ.ಮುಂಭಾಗದಲ್ಲಿ ಅನಿರ್ಧಿಷ್ಟಾವದಿ ಧರಣಿ ಆರಂಭಿಸಲಾಗುವುದು ಎಂದು ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ ಆರ್. ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಲವರು ವರ್ಷಗಳಿಂದ ಗ್ರಾ.ಪಂ.ಗಳಲ್ಲಿ ಕರ ವಸೂಲಿಗಾರ, ವಾಟರ್ ಮ್ಯಾನ್, ಜವಾನ, ಕ್ಲರ್ಕ್, ಸ್ವಚ್ಚತಾಗಾರ ಹೀಗೆ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿದ್ದೇವೆ. ಸರ್ಕಾರ ನೌಕರರ ಹಿತದೃಷ್ಟಿಯಿಂದ ಅನೇಕ ಆದೇಶಗಳನ್ನು ಮಾಡಿದ್ದರೂ ಕೂಡ ನಿಗದಿತ ಸಮಯದೊಳಗೆ ಅನುಷ್ಠಾನಗೊಳ್ಳುತ್ತಿಲ್ಲ. ಗ್ರಾಪಂ ನೌಕರರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ನಮ್ಮ ನೌಕರರ ಸಂಘ ಸಿಐಟಿಯುನೊಂದಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ನಮ್ಮ ಬೇಡಿಕೆಗಳಿ ಈಡೇರಿಲ್ಲ. ಹಾಗಾಗಿ ಈ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
೨೦೧೭ರ ಅಕ್ಟೋಬರ್ ೩೨ರ ಒಳಗೆ ಗ್ರಾಮ ಪಂಚಾಯಿತಿಯಲ್ಲಿ ಸಭಾ ನಡುವಳಿ ಮೂಲಕ ಕರ್ತವ್ಯಕ್ಕೆ ನೇಮಕ ಆದಂತಹ ವಿವಿಧ ವೃಂದದ ನೌಕರರಿಗೆ ಏಕ ಕಾಲದಲ್ಲಿ ಅನುಮೋದನೆ ನೀಡಬೇಕು. ನೌಕರರ ಸಮಸ್ಯೆಗಳಿಗೆ ಸ್ಪಂದಿಸದ ವಿಷಯ ನಿರ್ವಾಹಕರನ್ನು ಬದಲಾವಣೆ ಮಾಡಬೇಕು. ಗ್ರಾ.ಪಂ.ನೌಕರರಿಗೆ ಸುರಕ್ಷತಾ ಕಿಟ್, ಸಮವಸ್ತ್ರ, ಐಡಿ ಕಾರ್ಡ್ ಅಂತ್ಯ ಸಂಸ್ಕಾರಕ್ಕೆ ೧೦ ಸಾವಿರ ಸಹಾಯ ಧನ. ಕನಿಷ್ಠ ವೇತನ ತುಟ್ಟಿ ಭತ್ಯೆ ನೀಡಬೇಕು. ಜಾಬ್ ಚಾರ್ಟ್‌ನಲ್ಲಿ ನಮೂದಿಸಿರುವ ಕರ್ತವ್ಯಗಳನ್ನು ಬಿಟ್ಟು ಅನ್ಯ ಕೆಲಸಕ್ಕೆ ನೇಮಕ ಮಾಡಬಾರದು ಎಂದು ಅವರು ಆಗ್ರಹಿಸಿದರು.
ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ನೌಕಕರಿಗೆ ಕಾರ್ಯದರ್ಶಿ ಗ್ರೇಡ್ ೨, ಎಸ್‌ಡಿಎಎ ಹುದ್ದೆಗಳಿಗೆ ಮುಂಬಡ್ತಿ ಇರುವ ಲೋಪದೋಷಗಳನ್ನು ಸರಿಪಡಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಕೈ ಬಿಟ್ಟು ಸರ್ಕಾರದ ಅಧಿಸೂಚನೆಯಂತೆ ೧೧೨ ಮತ್ತು ೧೧೩ರಂತೆ ನೇಮಕ ಮಾಡಿಕೊಳ್ಳಬೇಕು ಎಂದರು.
ಪತ್ರಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎಂ.ಸಂತೋಷ್, ಚೆನ್ನಬಸಪ್ಪ, ಉಮೇಶ್, ಸ್ವಾಮಿ, ರಂಗಸ್ವಾಮಿ ಇದ್ದರು.