ಶಿವಮೊಗ್ಗ : ನಾಡು ಕಂಡ ವರ್ಣರಂಜಿತ ರಾಜಕಾರಣಿ, ಮಾಜಿ ಸಿಎಂ ಎಸ್.ಬಂಗಾರಪ್ಪ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 26 ರಂದು “ಬಂಗಾರ ಪ್ರಶಸ್ತಿ” ಪ್ರದಾನ, ವಿಚಾರ ಸಂಕಿರಣ ಹಾಗೂ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಎಸ್. ಬಂಗಾರಪ್ಪ ವಿಚಾರ ವೇದಿಕೆ ಹಾಗೂ
ಎಸ್.ಬಂಗಾರಪ್ಪ ಫೌಂಡೇಷನ್ ವತಿಯಿಂದ ಸೊರಬದ ಬಂಗಾರ ಧಾಮದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮೂವರು ಹಿರಿಯರಿಗೆ “ಬಂಗಾರ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ ಎಂದು ವಿಚಾರ ವೇದಿಕೆಯ ಅಧ್ಯಕ್ಷ ವೇಣುಗೋಪಾಲ ನಾಯ್ಕ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಬಂಗಾರಪ್ಪರನ್ನು ಬಿಟ್ಟು ಕರ್ನಾಟಕದ ರಾಜಕೀಯ ಇತಿಹಾಸ ಊಹಿಸಲು ಸಾಧ್ಯವಿಲ್ಲ. ನಾಡಿನ ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ಬಂಗಾರಪ್ಪರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಅ.26ರ ಬೆಳಿಗ್ಗೆ 10.30ಕ್ಕೆ ಸೊರಬದ ಡಾ. ರಾಜಕುಮಾರ್ ರಂಗಮಂದಿರದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಎಲ್.ಎನ್ ಮುಕುಂದರಾಜ್ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಂತಕರಾದ ಸಿರಾಜ್ ಅಹಮ್ಮದ್ ಹಾಗೂ ರವಿಕುಮಾರ್ ಅವರು ಬಂಗಾರಪ್ಪರ ಸಮಾಜವಾದಿ ಚಿಂತನೆಗಳು ಹಾಗೂ ಅವುಗಳ ಇಂದಿನ ಪ್ರಸ್ತುತತೆ ಕುರಿತ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮೂವರು ಹಿರಿಯ ಸಾಧಕರು “ಬಂಗಾರ ಪ್ರಶಸ್ತಿ” ಗೆ ಆಯ್ಕೆ
ಎಸ್.ಬಂಗಾರಪ್ಪ ವಿಚಾರ ವೇದಿಕೆ ನೀಡುವ 2024ನೇ ಸಾಲಿನ “ಸೇವಾ ಬಂಗಾರ ಪ್ರಶಸ್ತಿ” ಗೆ ಸುಮಂಗಲಿ ಸೇವಾಶ್ರಮದ ಹೆಚ್.ಜಿ. ಸುಶೀಲಮ್ಮ, “ಸಾಹಿತ್ಯ ಬಂಗಾರ ಪ್ರಶಸ್ತಿ”ಗೆ ಸಾಹಿತಿ ಕುಂ. ವೀರಭದ್ರಪ್ಪ ಹಾಗೂ “ಕಲಾ ಬಂಗಾರ ಪ್ರಶಸ್ತಿ”ಗೆ ಕಲಾವಿದೆ ಪ್ರತಿಭಾ ನಾರಾಯಣ್ ಆಯ್ಕೆಯಾಗಿದ್ದು, ‘ಪ್ರಶಸ್ತಿಯು ತಲಾ 1 ಲಕ್ಷ ನಗದು, ತಾಮ್ರ ಫಲಕ ಒಳಗೊಂಡಿದ್ದು, ಗೃಹ ಸಚಿವ ಜಿ. ಪರಮೇಶ್ವರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅದೇ ದಿನ ಸಂಜೆ 5 ಗಂಟೆಗೆ ಸೊರಬದ ರಂಗಮಂದಿರದಿಂದ ಬಂಗಾರಧಾಮ ವರೆಗೆ ಬೃಹತ್ ಮೆರವಣಿಗೆ ಏರ್ಪಡಿಸಿದ್ದು, ನೂರಾರು ಜಾನಪದ ಕಲಾವಿದರೊಂದಿಗೆ ಬಂಗಾರಪ್ಪರ ಅಭಿಮಾನಿಗಳು ಹೆಜ್ಜೆ ಹಾಕಲಿದ್ದಾರೆ. ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಗೃಹ ಸಚಿವ ಡಾ ಜಿ.ಪರಮೇಶ್ವರ್, ನಟ ಶಿವರಾಜ್ ಕುಮಾರ್, ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ, ಪ್ರಗತಿಪರ ರೈತ ಹಾಗೂ ಬಂಗಾರಪ್ಪರ ಒಡನಾಡಿ ಬಸಪ್ಪ ಅಂಕರವಳ್ಳಿ, ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಭಾಗಿಯಾಗಲಿದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮದ ನಂತರ 13 ಜಿಲ್ಲೆಗಳಿಂದ ಆಗಮಿಸುವ ವಿವಿಧ ಜಾನಪದ ಕಲಾತಂಡಗಳಿಂದ ಬಂಗಾರಪ್ಪನವರು ಹೆಚ್ಚಿನ ಆಸಕ್ತಿ ಹೊಂದಿದ್ದ ಜಾನಪದ ಜಾತ್ರೆ ನಡೆಯಲಿದೆ. ಹಳ್ಳಿ ಬ್ಯಾಂಡ್ ಸಮಿತಕ್ಕ ಮತ್ತು ಜಾನಪದ ಗಾರುಡಿಗ ರಂಗಸ್ವಾಮಿ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದರು.
ಬಂಗಾರಪ್ಪರ ಕುರಿತು ಶಾಲಾ ಮಕ್ಕಳಿಗೆ ಚರ್ಚೆ-ಪ್ರಬಂಧ ಸ್ಫರ್ಧೆ:
ಮಾಜಿ ಸಿಎಂ ಬಂಗಾರಪ್ಪರ ಜನ್ಮದಿನದ ಪೂರ್ವಭಾವಿಯಾಗಿ ಅಕ್ಟೋಬರ್ 24 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ವ್ಯಾಪ್ತಿಯ ಪ್ರೌಢ ಶಾಲೆಯ ಮಕ್ಕಳಿಗೆ ಎಸ್. ಬಂಗಾರಪ್ಪನವರ ಕುರಿತು ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಜಿಲ್ಲೆಯ 7 ತಾಲೂಕು ವ್ಯಾಪ್ತಿಯಲ್ಲಿ ತಲಾ 3 ವಿದ್ಯಾರ್ಥಿಗಳಂತೆ ಚರ್ಚೆ ಹಾಗೂ ಪ್ರಬಂಧ ಸ್ಫರ್ಧೆ ವಿಜೇತರಿಗೆ ಅ.26 ರ ಸಂಜೆಯ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಬಹುಮಾನ ವಿತರಣೆ ಮಾಡಲಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಜಿ.ಡಿ.ಮಂಜುನಾಥ್, ಮಧುಚಂದ್ರ, ಎ.ಆರ್. ಶಮಂತ್ ಉಪಸ್ಥಿತರಿದ್ದರು.