Malenadu Mitra
ರಾಜ್ಯ ಶಿವಮೊಗ್ಗ ಸಾಗರ

ನಿರ್ಮಲ ತುಂಗಭದ್ರಾ ಅಭಿಯಾನ, ಜಲ ಜಾಗೃತಿಗೆ ಕೈಜೋಡಿಸಿದ ಹಲವು ಸಂಘಟನೆಗಳು

ಶಿವಮೊಗ್ಗ: ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಪರ್ಯಾವರಣ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಿರ್ಮಲ ನವೆಂಬರ್ ೪ರಿಂದ ಶೃಂಗೇರಿಯಿಂದ ಗಂಗಾವತಿ ಸಮೀಪದ ಕಿಷ್ಕಿಂದೆ ತನಕ ಬೃಹತ್ ಜಲಜಾಗೃತಿ-ಜನ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಲ ತುಂಗಭದ್ರ ಅಭಿಯಾನವು ೨೦೨೨ ಮತ್ತು ೨೦೨೩ರಲ್ಲಿ ನಡೆದಿತ್ತು. ೨೦೨೩ ಜನವರಿ ೨೧, ೨೨ ರಂದು ಗಾಜನೂರಿನಿಂದ ಶ್ರೀ ಕ್ಷೇತ್ರ ಕೂಡಲಿ ತನಕ ಎರಡು ದಿನಗಳ ನಿರ್ಮಲ ತುಂಗಾ ಪಾದಯಾತ್ರೆ ಸಹ ಹಮ್ಮಿಕೊಂಡು ಜಿಲ್ಲಾಡಳಿತ, ಸರ್ಕಾರ ಹಾಗೂ ಸಾರ್ವಜನಿಕರ ಗಮನವನ್ನು ಸೆಳೆಯಲು ಯಶಸ್ವಿಯಾಗಿತ್ತು. ನಿರ್ಮಲ ತುಂಗಾ ಅಭಿಯಾನವು ನಗರದಲ್ಲಿ ತುಂಗಾ ನದಿಗೆ ನೇರವಾಗಿ ಸೇರುತ್ತಿದ್ದ ನಗರದ ತ್ಯಾಜ್ಯ ನೀರಿನ ಸಮಸ್ಯೆಗೆ ಸಂಪೂರ್ಣ ಪರಿಹಾರ ಕಂಡುಕೊಳ್ಳಬೇಕೆಂದು ನಿರ್ಧರಿಸಿ ನಿರಂತರವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಇಲಾಖೆ ಹಾಗೂ ಜನ ಪ್ರತಿನಿಧಿಗಳೊಂದಿಗೆ ಅನೇಕ ಸಭೆ ನಡೆಸಿ ಸಮಸ್ಯೆ ಪರಿಹಾರದ ದಿಕ್ಕಿನಲ್ಲಿ ಒಂದಿಷ್ಟು ಪ್ರಗತಿ ಕಂಡುಕೊಳ್ಳಲಾಗಿದೆ ಎಂದರು.

ತುಂಗಾ ನದಿಯು ಶೃಂಗೇರಿ ಸಮೀಪದ ಗಂಗಡಿ ಕಲ್ಲು ಪ್ರದೇಶದಲ್ಲಿ ಹುಟ್ಟಿ, ಶೃಂಗೇರಿ, ತೀರ್ಥಹಳ್ಳಿ ಮುಂತಾದ ಪಟ್ಟಣಗಳಲ್ಲಿ ಹರಿದು ಬರುವಾಗ ವಸತಿ ಪ್ರದೇಶದ ಮಲೀನ ನೀರು ಯಾವುದೇ ನೀರು ಶುದ್ದೀಕರಣ ಘಟಕ ವ್ಯವಸ್ಥೆ ಇಲ್ಲದೆ ನೇರ ನದಿಗೆ ಕಲುಷಿತ ನೀರು ಸೇರುತ್ತಿರುವುದು ಶಿವಮೊಗ್ಗ ಭಾಗದವರಿಗೆ ದೊಡ್ಡ ಸಮಸ್ಯೆಯಾಗಿದೆ. ಅಂತೆಯೇ ಶಿವಮೊಗ್ಗದಿಂದ ಮುಂದಿನ ಪಟ್ಟಣ, ಗ್ರಾಮಗಳಲ್ಲೂ ತ್ಯಾಜ್ಯ ನೀರು ಸಂಸ್ಕರಣ ಘಟಕಗಳು ಇಲ್ಲದೆ ತುಂಗ ಭದ್ರಾ ನದಿಗೆ ನೇರವಾಗಿ ಸೇರುತ್ತಿರುವುದು ಆ ಭಾಗದ ಜನರು ನದಿಯ ನೀರನ್ನು ನೇರವಾಗಿ ಬಳಸಲು ಆಗದಂತೆ ಮಾಡಿವೆ. ಈ ಹಿಂದೆ ನಮ್ಮ ಸಂಸ್ಥೆಯು ತುಂಗಾ ನದಿಯ ನೀರು ಮತ್ತು ಕುಡಿಯುವ ಪೂರೈಕೆ ನೀರನ್ನು ಬೆಂಗಳೂರಿನ ಅತ್ಯಾಧುನಿಕ ಲ್ಯಾಬೋರೇಟರಲ್ಲಿ ಪರೀಕ್ಷೆಗೆ ನೀಡಿದಾಗ ತುಂಗಾ ನದಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ಅಂಶ ನಿಜಕ್ಕೂ ಆಘಾತಕಾರಿಯಾಗಿದೆ ಎಂದರು.

