ಶಿವಮೊಗ್ಗ: ಶರಾವತಿ, ಚಕ್ರಾ, ವರಾಹಿ, ಸಾವೆಹಕ್ಲು, ತುಂಗಾ ಮತ್ತು ಭದ್ರಾ ಅಣೆಕಟ್ಟೆಗಳಿಗೆ ಭೂಮಿ ತ್ಯಾಗ ಮಾಡಿದ ಕಾಡಂಚಿನ ಜನರ ಬದುಕು ತೂಗುಗತ್ತಿಯ ಮೇಲಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಗರದ ಎಸಿ ಕಚೇರಿ ಆವರಣದಲ್ಲಿ ಅ.21 ರಿಂದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಮಲೆನಾಡಿನ ಚುನಾಯಿತ ಪ್ರತಿನಿಧಿಗಳು ನಿದ್ರೆಯಿಂದ ಎಚ್ಚರಗೊಂಡಿಲ್ಲ. ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಇಲ್ಲಿನ ಎಲ್ಲಾ ರಾಜಕಾರಣಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಅರಣ್ಯ ರಾಜ್ಯ ಸಚಿವರಿಗೆ ಮಲೆನಾಡಿನ ಸಂಕಟದ ಬಗ್ಗೆ ಅರಿವಿಲ್ಲ. ಇಲ್ಲಿ ಮುಳುಗಡೆ ಸಂತ್ರಸ್ತರ ಒಡಲು ಹೊತ್ತಿ ಉರಿಯುತ್ತಿದೆ. ಸರ್ಕಾರದ ಹಂತದಲ್ಲಿ ಮುಳುಗಡೆ ರೈತರ ಸಮಸ್ಯೆ ಚರ್ಚೆ ನಡೆದು, ಪರಿಹಾರ ಲಭಿಸುವವರೆಗೆ ಹೋರಾಟ ಮುಂದುವರಿಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಆಯನೂರಿನಿಂದ ಶಿವಮೊಗ್ಗದವರೆಗೆ ಪಾದ ಯಾತ್ರೆ ಮಾಡಿ ಎರಡು ವರ್ಷ ತುಂಬಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮಸ್ಯೆಯ ಬಗ್ಗೆ ಅರಿವೇ ಇಲ್ಲ. ಈ ಹಿಂದೆ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು, ಸಭೆ ನಡಸಿ, ಕೇಂದ್ರದ ಹಂತದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿ, ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. ಇದೆಲ್ಲದಕ್ಕೂ ಈ ಹೋರಾಟದಲ್ಲಿ ಉತ್ತರ ಕಂಡುಕೊಳ್ಳಲಿದ್ದೇವೆ. ಬೇಡಿಕೆಗಳು ಈಡೇರದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಪ್ರತ್ಯೇಕ ರಾಜ್ಯ ಅನಿವಾರ್ಯ: ದಿನೇಶ್ ಶಿರವಾಳ
ಡಾ.ಎಚ್.ಗಣಪತಿಯಪ್ಪ ಸ್ಥಾಪಿತ ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಅನೇಕ ಪಾದಯಾತ್ರೆಗಳು, ಜನಪ್ರತಿನಿಧಿಗಳ ಆಶ್ವಾಸನೆಗಳಿಗೆ ತಲೆದೂಗಿ, ಒಪ್ಪಿಕೊಂಡು ಮೋಸ ಹೋಗಿದ್ದಾಗಿದೆ. ಮುಂದಿನ ದಿನದಲ್ಲಿ ಈ ರೀತಿಯ ಸುಳ್ಳು ಆಶ್ವಾಸನೆಗಳಿಗೆ ಜಗ್ಗುವುದಿಲ್ಲ. ಶರಾವತಿ, ಚಕ್ರಾ, ವರಾಹಿ, ಸಾವೆಹಕ್ಲು, ತುಂಗಭದ್ರಾ ಮುಳುಗಡೆ ಸಂತ್ರಸ್ಥರು ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನು ಮತ್ತು ಮನೆಗಳಿಗೆ ತಕ್ಷಣ ಹಕ್ಕು ಪತ್ರ ಕೊಡಬೇಕು. ಈಗಾಗಲೇ ಕೊಟ್ಟಿರುವ ಹಕ್ಕು ಪತ್ರಗಳನ್ನು ವಜಾ ಮಾಡಲು ಸರ್ಕಾರ ಕ್ರಮ ಕೈಗೊಂಡಿರುವ ಆದೇಶವನ್ನು ಹಿಂಪಡೆಯಬೇಕು. ಹೀಗೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ ಎಂದಿದ್ದಾರೆ.
ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಮಲೆನಾಡಿನ ಜನರನ್ನು ಬ್ರಿಟೀಷರಿಗಿಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿವೆ. ಬೆಳಗಾವಿಯಿಂದ ಕೊಡಗು ಜಿಲ್ಲೆ ಒಳಗೊಂಡು ಪ್ರತ್ಯೇಕ ರಾಜ್ಯ ರಚಿಸಬೇಕು ಎನ್ನುವ ಬಗ್ಗೆ ಅನೇಕ ಬಾರಿ ಚರ್ಚಿಸಲಾಗಿದೆ. ಆಳುವ ಸರ್ಕಾರಗಳು ರೈತರ ಪರ ನಿರ್ಲಕ್ಷ್ಯ ಭಾವ ಹೊಂದಿವೆ. ಆದ್ದರಿಂದ, ಮಲೆನಾಡಿಗೆ ಪ್ರತ್ಯೇಕ ರಾಜ್ಯದ ಅವಶ್ಯಕ ಬೇಡಿಕೆಯ ಬಗ್ಗೆ ರೂಪುರೇಷೆ ಸಿದ್ಧಪಡಿಸುವ ಅನಿವಾರ್ಯತೆಯಿದೆ.
– ದಿನೇಶ್ ಶಿರವಾಳ : ರೈತ ಹೋರಾಟಗಾರ
ಇನ್ನು ಮುಳುಗಡೆ ಸಂತ್ರಸ್ತರು ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ಸಂಚಾಲಕ ವಿ.ಜಿ.ಶ್ರೀಕರ ಮಾತನಾಡಿ, ಶರಾವತಿಗೆ ಸಂಬಂಧಿಸಿದಂತೆ 1972ರಲ್ಲಿ ಸರ್ಕಾರ ರಚಿಸಿದ ಕಾರ್ಯಪಡೆ (ಟಾಸ್ಕ್ ಫೋರ್ಸ್)ಯನ್ನು ಹಿಂಪಡೆಯಲಾಯಿತು. ಇದು ಮಲೆನಾಡಿನ ಮುಳುಗಡೆ ರೈತರಿಗೆ ಮಾಡಿದ ಐತಿಹಾಸಿಕ ಅನ್ಯಾಯ. ಇಲ್ಲಿ ಶರಾವತಿಯಲ್ಲಿ ಮುಳುಗಡೆಯಾದ ಕುಟುಂಬಗಳ ಪಟ್ಟಿ ಲಭ್ಯವಿದೆ. ಆದರೆ, ಈ ಕುಟುಂಬಗಳನ್ನು ಅವಲಂಭಿಸಿರುವ ಲಕ್ಷಾಂತರ ಜನರು ಬೇರೆ- ಬೇರೆ ಕಡೆಗಳಲ್ಲಿ ಚದುರಿ ಹೋಗಿದ್ದಾರೆ. ಸಂತ್ರಸ್ತರನ್ನು ಲಾರಿಯಲ್ಲಿ ಕರೆತಂದು ಕಾಡಿನಲ್ಲಿ ಬಿಟ್ಟರು. ಆದರೆ, ಸರ್ಕಾರ ಈವರೆಗೂ ಸಹ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಕೊಡಿಸುವಲ್ಲಿ ವಿಫಲವಾಗಿದ್ದು, ಎಲ್ಲಾ ವಿಚಾರದಲ್ಲೂ ಸಹ ಕೈಚೆಲ್ಲಲಾಗಿದೆ. ಇದಕ್ಕೆ ಉತ್ತರ ಕಂಡುಕೊಳ್ಳಲೇಬೇಕು ಎಂದರು.
ರೈತ ನಾಯಕರಾದ ಶಿವಾನಂದ ಕುಗ್ವೆ, ವಿ.ಜಿ.ಶ್ರೀಕರ, ರಾಷ್ಟ್ರೀಯ ಈಡಿಗ ಮಹಾಮಂಡಳ ತಾಲೂಕು ಅಧ್ಯಕ್ಷ ಮಂಜುನಾಥ, ಬೆಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಪ್ರಜಾತತ್ವ ಮಾನವ ಹಕ್ಕು ಆಯೋಗದ ಎಂ.ಎಂ. ರಾಘವೇಂದ್ರ ಸಂಪೋಡಿ, ರೈತರಾದ ಎಚ್.ಕೆ. ಸ್ವಾಮಿ ಸುದ್ದಿಗೋಷ್ಟಿಯಲ್ಲಿದ್ದರು