ಶಿವಮೊಗ್ಗ : ಖಾಸಗಿ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ತೀರ್ಥಹಳ್ಳಿ ತಾಲೂಕು ತನಿಕಲ್‌ನ ಪಾಂಡ್ಯ ಗ್ರಾಮದ ಪ್ರಥಮ್ ಮೃತ ವಿದ್ಯಾರ್ಥಿ.
ಮಂಗಳೂರಿನಿಂದ ಸಕ್ರೆಬೈಲು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಜ್ಜವಳ್ಳಿಯ ಬಳಿ ಬೈಕ್ ಗೆ ಡಿಕ್ಕಿಯಾಗಿದೆ. ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದ ಡಿಪ್ಲೋಮಾ ವಿದ್ಯಾರ್ಥಿ ಪ್ರಥಮ್ ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಪ್ರಥಮ್‌ನನ್ನು ಕೂಡಲೇ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯೆ ಆತ ಮೃತಪಟ್ಟಿರುವುದನ್ನು ವೈದ್ಯರು ಖಚಿತ ಪಡಿಸಿದ್ದಾರೆ.
ಬೈಕ್ ಸಂಪೂರ್ಣ ಜಖಂ: ಬಸ್ ನ ಮುಂಭಾಗ ನುಜ್ಜುಗುಜ್ಜು.
ಇನ್ನು ಅಘಪಾತದ ಭೀಕರ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಬೈಕ್ ಸವಾರ ಏಕಾಏಕಿ ಮುಖ್ಯ ರಸ್ತೆ ಪ್ರವೇಶಿಸಿರುವುದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಬಸ್ ನ ಮುಂಭಾಗ ಸಹ ನುಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ಮಾಳೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ.