ಶಿವಮೊಗ್ಗ : ತೀರ್ಥಹಳ್ಳಿ ತಾಲೂಕು ದಂಡಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಜಕ್ಕಣ್ಣ ಗೌಡರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ಸಮೀಪದ ಲಾಡ್ಜ್ ವೊಂದರಲ್ಲಿ ತಹಶೀಲ್ದಾರ್ ಜಿ.ಬಿ.ಜಕ್ಕಣ್ಣ ಗೌಡರ್ ಮೃತದೇಹ ಪತ್ತೆಯಾಗಿದೆ.
ಹೈಕೋರ್ಟ್ ಕೆಲಸದ ನಿಮಿತ್ತ ತಹಶೀಲ್ದಾರ್ ಮಂಗಳವಾರ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ್ದರು. ಫೋನ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ನೌಕರರು ಸಂಪರ್ಕ ಸಾಧಿಸುವ ಪ್ರಯತ್ನ ನಡೆಸಿದ್ದು, ಮೃತದೇಹ ಪತ್ತೆಯಾಗಿದೆ.
ತಹಶೀಲ್ದಾರ್ ಜಕ್ಕಣ್ಣ ಗೌಡರ್ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ತಹಶೀಲ್ದಾರ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಶಾಸಕ ಆರಗ ಜ್ಞಾನೇಂದ್ರ
ಇನ್ನು ನ್ಯಾಯಾಲಯದ ಕೆಲಸದ ಸಲುವಾಗಿ ಬೆಂಗಳೂರಿಗೆ ತೆರಳಿದ್ದ ತೀರ್ಥಹಳ್ಳಿ ತಹಶೀಲ್ದಾರ್ ಜಕ್ಕಣ್ಣ ಗೌಡರ್ ತಾವು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಆಕಸ್ಮಿಕ ಮರಣ ಹೊಂದಿರುವುದು ತೀವ್ರ ಆಘಾತ ತಂದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತಹಶೀಲ್ದಾರ್ ಪಾರ್ಥಿವ ಶರೀರ ಇದ್ದ ಬೆಂಗಳೂರಿನ ಹೋಟೆಲ್ ಗೆ ಭೇಟಿ ನೀಡಿದ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ, ತಹಶೀಲ್ದಾರ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.