ಶಿವಮೊಗ್ಗ : ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಕ್ಕೆ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ನವೆಂಬರ್ 23 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.
ಶಿವಮೊಗ್ಗ ಜಿಲ್ಲೆಯ ಏಳು ತಾಲೂಕಿನ ವ್ಯಾಪ್ತಿಯಲ್ಲಿ 15 ಗ್ರಾಮ ಪಂಚಾಯತ್ ಗಳ 19 ಸ್ಥಾನಗಳಿಗೆ ಉಪ ಚುನಾವಣೆ ನಡೆಸುವ ಸಂಬಂಧ ನವೆಂಬರ್ 6 ರಂದು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದಾರೆ.
ನ.12 ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ನ.15 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ನ.26ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಶಿವಮೊಗ್ಗ ತಾಲೂಕಿನ ಕೋಟೆಗಂಗೂರು, ಸಾಗರದ ಕುದರೂರು, ಭದ್ರಾವತಿಯ ಬಾರಂದೂರು, ಅರಕೆರೆ, ತೀರ್ಥಹಳ್ಳಿಯ ತೀರ್ಥ ಮತ್ತೂರು, ಹೊಸನಗರದ ಎಂ.ಗುಡ್ಡೆಕೊಪ್ಪ, ಶಿಕಾರಿಪುರದ ಮಾರವಳ್ಳಿ, ಹಿತ್ತಲ, ಸುಣ್ಣದಕೊಪ್ಪ, ತರಲಘಟ್ಟ, ಸೊರಬ ತಾಲ್ಲೂಕಿನ ಹೊಸಬಾಳೆ, ಜಡೆ, ಭಾರಂಗಿ ಗ್ರಾಮ ಪಂಚಾಯಿತಿಗಳ ತಲಾ ಒಂದು ಸ್ಥಾನ, ಭದ್ರಾವತಿಯ ಮೈದೊಳಲು, ಅರಹತೊಳಲು ಗ್ರಾಮ ಪಂಚಾಯಿತಿಗಳ ತಲಾ ಮೂರು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದ ಒಟ್ಟು 531 ಗ್ರಾಮ ಪಂಚಾಯಿತಿಗಳ 641 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಸಂಬಂಧ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.