ಶಿವಮೊಗ್ಗ : ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಧಾರಕಾರ ಮಳೆ ಇದೀಗ ಸ್ವಲ್ಪ ಬಿಡುವು ನೀಡಿದೆ. ಆದರೇ, ಮಳೆ ನಿಂತರೂ ನೆರೆ ಅವಾಂತರ ಮಾತ್ರ ಜಿಲ್ಲೆಯಲ್ಲಿ ಮುಂದುವರಿದಿವೆ.
ಯಲ್ಲೋ ಅಲರ್ಟ್ ನಡುವೆ ಸುರಿದ ಭಾರೀ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಹಲವು ಮನೆಗಳು ಧರಾಶಾಯಿಯಾಗಿವೆ.
ಶಿವಮೊಗ್ಗ ನಗರದ ಹಲವು ಬಡಾವಣೆಯಲ್ಲಿ ಚರಂಡಿ, ರಾಜಕಾಲುವೆ ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗಿದೆ. ಮಾತ್ರವಲ್ಲದೇ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ, ಸಾಗರ, ಹೊಸನಗರ ಭಾಗದಲ್ಲಿ ಭಾರೀ ಮಳೆಯಾಗಿದ್ದು, ತೋಟ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಉಕ್ಕಿ ಹರಿದ ತುಂಗಾ ಚಾನಲ್ – ಮನೆಗಳಿಗೆ ನುಗ್ಗಿದ ನೀರು
ನಗರದ ಮಧ್ಯ ಭಾಗದಲ್ಲಿ ಹಾದು ಹೋಗುವ ತುಂಗಾ ಚಾನಲ್ ಭಾರೀ ಮಳೆಗೆ ಭರ್ತಿಯಾಗಿ ಉಕ್ಕಿ ಹರಿದಿದೆ. ಹೊಸಮನೆ, ವೆಂಕಟೇಶ ನಗರ ಭಾಗದಲ್ಲಿ ನೀರು ಉಕ್ಕಿ ಹರಿದಿದೆ.
ಹಲವು ಮನೆಗಳಿಗೆ ನೀರು ನುಗ್ಗಿದ್ದರೇ, ರಸ್ತೆಯ ಮೇಲೆ 2-3 ಅಡಿ ನೀರು ನಿಲ್ಲುವಂತಾಗಿದೆ. ಅದೇ ರೀತಿ ಗೋಪಾಲಗೌಡ ಬಡಾವಣೆ ಸಿ ಬ್ಲಾಕ್, ಎಲ್ ಬಿಎಸ್ ನಗರ, ಟ್ಯಾಂಕ್ ಮೊಹಲ್ಲಾ, ಅಣ್ಣಾನಗರದಲ್ಲಿ ರಸ್ತೆ ಮೇಲೆ ನೀರು ಹರಿದಿದ್ದು, ಕೆಲವೆಡೆ ಮನೆಗಳಿಗೂ ನೀರು ನುಗ್ಗಿದೆ. ವಾಹನಗಳು ನೀರಿನಲ್ಲಿ ಅರ್ಧ ಮುಳುಗಿವೆ. ಮನೆಯಿಂದ ನೀರು ಹೊರಗೆ ಹಾಕಲು ಜನರು ಹರಸಾಹಸ ಪಡುವಂತಾಗಿದೆ.
ಮಳೆ ಹಾನಿ ಪ್ರದೇಶಕ್ಕೆ ತಹಶೀಲ್ದಾರ್ ಭೇಟಿ- ಪರಿಶೀಲನೆ.
ಭಾರಿ ಮಳೆಗೆ ಶಿವಮೊಗ್ಗ ನಗರದ ವಿವಿಧೆಡೆ ಭಾರಿ ಹಾನಿ ಉಂಟಾಗಿದೆ. ಮಳೆಯಿಂದ ಹಾನಿ ಉಂಟಾದ ಪ್ರದೇಶಗಳಿಗೆ ತಹಶೀಲ್ದಾರ್ ಗಿರೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಲ್‌ಬಿಎಸ್ ನಗರದಲ್ಲಿ ಚಾನಲ್ ತುಂಬಿ ನೀರು ಅಕ್ಕಪಕ್ಕದ ಮನೆಗಳಿಗೆ ನುಗ್ಗಿದ್ದು, ತಹಶೀಲ್ದಾರ್ ಗಿರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.