ಶೃಂಗೇರಿ, ಹರಿಹರಪುರ, ಬಾಳಗಾರು, ಕೂಡಲಿ, ಶಿವಮೊಗ್ಗ, ಹೊನ್ನಾಳಿ, ಹರಿಹರದ ವಿವಿಧ ಮಠಾಧೀಶರು ಈ ಪಾದಯಾತ್ರೆಗೆ ಬೆಂಬಲ ಸೂಚಿಸಿ ತಾವು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಗೌರಿಗದ್ದೆಯ ವಿನಯ್ ಗುರೂಜಿಯವರು ಪರಿಸರದ ಈ ಕಾಳಜಿಯ ಕೆಲಸದಲ್ಲಿ ತಾವು ಭಾಗಿಯಾಗುವುದಲ್ಲದೆ ತಮ್ಮ ಆಶ್ರಮದ ೨೦೦ಕ್ಕೂ ಹೆಚ್ಚು ಪರಿಸರಾಸಕ್ತರು ಮತ್ತು ಹೊನ್ನಾಳಿಯ ಶ್ರೀ ರಾಘವೇಂದ್ರ ಮಠ ಹಾಗೂ ಹಿರೇಕಲ್ ಮಠದ ಶ್ರೀಗಳು ತಮ್ಮ ಭಾಗದಲ್ಲಿನ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಾರೆ
ಪತ್ರಿಕಾಗೋಷ್ಠಿಯಲ್ಲಿ ಅಂದೋಲನದ ಪ್ರಮುಖರಾದ ಗಿರೀಶ್ ಪಟೇಲ್, ಎಂ.ಬಿ.ಅಶೋಕ್‌ಕುಮಾರ್, ಎಂ.ಶಂಕರ್, ದಿನೇಶ್ ಶೆಟ್, ಬಾಲಕೃಷ್ಣ ನಾಯ್ಡ್, ತ್ಯಾಗರಾಜ್ ಮಿತ್ಯಾಂತ, ಶ್ರೀಧರ್ ಉಡುಪ ಉಪಸ್ಥಿತರಿದ್ದರು.

ಕಲುಷಿತ ತುಂಗಭದ್ರೆಯನ್ನು ನಿರ್ಮಲ ತುಂಗಭದ್ರೆಯನ್ನಾಗಿಸುವ ಸಂಕಲ್ಪದೊಂದಿಗೆ ೪೦೦ ಕಿಮೀ. ಮಾರ್ಗದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ರಾಷ್ಟ್ರೀಯ ಸಂಚಾಲಕ ಬಸವರಾಜ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಪಾದಯಾತ್ರೆಯ ರೂಪುರೇಷೆಗಳನ್ನು ಈಗಾಗಲೇ ಮಾಡಲಾಗಿದೆ. ಶೃಂಗೇರಿ, ತೀರ್ಥಹಳ್ಳಿ, ಹೊನ್ನಾಳಿ, ಹರಿಹರ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಈಗಾಗಲೇ ಒಂದು ಸುತ್ತಿನ ಸಭೆಯನ್ನು ಮಾಡಿ ಸ್ಥಳೀಯ ತಂಡ ಜೋಡಣೆಗಳ ಕಾರ್ಯ ಸಹ ಆಗುತ್ತಿದೆ

-ಪ್ರೊ.ಬಿ.ಎಂ.ಕುಮಾರಸ್ವಾಮಿ

Ad Widget

Related posts

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಗೌರವ ಡಾಕ್ಟರೇಟ್

Malenadu Mirror Desk

ಸಿಗಂದೂರು ದೇಗುಲ ಹೋಟೆಲ್ ಕಟ್ಟಡ ತೆರವಿಗೆ ಕೋರ್ಟ್ ಆದೇಶ

Malenadu Mirror Desk

ದಾರ್ಶನಿಕರ ಬಗ್ಗೆ ಶಾಲೆಗಳಲಿ ಉಪನ್ಯಾಸದ ಅಗತ್ಯವಿದೆ: ಮಧುಬಂಗಾರಪ್ಪ , ನಾರಾಯಣಗುರು,ನುಲಿಯ ಚಂದಯ್ಯ ಜಯಂತಿಯಲ್ಲಿ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.